ಜನಧನ್ ಖಾತೆಗಳಲ್ಲಿ 65,000 ಕೋಟಿ ರೂ.ಉಳಿತಾಯ: ಜೆ.ಕೆ.ಗರ್ಗ್
ಮಣಿಪಾಲ, ಮಾ.4: ಪ್ರಧಾನ ಮಂತ್ರಿ ಜನಧನ್ ಯೋಜನೆಯಲ್ಲಿ ದೇಶಾದ್ಯಂತ ಹೊಸದಾಗಿ 27 ಕೋಟಿ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದ್ದು, ಜಾಗತಿಕವಾಗಿ ಇದೊಂದು ದಾಖಲೆಯಾಗಿದೆ. ಇದೇನೂ ಶೂನ್ಯ ಬ್ಯಾಲೆನ್ಸ್ ಖಾತೆಯಾಗಿ ಉಳಿಯದೇ ಒಟ್ಟು 65,000 ಕೋಟಿ ರೂ. ಈ ಖಾತೆಗಳಲ್ಲಿ ಜಮಾ ಆಗಿದೆ ಎಂದು ಕಾರ್ಪೋರೇಷನ್ ಬ್ಯಾಂಕಿನ ಆಡಳಿತ ನಿರ್ದೇಶಕ ಹಾಗೂ ಸಿಇಓ ಜೈಕುಮಾರ್ ಗರ್ಗ್ ಹೇಳಿದ್ದಾರೆ.
ಮಂಗಳೂರು ವಿವಿಯ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನ ಸೆಂಟರ್ ಫಾರ್ ಅಡ್ವಾನ್ಸಡ್ ರಿಸರ್ಚ್ ಇನ್ ಫೈನಾನ್ಸಿಯಲ್ ಇನ್‌ಕ್ಲೂಷನ್ ಹಾಗೂ ಅಮೆರಿಕ ಕೆಂಟಕಿಯ ಇಂಟರ್‌ನೇಷನಲ್ ಱವಿ ಸರ್ವ್‌ೞಫೌಂಡೇಷನ್‌ನ ಜಂಟಿ ಆಶ್ರಯದಲ್ಲಿ ಕೆಎಂಸಿಯ ಇಂಟರ್ಯಾಕ್ಟ್ ಹಾಲ್‌ನಲ್ಲಿ ಆಯೋಜಿಸಲಾದ ಱವಿತ್ತೀಯ ಸೇರ್ಪಡೆಯಲ್ಲಿ ಹೊಸತನಗಳ ಸೇರ್ಪಡೆೞ ವಿಷಯದ ಕುರಿತ ಅಂತಾರಾಷ್ಟ್ರೀಯ ವಿಚಾರಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಜನಧನ್ ಬ್ಯಾಂಕ್ ಖಾತೆಯ ಮೂಲಕ ದೇಶದ ಪ್ರತಿಯೊಂದು ಕುಟುಂಬವೂ ಕನಿಷ್ಠ ಒಂದು ಬ್ಯಾಂಕ್ ಖಾತೆಯನ್ನು ಹೊಂದಿರುವಂತೆ ನೋಡಿಕೊಳ್ಳಲಾಗಿದೆ. ಆರಂಭದಲ್ಲಿ ಶೂನ್ಯ ಬ್ಯಾಲೆನ್ಸ್ ಖಾತೆಗಳೇ ಅಧಿಕವಿರಬಹುದು ಎಂದು ಭಾವಿಸಲಾಗಿತ್ತು. ಆದರೆ ಇತ್ತೀಚಿನ ಅಂಕಿಅಂಶಗಳಂತೆ ಅವುಗಳಲ್ಲಿ 65,000 ಕೋಟಿ ರೂ.ಉಳಿತಾಯ ಹಣವಿದ್ದು, ಇದರಿಂದ ಪ್ರತಿ ಖಾತೆಯಲ್ಲಿ ಸರಾಸರಿ ಕನಿಷ್ಠ 3,200ರೂ. ಇದ್ದಂತಾಗಿದೆ ಎಂದರು.
