×
Ad

ಛತ್ತೀಸ್‌ಗಢ: ಸಾರಾಯಿ ನಿಷೇಧಕ್ಕೆ ಕಾಂಗ್ರೆಸ್ ಒತ್ತಾಯ

Update: 2017-03-04 20:42 IST

ರಾಯ್‌ಪುರ, ಮಾ.4: ರಾಜ್ಯದಲ್ಲಿ ಸಾರಾಯಿಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಒತ್ತಾಯಿಸಿ ಛತ್ತೀಸ್‌ಗಢ ವಿಧಾನಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ಗೊಂದಲದ ವಾತಾವರಣ ಸೃಷ್ಟಿಸಿದರು. ಪ್ರಶ್ನೋತ್ತರ ಅವಧಿ ಮುಗಿದಾಕ್ಷಣ ವಿಷಯ ಪ್ರಸ್ತಾಪಿಸಿದ ಹಿರಿಯ ಕಾಂಗ್ರೆಸ್ ಮುಖಂಡ ಸತ್ಯನಾರಾಯಣ್ ಶರ್ಮ, ಉಪವಿಭಾಗೀಯ ಪೀಠದ ನ್ಯಾಯಾಧೀಶರೋರ್ವರು ಸರಕಾರದ ಸಾರಾಯಿ ಮಾರಾಟ ಅಂಗಡಿಯನ್ನು ಆರಂಭಿಸಲು ಅವಕಾಶ ನೀಡುವಂತೆ ಓರ್ವ ಪಂಚಾಯತ್ ಕಾರ್ಯದರ್ಶಿಗೆ ಫೋನ್ ಕರೆ ಮಾಡಿ ಒತ್ತಡ ಹೇರುತ್ತಿದ್ದು ಅವರನ್ನು ನಿಂದಿಸಿದ್ದಾರೆ. ಇಂತಹ ಹಲವಾರು ಘಟನೆಗಳು ರಾಜ್ಯಾದ್ಯಂತ ನಡೆಯುತ್ತಿದೆ ಎಂದು ದೂರಿದರು. ಇವರ ನಡುವಿನ ಸಂಭಾಷಣೆಯ ಸಿಡಿ ತನ್ನಲ್ಲಿದ್ದು ಸ್ಪೀಕರ್ ಅನುಮತಿ ನೀಡಿದರೆ ಒದಗಿಸಲು ಸಿದ್ದ ಎಂದು ಕಾಂಗ್ರೆಸ್ ಮುಖಂಡ ಭೂಪೇಶ್ ಬಾೆಲ್ ತಿಳಿಸಿದರು.

  ಗ್ರಾಮದಲ್ಲಿ ಸಾರಾಯಿ ಅಂಗಡಿ ತೆರೆಯಲು ಅನುವು ಮಾಡಿಕೊಡುವಂತೆ ಸರಪಂಚರು ಮತ್ತು ಪಂಚಾಯತ್ ಕಾರ್ಯದರ್ಶಿಗಳ ಮೇಲೆ ಒತ್ತಡ ಹೆಚ್ಚುತ್ತಿದ್ದು ವಿರೋಧಿಸಿದವರಿಗೆ ಪೊಲೀಸರ ಮೂಲಕ ಕಿರುಕುಳ ನೀಡಲಾಗುತ್ತಿದೆ ಎಂದು ಕಾಂಗ್ರೆಸ್ ಸದಸ್ಯರು ದೂರಿ, ವಿಷಯದ ಬಗ್ಗೆ ಚರ್ಚೆಗೆ ಆಗ್ರಹಿಸಿದರು.

 ಸಾರಾಯಿ ನಿಷೇಧದ ಬಗ್ಗೆ ವಿಧಾನಸಭೆಯ ಹೊರಗೆ ಮುಖ್ಯಮಂತ್ರಿ ಹೇಳಿಕೆ ನೀಡುತ್ತಿದ್ದಾರೆ. ಆದರೆ ಅವರು ವಿಧಾನಸಭೆಯಲ್ಲಿ ಹೇಳಿಕೆ ನೀಡಬೇಕು ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಮುಖಂಡ ಟಿ.ಎಸ್.ಸಿಂಗ್‌ದೇವ್ ಹೇಳಿದರು. ಈ ವೇಳೆ ಕಾಂಗ್ರೆಸ್ ಸದಸ್ಯರು ಘೋಷಣೆಗಳನ್ನು ಕೂಗತೊಡಗಿದಾಗ ವಿಧಾನಸಭೆಯಲ್ಲಿ ಗೊಂದಲ ಉಂಟಾಯಿತು. ಕಾಂಗ್ರೆಸ್ ಸದಸ್ಯರ ಕೋರಿಕೆಯನ್ನು ಸ್ಪೀಕರ್ ನಿರಾಕರಿಸಿದಾಗ ಕಾಂಗ್ರೆಸ್ ಸದಸ್ಯರು ಸದನದ ಬಾವಿಗೆ ಇಳಿದು ಪ್ರತಿಭಟನೆಗೆ ಮುಂದಾದರು. ವಿಧಾನಸಭೆಯ ನಿಯಮದ ಪ್ರಕಾರ ಸದನದ ಬಾವಿಗೆ ಇಳಿದವರು ಸ್ವಯಂ ಉಚ್ಛಾಟಿತರಾಗುತ್ತಾರೆ. ಬಳಿಕ ಸ್ಪೀಕರ್ ಉಚ್ಛಾಟನೆಯನ್ನು ರದ್ದುಗೊಳಿಸಿದರು.

 ಛತ್ತೀಸ್‌ಗಢದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರಕಾರ, ರಾಜ್ಯದಲ್ಲಿ ಸಾರಾಯಿ ಮಾರಾಟ ನಡೆಸಲು ಸರಕಾರಿ ಸ್ವಾಮ್ಯದ ರಖಂ ವ್ಯಾಪಾರ ಕೇಂದ್ರಗಳನ್ನು ಆರಂಭಿಸುವ ಪ್ರಸ್ತಾವಕ್ಕೆ ಅಂಗೀಕಾರ ನೀಡಿದ್ದು, ಇದನ್ನು ಕಾಂಗ್ರೆಸ್ ವಿರೋಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News