ಬಂಟ್ವಾಳ: ಅಕ್ರಮ ಮರಳು ಅಡ್ಡೆಯ ಮೇಲೆ ದಾಳಿ
ಬಂಟ್ವಾಳ, ಮಾ.4: ತುಂಬೆ ಗ್ರಾಮದ ಕೆಳಗಿನ ತುಂಬೆ ನೇತ್ರಾವತಿ ನದಿ ತೀರದಲ್ಲಿ ದಾಸ್ತಾನಿಟ್ಟಿದ್ದ ಅಕ್ರಮ ಮರಳು ಅಡ್ಡೆಗೆ ಶುಕ್ರವಾರ ರಾತ್ರಿ ಬಂಟ್ವಾಳ ಗ್ರಾಮಾಂತರ ಪೊಲೀಸರು ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಸುಮಾರು 27 ಬೋಡ್‌ಗಳ ಸಹಿತ 130 ಲೋಡ್‌ಗೂ ಹೆಚ್ಚು ಮರಳನ್ನು ಮುಟ್ಟುಗೋಲು ಹಾಕಿದ್ದು ಇದರ ಮೌಲ್ಯ ಸುಮಾರು 17 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ. ಬೊರಸೆ ಅವರ ಮಾರ್ಗದರ್ಶನದಲ್ಲಿ ಪ್ರೊಬೆಷನರಿ ಐಪಿಎಸ್ ಅಧಿಕಾರಿ ಡಿ.ಎಲ್.ನಾಗೇಶ್, ಬಂಟ್ವಾಳ ಗ್ರಾಮಾಂತರ ಠಾಣೆಯ ಎಸ್ಸೈ ಮತ್ತವರ ಸಿಬ್ಬಂದಿಗಳು ದಾಳಿ ಕಾರ್ಯಾಚರಣೆ ನಡೆಸಿದ್ದರು.
ಈ ಸಂದರ್ಭದಲ್ಲಿ ಇಬ್ಬರು ಕಾರ್ಮಿಕರಾದ ಆಸಿಫ್ ಮತ್ತು ಅನ್ಸಾರ್ ಎಂಬವರನ್ನು ಬಂಧಿಸಿ ಬಳಿಕ ಬಿಡುಗಡೆಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
ನದಿ ಕಿನಾರೆಯಲ್ಲಿ ಬಿಹಾರ ಮೂಲದ ಕಾರ್ಮಿಕರು ಶೆಡ್ ನಿರ್ಮಿಸಿ ಅಲ್ಲೇ ವಾಸ್ತವ್ಯವಿದ್ದು ಅಕ್ರಮ ಮರಳು ಕಾರ್ಮಿಕರಾಗಿ ದುಡಿಯುತ್ತಿದ್ದರು ಎಂದು ತಿಳಿದು ಬಂದಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಸಹಿತ ಸ್ಥಳೀಯ ಗ್ರಾಮ ಕರಣಿಕರು ದಾಳಿಯಲ್ಲಿ ಭಾಗವಹಿಸಿದ್ದರು.