ಇವುಗಳಲ್ಲಿ ಕಾರ್ಪೋರೇಷನ್ ಬ್ಯಾಂಕ್‌ಗಳಲ್ಲಿ ತೆರೆಯಲಾದ ಜನಧನ್ ಖಾತೆಗಳಲ್ಲಿ ಅತ್ಯಧಿರ್ಕ ಅಂದರೆ ಪ್ರತಿ ಖಾತೆಯಲ್ಲಿ ಕನಿಷ್ಠ 5,300ರೂ. ಉಳಿತಾಯ ಹಣವಿದೆ. ಜನರು ಅದರಲ್ಲೂ ವಿಶೇಷವಾಗಿ ಮಹಿಳೆಯರು ತಾವು ದುಡಿದ ಹಣದಲ್ಲಿ ಉಳಿತಾಯ ಮಾಡಿ, ಬ್ಯಾಂಕ್‌ನಲ್ಲಿ ಇಡುವುದನ್ನು ಕಲಿತಿದ್ದಾರೆ ಎಂದು ಗರ್ಗ್ ನುಡಿದರು.
ಜನಧನ್ ಖಾತೆಗಳ ಮೂಲಕ ಇಂದು ಶ್ರೀಸಾಮಾನ್ಯನ ಬಳಿ ಪಾಸ್‌ಬುಕ್, ಡಿಬಿಟ್ ಕಾರ್ಡ್, ವಿಮಾ ಸುರಕ್ಷೆಯೂ ದೊರೆಯುವಂತಾಗಿದೆ. ಎಂಟಿಎಂ ಕಾರ್ಡ್ ಮೂಲಕ ಆತ ಜಗತ್ತಿನ ಎಲ್ಲಿಂದ ಬೇಕಿದ್ದರೂ ಹಣಕಾಸಿನ ವ್ಯವಹಾರ ಮಾಡುವಂತಾಗಿದೆ ಎಂದರು.
ಅಲ್ಲದೇ ಸರಕಾರ ತನ್ನೆಲ್ಲಾ ಯೋಜನೆಗಳ ಸೌಲಭ್ಯಗಳನ್ನು ಬ್ಯಾಂಕ್ ಖಾತೆಗೆ ತುಂಬುವುದರಿಂದ, ಭ್ರಷ್ಟಾಚಾರ ಪ್ರಮಾಣ ಕಡಿಮೆಯಾಗಿದೆ. ಸಬ್ಸಿಡಿ ಹಣದ ದುರುಪಯೋಗ ನಿಲ್ಲುವಂತಾಗಿದೆ. ಅಡುಗೆ ಅನಿಲದ ಸಬ್ಸಿಡಿ ಹಣವನ್ನು ನೇರವಾಗಿ ಗ್ರಾಹಕನ ಬ್ಯಾಂಕ್ ಖಾತೆಗೆ ತುಂಬುವುದರಿಂದ ಪ್ರತಿ ತಿಂಗಳು 18,000 ಕೋಟಿ ರೂ. ಉಳಿತಾಯವಾಗುತ್ತಿದೆ. ಸರಕಾರದ ಬಳಿ ಇಂತ 50 ಸಬ್ಸಿಡಿ ಯೋಜನೆಗಳಿದ್ದು, ಇವುಗಳೆಲ್ಲವುಗಳ ವ್ಯವಹಾರ ಫಲಾನುಭವಿಯ ಬ್ಯಾಂಕ್ ಖಾತೆಯ ಮೂಲಕ ನಡೆದರೆ ಸರಕಾರಕ್ಕೆ ಉಳಿತಾಯವಾಗುವ ಹಣದ ಪ್ರಮಾಣವನ್ನು ಅಂದಾಜಿಸಿದರೆ ಆಶ್ಚರ್ಯವಾಗುತ್ತದೆ ಎಂದು ಗರ್ಗ್ ವಿವರಿಸಿದರು.
