'ಕೊಲೆ ಸುಪಾರಿ ನೀಡಿದ ಆರೆಸ್ಸೆಸ್ ಮುಖಂಡನನ್ನು ಬಂಧಿಸಿ'
ಕುಂದಾಪುರ, ಮಾ.4: ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೊಲೆಗೆ ಒಂದು ಕೋಟಿ ರೂಪಾಯಿ ಸುಪಾರಿ ನೀಡುವುದಾಗಿ ಪರೋಕ್ಷ ಹೇಳಿಕೆ ಕೊಟ್ಟ ಆರೆಸ್ಸೆಸ್ ಮುಖಂಡ ಚಂದ್ರಾವತ್‌ನನ್ನು ಬಂಧಿಸದಿರುವುದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿಯಾಗಿದೆ ಎಂದು ಸಿಪಿಎಂ ಮುಖಂಡ ಎಚ್.ನರಸಿಂಹ ಹೇಳಿದ್ದಾರೆ.
ಕುಂದಾಪುರದಲ್ಲಿ ಇಂದು ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು. ಇಂತಹವರನ್ನು ಪ್ರಧಾನಿಗಳು ರಕ್ಷಿಸುತ್ತಿದ್ದಾರೆ. ದೇಶದ ಐಕ್ಯತೆ, ಸಮಗ್ರತೆಗೆ ಕೆಡುಕು ಉಂಟು ಮಾಡುತ್ತಿರುವವರೆ ದೇಶದ ಚುಕ್ಕಾಣಿ ಹಿಡಿದರೆ ದೇಶವಾಸಿಗಳ ಪರಿಸ್ಥಿತಿ ಏನಾಗಬಹುದು ಎಂಬುವುದರ ಸೂಚನೆ ದಿನದಿಂದ ದಿನಕ್ಕೆ ಗೋಚರಿಸುತ್ತಿದೆ. ಇಂತಹ ಕೊಲೆಗಡುಕ ಸಂಸ್ಕೃತಿಯನ್ನು ಎಲ್ಲರೂ ವಿರೋಧಿಸಬೇಕಾಗಿದೆ ಎಂದರು.
ಸುರೇಶ್ ಕಲ್ಲಾಗರ ಮಾತನಾಡಿ, ಕೇರಳವು ದೇಶದಲ್ಲೇ ಕೋಮು ಸೌಹಾ ರ್ದತೆಗೆ ಹೆಸರಾದ ರಾಜ್ಯ. ಈ ಸೌಹಾರ್ದತೆಗೆ ಸಿಪಿಎಂ ಪಕ್ಷದ ತ್ಯಾಗವೇ ಕಾರಣ. ಇಂತಹ ಸೌಹಾರ್ದತೆ ಹಾಳುಗೆಡೆದು ರಾಜಕೀಯ ಅಧಿಕಾರ ಪಡೆಯಲು ಆರೆಸ್ಸೆಸ್ ಹಗಲು ರಾತ್ರಿ ಹರಸಾಹಸ ಪಡುತ್ತಿದೆ. ರಾಜಕೀಯ ಕ್ಕಾಗಿ ಹಿಂದೂ ಪದ ದುರ್ಬಳಕೆ ಮಾಡಿಕೊಂಡು ಸಿಪಿಎಂ ಕಾರ್ಯಕರ್ತರ ಮೇಲೆ ಸುಳ್ಳು ಆಪಾದನೆ ಮಾಡಲಾಗುತ್ತಿದೆ. ಫ್ಯಾಸಿಸ್ಟ್ ಗೋಬಲ್ನ ತಂತ್ರವನ್ನು ಬಳಸುತ್ತಿದೆ ಎಂದು ಟೀಕಿಸಿದರು.
ಈ ಸಂದರ್ಭದಲ್ಲಿ ಸಿಪಿಎಂ ಮುಖಂಡರಾದ ಕೆ.ಶಂಕರ್, ಮಹಾಬಲ ವಡೇರಹೋಬಳಿ, ಕೆ.ಎಂ.ಬಾಲಕೃಷ್ಣ, ರಮಾನಾಥ ಭಂಡಾರಿ, ಡಿ.ಲಕ್ಷ್ಮಣ್ ಮೊದಲಾದವರು ಉಪಸ್ಥಿತರಿದ್ದರು.