×
Ad

ಆರೆಸ್ಸೆಸ್ ಕಾರ್ಯಕರ್ತ ಚಂದ್ರಾವತ್ ವಿರುದ್ಧ ಕೇರಳದಲ್ಲಿ ಪ್ರಕರಣ ದಾಖಲಿಸಿ : ಸಿಪಿಐ(ಎಂ) ಒತ್ತಾಯ

Update: 2017-03-04 20:46 IST

ತಿರುವನಂತಪುರಂ, ಮಾ.4: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ತಲೆ ಕತ್ತರಿಸಿದವರಿಗೆ 1 ಕೋಟಿ ಬಹುಮಾನ ಘೋಷಿಸಿರುವ ಮಾಜಿ ಆರೆಸ್ಸೆಸ್ ಕಾರ್ಯಕರ್ತ ಕುಂದನ್ ಚಂದ್ರಾವತ್ ವಿರುದ್ಧ ಕೇರಳ ಪೊಲೀಸರು ಪ್ರಕರಣ ದಾಖಲಿಸಬೇಕು ಎಂದು ಆಡಳಿತಾರೂಢ ಸಿಪಿಐ(ಎಂ) ಪಕ್ಷ ಹೇಳಿದೆ.

 ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆಯಡಿ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಸಿಪಿಐ(ಎಂ) ರಾಜ್ಯ ಪ್ರಧಾನ ಕಾರ್ಯದರ್ಶಿ ಕೊಡಿಯೆರಿ ಬಾಲಕೃಷ್ಣನ್ ಇಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಾ ತಿಳಿಸಿದರು.

ಚಂದ್ರಾವತ್ ಅವರು ಮಧ್ಯಪ್ರದೇಶದಲ್ಲಿ ಈ ವಿವಾದಾತ್ಮಕ ಹೇಳಿಕೆ ನೀಡಿದ್ದರೂ, ಅಲ್ಲಿನ ಆಡಳಿತಾರೂಢ ಬಿಜೆಪಿ ಸರಕಾರ ಈ ಬಲಪಂಥೀಯ ಕಾರ್ಯಕರ್ತನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವ ಸಾಧ್ಯತೆಗಳಿಲ್ಲ ಎಂದ ಅವರು, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರಕಾರದ ನೆರವಿನಿಂದ ಆರೆಸ್ಸೆಸ್ ಸಂಘಟನೆ ಸಿಪಿಐ(ಎಂ) ವಿರುದ್ದ ಸುಳ್ಳು ಸುದ್ದಿ ಪ್ರಚಾರ ಮಾಡುತ್ತಿದೆ. ಕೇರಳದಲ್ಲಿ ಆರೆಸ್ಸೆಸ್ ಕಾರ್ಯಕರ್ತರ ಮೇಲೆ ನಿರಂತರವಾಗಿ ಸಿಪಿಐ(ಎಂ) ಕಾರ್ಯಕರ್ತರಿಂದ ಹಲ್ಲೆ ನಡೆಯುತ್ತಿದೆ ಎಂದು ನಿರಂತರ ಅಪಪ್ರಚಾರ ನಡೆಸಲಾಗುತ್ತಿದೆ ಎಂದವರು ದೂರಿದರು.

ಕೇರಳ ಮುಖ್ಯಮಂತ್ರಿಯ ತಲೆಕತ್ತರಿಸಿದವರಿಗೆ ಬಹುಮಾನದ ಘೋಷಣೆ ಕೂಡಾ ಈ ಅಭಿಯಾನದ ಒಂದು ಭಾಗವಾಗಿದೆ. ಆರೆಸ್ಸೆಸ್ ಮುಖಂಡ ಇಂತಹ ಪ್ರಚೋದನಕಾರೀ ಹೇಳಿಕೆ ನೀಡಿದ್ದರೂ ಮಧ್ಯಪ್ರದೇಶದಲ್ಲಿ ಇವರ ವಿರುದ್ಧ ಯಾವುದೇ ದೂರು ದಾಖಲಾಗಿಲ್ಲ ಮತ್ತು ಪೊಲೀಸರು ದೂರು ದಾಖಲಿಸಿಕೊಳ್ಳುವ ಸಂಭವವೂ ಇಲ್ಲ. ಆದ್ದರಿಂದ ಕೇರಳ ಪೊಲೀಸರು ಪ್ರಕರಣ ದಾಖಲಿಸಬೇಕು . ಯಾಕೆಂದರೆ ಈ ಹೇಳಿಕೆಯ ಪರಿಣಾಮ ಕೇರಳದ ಮೇಲಾಗುತ್ತದೆ ಎಂದವರು ನುಡಿದರು.

 ಕೇರಳದಲ್ಲಿ 200ಕ್ಕೂ ಹೆಚ್ಚು ಸಿಪಿಐ(ಎಂ) ಕಾರ್ಯಕರ್ತರನ್ನು ಆರೆಸ್ಸೆಸ್ ಹತ್ಯೆ ಮಾಡಿದೆ. ಇದರಲ್ಲಿ ಕಣ್ಣೂರು ಜಿಲ್ಲೆಯಲ್ಲೇ 68 ಮಂದಿಯ ಹತ್ಯೆಯಾಗಿದೆ. ಸಾವಿರಾರು ಎಡಪಂಥೀಯ ಕಾರ್ಯಕರ್ತರ ಮೇಲೆ ಆಕ್ರಮಣ ನಡೆಸಲಾಗಿದೆ ಮತ್ತು ಅವರ ಮನೆಯನ್ನು ಹಾಳುಗೆಡವಲಾಗಿದೆ. ರಾಜ್ಯದಲ್ಲಿ ಎಲ್‌ಡಿಎಫ್ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಕಳೆದ 9 ತಿಂಗಳಲ್ಲಿ 8 ಸಿಪಿಐ(ಎಂ) ಕಾರ್ಯಕರ್ತರನ್ನು ಆರೆಸ್ಸೆಸ್ ಹತ್ಯೆ ಮಾಡಿದೆ ಎಂದವರು ಆರೋಪಿಸಿದರು.

ಕಮ್ಯುನಿಸ್ಟ್ ಪಕ್ಷದ ವಿರುದ್ಧದ ಅಭಿಯಾನಕ್ಕೆ ಹಣಕಾಸು ಸಂಗ್ರಹಿಸಲು ಆರೆಸ್ಸೆಸ್ ರಾಷ್ಟ್ರೀಯ ಮಟ್ಟದಲ್ಲಿ ನಿಧಿ ಸಂಚಯನ ಕಾರ್ಯದಲ್ಲಿ ತೊಡಗಿದೆ ಎಂದು ಆರೋಪಿಸಿದ ಬಾಲಕೃಷ್ಣನ್, ಆರೆಸ್ಸೆಸ್‌ನ ಕೋಮುವಾರು ಅಭಿಯಾನವನ್ನು ತಳಮಟ್ಟದಿಂದಲೇ ಎದುರಿಸಲು ನಾಲ್ಕು ದಿನಗಳ ಸಮೂಹ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News