ಮಂಗಳೂರು: 'ಸಾನಿಧ್ಯ' ವಿಶೇಷ ಮಕ್ಕಳಿಂದ ಕರಕುಶಲ ಪ್ರದರ್ಶನ
ಮಂಗಳೂರು, ಮಾ.4: ಶಕ್ತಿನಗರದ ಸಾನಿಧ್ಯ ರೆಸಿಡೆನ್ಶಿಯಲ್ ಸ್ಕೂಲ್ ಆ್ಯಂಡ್ ಟ್ರೈನಿಂಗ್ ಸೆಂಟರ್ ವತಿಯಿಂದ ನಗರದ ಕದ್ರಿ ಪಾರ್ಕ್‌ನಲ್ಲಿ ವಿಶನ್ 2017 ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ವಿಶೇಷ ಮಕ್ಕಳಿಂದ ಕರಕುಶಲ ಪ್ರದರ್ಶನ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ದ.ಕ. ಜಿಲ್ಲಾ ಪಂಚಾಯತ್ ಸಿಇಓ ಎಂ.ಆರ್.ರವಿ, ವಿಶೇಷ ಮಕ್ಕಳ ಶಾಲೆಗಳನ್ನು ನಡೆಸುವುದು ಸುಲಭದ ಕೆಲಸವಲ್ಲ. ಇದಕ್ಕೆ ಸಹನೆ ಅಗತ್ಯವಾಗಿದೆ. ಅಂಗವೈಕಲ್ಯವನ್ನು ಹೊಂದಿರುವ ಮಕ್ಕಳಿಗೆ ಪ್ರೀತಿಯನ್ನು ಕೊಟ್ಟು ಜಾಗೃತಿಯಿಂದ ನೋಡಿಕೊಳ್ಳುವ ಜೊತೆಗೆ ಸಹನೆಯ ಮೂಲಕ ಅಂತಹ ಮಕ್ಕಳ ಭವಿಷ್ಯವನ್ನು ರೂಪಿಸಲು ಸಾಧ್ಯವಿದೆ. ವಿಶೇಷ ಮಕ್ಕಳ ಕಾಳಜಿ ವಹಿಸುತ್ತಿರುವ ಸಾನಿಧ್ಯ ವಸತಿ ಶಾಲೆಯ ಕಾರ್ಯ ಶ್ಲಾಘನೀಯ ಎಂದರು.
ವಿಶೇಷ ಮಕ್ಕಳ ಶಾಲೆಗಳನ್ನು ಎಲ್ಲರೂ ಪ್ರೋತ್ಸಾಹಿಸಿ ಸಹಕಾರ ನೀಡುವಂತಾಗಬೇಕು. ಇಂತಹ ಮಕ್ಕಳ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಹ್ವಾನಕ್ಕೆ ನಿರೀಕ್ಷಿಸುವುದು, ಪ್ರಚಾರ ಬಯಸುವುದು ಆತ್ಮವಂಚನೆಗೆ ಸಮವಾಗಿದೆ ಎಂದರು.
ಕೆನರಾ ಬ್ಯಾಂಕಿನ ಉಪ ಮಹಾಪ್ರಬಂಧಕ ಎಸ್.ಡಿ.ಬಿರಾದರ್ ಮಾತನಾಡಿ, ವಿಶೇಷ ಮಕ್ಕಳ ಶಾಲೆಯನ್ನು ಸುಸೂತ್ರವಾಗಿ ಮುನ್ನೆಡೆಸಲು ಎಲ್ಲರ ಪ್ರೋತ್ಸಾಹ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಸಂಘ-ಸಂಸ್ಥೆಗಳ ಸಹಕಾರ ನೀಡಬೇಕೆಂದರು.
ಈ ಸಂದರ್ಭದಲ್ಲಿ ಗ್ರೂಪ್ 4 ಸ್ಯಾನಿಟರಿಯ ಮಾಲಕ ಮುಹಮ್ಮದ್ ಬಾವ, ಶ್ರೀ ಗಣೇಶ ಸೇವಾ ಟ್ರಸ್ಟ್‌ನ ಅಧ್ಯಕ್ಷ ಮಹಾಬಲ ಮಾರ್ಲ ಉಪಸ್ಥಿತರಿದ್ದರು.
ಸಾನಿಧ್ಯದ ನಿರ್ವಾಹಕ ವಸಂತ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಸಾನಿಧ್ಯದ ಶಿಕ್ಷಕಿ ಶಾಂತಲಾ ವಂದಿಸಿದರು.
ಕಾರ್ಯಕ್ರಮದ ಬಳಿಕ ಅತಿಥಿಗಳಿಂದ ವಿಶೇಷ ಮಕ್ಕಳ ಕರಕುಶಲ ವಸ್ತು ಪ್ರದರ್ಶನವನ್ನು ವೀಕ್ಷಿಸಿದರು.