ಬ್ಯಾಂಕಿಂಗ್ ಪರೀಕ್ಷಾ ತರಬೇತಿ ಕೇಂದ್ರ ಸ್ಥಾಪನೆಗೆ ಚಿಂತನೆ: ಮಲ್ಲಿಕಾರ್ಜುನ ರಾವ್
ಮಂಗಳೂರು, ಮಾ.4: ರಾಜ್ಯದ ಯುವಕರು ಬ್ಯಾಂಕಿಂಗ್ ಕ್ಷೇತ್ರಕ್ಕೆ ಸೇರ್ಪಡೆಗೊಳ್ಳಲು ಪ್ರೇರೇಪಿಸುವ ಸಲುವಾಗಿ ರಾಜ್ಯದಲ್ಲಿ ಬ್ಯಾಂಕಿಂಗ್ ಪರೀಕ್ಷಾ ತರಬೇತಿ ಕೇಂದ್ರವನ್ನು ಸ್ಥಾಪಿಸಲು ಚಿಂತಿಸಲಾಗುತ್ತಿದೆ ಎಂದು ಸಿಂಡಿಕೇಟ್ ಬ್ಯಾಂಕ್ ಕಾರ್ಯಕಾರಿ ನಿರ್ದೇಶಕ ಎಸ್.ಎಸ್.ಮಲ್ಲಿಕಾರ್ಜುನರಾವ್ ಹೇಳಿದ್ದಾರೆ. ಅವರು ಇಂದು ನಗರದಲ್ಲಿ ‘ಅನನ್ಯ ಯೋಜನೆ’ ಅಡಿ ಉನ್ನತೀಕರಿಸಲಾದ 11 ಬ್ಯಾಂಕ್ ಶಾಖೆಗಳನ್ನು ಕಾರ್ಯಾರಂಭಗೊಳಿಸುವ ಸಂದರ್ಭ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ರಾಜ್ಯದಲ್ಲಿ ಅಖಿಲ ಭಾರತ ಮಟ್ಟದ ಬ್ಯಾಂಕಿಂಗ್ ಪರೀಕ್ಷೆಗೆ ತರಬೇತಿ ನೀಡುವ ಯೋಗ್ಯ ತರಬೇತಿ ಕೇಂದ್ರ ಇಲ್ಲದಿರುವ ಕಾರಣ ರಾಜ್ಯದಿಂದ ಬ್ಯಾಂಕಿಂಗ್ ಕ್ಷೇತ್ರಕ್ಕೆ ಸೇರುವವರ ಸಂಖ್ಯೆ ಕಡಿಮೆ ಎಂದವರು ಹೇಳಿದರು. ಗ್ರಾಹಕರ ಒತ್ತಡವನ್ನು ಪರಿಗಣಿಸಿ ಬ್ಯಾಂಕಿನ ಮಂಗಳೂರು ಪ್ರಾದೇಶಿಕ ಕಚೇರಿ ವ್ಯಾಪ್ತಿಯ ಬಂಟ್ವಾಳ, ಬೆಳ್ತಂಗಡಿ, ಮಂಗಳೂರು, ಕಂಕನಾಡಿ, ಹಂಪನಕಟ್ಟೆ, ಕದ್ರಿ, ಕಿನ್ನಿಗೋಳಿ, ಮೂಡುಬಿದಿರೆ, ಪುತ್ತೂರು, ವಿಟ್ಲ, ಕುಲಶೇಖರ ಶಾಖೆಗಳನ್ನು ಅನನ್ಯ ಯೋಜನೆಯಡಿ ಉನ್ನತೀಕರಿಸಲಾಗಿದೆ. ಈ ಶಾಖೆಗಳು ಗ್ರಾಹಕರಿಗೆ ಉತ್ತಮ ಸೇವಾನುಭವ ಒದಗಿಸುವ, ವ್ಯವಹಾರ ಉತ್ತೇಜಿಸುವ, ಪ್ರತ್ಯೇಕ ಡಿಜಿ ರೆನ್ ಮೂಲಕ ಡಿಜಿಟಲ್ ವ್ಯವಹಾರ ಉತ್ತೇಜಿಸುವ ಉದ್ದೇಶವನ್ನು ಹೊಂದಿವೆ. 372 ಶಾಖೆಗಳನ್ನು ಮೊದಲ ಹಂತದಲ್ಲಿ ಅನನ್ಯ ಯೋಜನೆಯಡಿ ತರಲು ಉದ್ದೇಶಿಸಲಾಗಿದೆ ಎಂದವರು ವಿವರಿಸಿದರು.
ಈ ಯೋಜನೆಯನ್ನು ಕಳೆದ ವರ್ಷದ ೆಬ್ರವರಿಯಲ್ಲಿ ಆರಂಭಿಸಲಾಗಿತ್ತು. ಉನ್ನತೀಕರಿಸಿದ ಶಾಖೆಗಳಲ್ಲಿ ಗ್ರಾಹಕರು ಕಾಯುವ ಅವಧಿ ಗಣನೀಯವಾಗಿ ಕಡಿಮೆಯಾಗಿರುತ್ತದೆ. ಅಪನಗದೀ ಕರಣದ ಬಳಿಕ ನಗದುರಹಿತ ಡಿಜಿಟಲ್ ವಹಿವಾಟು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಈ ನಿಟ್ಟಿನಲ್ಲಿ ಉದ್ಭವಿಸಿರುವ ಬೇಡಿಕೆಯನ್ನು ಅನನ್ಯ ಯೋಜನೆಯ ಶಾಖೆಗಳು ಯಶಸ್ವಿಯಾಗಿ ಪೂರೈಸುತ್ತವೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ಬ್ಯಾಂಕಿನ ಜನರಲ್ ಮ್ಯಾನೇಜರ್ ಕೆ.ಟಿ.ರೈ, ಕ್ಷೇತ್ರ ಜನರಲ್ ಮ್ಯಾನೇಜರ್ ಸತೀಶ್ ಕಾಮತ್, ಮಂಗಳೂರು ಪ್ರಾದೇಶಿಕ ಕಚೇರಿಯ ಡೆಪ್ಯುಟಿ ಜನರಲ್ ಮ್ಯಾನೇಜರ್ ಎನ್.ಎಸ್.ಆರ್. ಸೋಮಯಾಜಿ ಉಪಸ್ಥಿತರಿದ್ದರು.