ಮೃತ ಯೋಧ ಮ್ಯಾಥ್ಯು ದೇಹದಲ್ಲಿ ಗಾಯಗಳು : ಕುಟುಂಬದ ಆರೋಪ
ನಾಶಿಕ್/ ತಿರುವನಂತಪುರಂ, ಮಾ.5: ನಿಗೂಢವಾಗಿ ಸಾವಿಗೀಡಾಗಿರುವ ಯೋಧ ಲ್ಯಾನ್ಸ್ ನಾಯಕ್ ರಾಯ್ ಮ್ಯಾಥ್ಯೂ ಅವರ ದೇಹದಲ್ಲಿ ಗಾಯದ ಗುರುತುಗಳಿದ್ದವು ಎಂದು ಅವರ ಕುಟುಂಬಸ್ಥರು ಆರೋಪಿಸುವುದರೊಂದಿಗೆ ಈ ನಿಗೂಢ ಸಾವು ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.
ಕುಟುಂಬದ ಆರೋಪದ ಹಿನ್ನೆಲೆಯಲ್ಲಿ ತಿರುವನಂತಪುರದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಮರು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಯೋಧನ ಪಾರ್ಥಿವ ಶರೀರದ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
ಕೇರಳದ ಕೊಲ್ಲಂ ಜಿಲ್ಲೆಯವರಾದ ರಾಯ್ ಅವರ ಮೃತದೇಹ ದೇವಲಾಲಿ ಕೇಂದ್ರೀಯ ಶಸ್ತ್ರಾಗಾರದ ಬಳಿ ಹಳೆಯ ಬಾರಕ್‌ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅವರ ಸಾವನ್ನು ಸೇನೆ ದೃಢಪಡಿಸಿದ ಬಳಿಕ, ಯೋಧನ ಕುಟುಂಬ ಕೇರಳ ಸಿಎಂ ಹಾಗೂ ಸೇನಾ ಮುಖ್ಯಸ್ಥರಿಗೆ ಈ ಬಗ್ಗೆ ದೂರು ಸಲ್ಲಿಸಿತ್ತು.
ಯೋಧನ ಮೃತದೇಹವನ್ನು ನಾಶಿಕ್ ಸಿವಿಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಗುರಿಪಡಿಸಿದ ಬಳಿಕ ತಿರುವನಂತಪುರಕ್ಕೆ ತರಲಾಗಿತ್ತು. ಯೋಧನ ಸಂಬಂಧಿಕರು ಹೊಸದಾಗಿ ಮರಣೋತ್ತರ ಪರೀಕ್ಷೆಗೆ ಆಗ್ರಹಿಸಿದ ಹಿನ್ನೆಲೆಯಲ್ಲಿ ಅದಕ್ಕೆ ವ್ಯವಸ್ಥೆ ಮಾಡಲಾಯಿತು. ಇದಕ್ಕೆ ಸೇನಾ ಸಿಬ್ಬಂದಿ ಆರಂಭದಲ್ಲಿ ನಿರಾಕರಿಸಿದರೂ, ಜಿಲ್ಲಾಧಿಕಾರಿ ಮಧ್ಯಸ್ಥಿಕೆಯಿಂದಾಗಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ವ್ಯವಸ್ಥೆ ಮಾಡಲಾಯಿತು.
ಸೇನೆಯ ಸಹಾಯಕ್ ವ್ಯವಸ್ಥೆ ಬಗ್ಗೆ ಆನ್‌ಲೈನ್ ಸುದ್ದಿ ಜಾಲಕ್ಕೆ ರಹಸ್ಯ ಮಾಹಿತಿಯನ್ನು ಸೋರಿಕೆ ಮಾಡಿದ ಆರೋಪವನ್ನು ಸೇನೆಯ ಹಿರಿಯ ಅಧಿಕಾರಿಗಳು ರಾಯ್ ವಿರುದ್ಧ ಹೊರಿಸಿದ್ದರು. ಬಳಿಕ ರಾಯ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಸೇನೆ ಪ್ರಕಟನೆ ನೀಡಿತ್ತು. ರಾಯ್ ಅವರ ಸಹೋದರ ಜೋನ್ ಮ್ಯಾಥ್ಯೂ, "ರಾಯ್ ದೇಹದಲ್ಲಿ ಗಾಯದ ಗುರುತುಗಳಿದ್ದು, ಕೇರಳದಲ್ಲಿ ಮರಣೋತ್ತರ ಪರೀಕ್ಷೆ ನಡೆಸಬೇಕು" ಎಂದು ಆಗ್ರಹಿಸಿದ್ದರು.