ಇಂದು ಆದಾರ್ ಕಾರ್ಡ್ ಒಂದರ ಮೂಲಕವೇ ನೀವೆಲ್ಲಾ ವ್ಯವಹಾರಗಳನ್ನು ಮಾಡಬಹುದಾಗಿದೆ. ಆಧಾರ್ ಕಾರ್ಡ್‌ನಲ್ಲಿ ನಿಮ್ಮೆಲ್ಲಾ ಮಾಹಿತಿಗಳು ಅಡಕವಾಗಿರುವುದರಿಂದ ಅದು ಬಹುಪಯೋಗಿ ಸಾಧನವಾಗಿ ಬಳಕೆಯಾಗುತ್ತಿದೆ. ವಿತ್ತೀಯ ಸೇರ್ಪಡೆಯಿಂದ ಜನರಿಗೂ, ಬ್ಯಾಂಕ್‌ಗಳಿಗೂ ಅನುಕೂಲವಾಗಿದೆ ಎಂದರು.
ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ಜನರಲ್ ಮ್ಯಾನೇಜರ್ ಅಲನ್ ಸಿ.ಎ.ಪಿರೇರಾ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಸಣ್ಣ ಉಳಿತಾಯವನ್ನು ಇಡೀ ದೇಶಕ್ಕೆ ಮೊದಲು ಕಲಿಸಿದ್ದು ಸಿಂಡಿಕೇಟ್ ಬ್ಯಾಂಕ್. ಸ್ಥಾಪಕ ಡಾ.ಟಿಎಂಎ ಪೈ ಅವರ ಕನಸಾದ ಈ ಪಿಗ್ಮಿ ಇಂದು ಜನಧನ್‌ನ ರೂಪ ತಾಳಿದೆ ಎಂದರು.
ವಿತ್ತೀಯ ಸೇರ್ಪಡೆ, ಕೋರ್ ಬ್ಯಾಂಕಿಂಗ್ ಎಲ್ಲವೂ ಜನಸಾಮಾನ್ಯರಿಗೆ ಅತ್ಯುತ್ತಮ ಸೇವೆಯನ್ನು ನೀಡುತಿದ್ದರೂ, ಅವುಗಳ ದುರುಪಯೋಗದ ಸಾದ್ಯತೆ, ಜನಸಾಮಾನ್ಯರಿಗೆ ಇದರಿಂದಾಗುವ ಅನಾನುಕೂಲದ ಕಡೆಗೂ ಗಮನ ಹರಿಸುವ ಅಗತ್ಯವಿದೆ. ಇಂಟರ್‌ನೆಟ್, ಎಂಟಿಎಂ ಕಾರ್ಡ್‌ಗಳನ್ನು ಬಳಸಿ ನಡೆಯುತ್ತಿರುವ ಸೈಬರ್ ಕ್ರೈಮ್‌ಗಳ ಬಗ್ಗೆ ವಿಶೇಷ ಎಚ್ಚರಿಕೆ ಬೇಕಾಗಿದೆ ಎಂದರು.
ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನ ನಿರ್ದೇಶಕ ಡಾ.ರವೀಂದ್ರನಾಥ ನಾಯಕ್ ಅತಿಥಿಗಳನ್ನು ಸ್ವಾಗತಿಸಿದರೆ, ವಿಚಾರ ಸಂಕಿರಣದ ಸಂಯೋಜಕಿ ಡಾ.ಸವಿತಾ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರೊ.ನವೀನ್ ಕುಮಾರ್ ಹಾಗೂ ಪ್ರೊ.ಚೇತನ ಮಡ್ಡೋಡಿ ಅವರು ಅತಿಥಿಗಳನ್ನು ಪರಿಚಯಿಸಿದರು. ಅಂಕಿತಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.