ಅಮ್ಮಾನ್: ಒಂದೇ ದಿನದಲ್ಲಿ 15 ಕೈದಿಗಳಿಗೆ ಮರಣದಂಡನೆ
ಅಮ್ಮಾನ್,ಮಾ.4: ಭಯೋತ್ಪಾದಕರು ಸೇರಿದಂತೆ, ಮರಣದಂಡನೆ ಶಿಕ್ಷೆ ವಿಧಿಸಲ್ಪಟ್ಟ 15 ಮಂದಿ ಕೈದಿಗಳನ್ನು ಜೋರ್ಡಾನ್‌ನಲ್ಲಿ ಶನಿವಾರ ಮುಂಜಾನೆ ಗಲ್ಲಿಗೇರಿಸಲಾಗಿದೆಯೆಂದು ಮಾಹಿತಿ ಸಚಿವರು ತಿಳಿಸಿದ್ದಾರೆ.
ಇಂದು ಗಲ್ಲಿಗೇರಿಸಲ್ಪಟ್ಟವರು ಭಯೋತ್ಪಾದನೆ, ಅತ್ಯಾಚಾರ ಸೇರಿದಂತೆ ಐದು ವಿಧದ ಹೇಯ ಅಪರಾಧಗಳನ್ನು ಎಸಗಿದವರಾಗಿದ್ದಾರೆಂದು ಮಾಹಿತಿ ಸಚಿವ ಮುಹಮ್ಮದ್ ಅಲ್ ಮೊಮಾನಿ, ಅಧಿಕೃತ ಸುದ್ದಿಸಂಸ್ಥೆಗೆ ಪೇತ್ರಾಗೆ ತಿಳಿಸಿದ್ದಾರೆ.
ಓರ್ವ ಬ್ರಿಟಿಶ್ ಪ್ರಜೆಯ ಸಾವಿಗೆ ಕಾರಣವಾದ ಅಮ್ಮಾನ್‌ನ ರೋಮನ್ ರಂಗಮಂದಿರದ ಮೇಲೆ 2006ರಲ್ಲಿ ನಡೆದ ದಾಳಿ, ಗುಪ್ತಚರ ಕಾರ್ಯಾಲಯದ ಮೇಲೆ ನಡೆದ ದಾಳಿ ಸೇರಿದಂತೆ ಭಯೋತ್ಪಾದಕ ಅಪರಾಧಗಳನ್ನು ಎಸಗಿದವರು ಇಂದು ಗಲ್ಲಿಗೇರಿಸಲ್ಪಟ್ಟವರಲ್ಲಿ ಸೇರಿದ್ದಾರೆ ಎಂದು ವರದಿ ತಿಳಿಸಿದೆ.
ಬಹುತೇಕ ಯುರೋಪಿಯನ್ ರಾಷ್ಟ್ರಗಳ ಮಾದರಿಯಲ್ಲಿ ಮರಣದಂಡನೆಯನ್ನು ರದ್ದುಗೊಳಿಸಿದ ಮಧ್ಯಪ್ರಾಚ್ಯದ ಪ್ರ್ರಪ್ರಥಮ ರಾಷ್ಟ್ರವಾಗುವ ಗುರಿಯನ್ನು ಜೋರ್ಡಾನ್ ಹೊಂದಿದೆಯೆಂದು ದೊರೆ ಎರಡನೇ ಅಬ್ದುಲ್ಲಾ ಅವರು 2005ರಲ್ಲಿ ಘೋಷಿಸಿದ್ದರು.
ಆದರೆ 2014ರಲ್ಲಿ ತನ್ನ ನಿಲುವಿನಿಂದ ಹಿಂದೆ ಸರಿದ ಜೋರ್ಡಾನ್, 11 ಮಂದಿ ಕೊಲೆ ಅಪರಾಧಿಗಳನ್ನು ಗಲ್ಲಿಗೇರಿಸಿದಾಗ ಮಾನವಹಕ್ಕು ಸಂಘಟನೆಗಳ ಬಲವಾದ ವಿರೋಧ ವ್ಯಕ್ತವಾಗಿತ್ತು.ಆನಂತರ ಜೋರ್ಡಾನ್ ಮತ್ತೆ ಮರಣದಂಡನೆಯನ್ನು ನಿಷೇಧಿಸಿತ್ತು.
ಆದರೆ ಐಸಿಸ್ ಉಗ್ರರು ಸಿರಿಯದಲ್ಲಿ ಸೆರೆಸಿಕ್ಕ ಜೋರ್ಡಾನ್‌ನ ಪೈಲಟ್ ಮಾಝ್ ಅಲ್ ಕಸ್ಸಬೆಹ್‌ನ್ನು ಬರ್ಬರವಾಗಿ ಹತ್ಯೆಗೈದ ಘಟನೆಯ ಬಳಿಕ ದೇಶದಲ್ಲಿ ಮರಣದಂಡನೆ ಮರುಜಾರಿಗೊಳಿಸಬೇಕೆಂಬ ಕೂಗು ಬಲವಾಗಿ ಕೇಳಿಬಂದಿತ್ತು.