ಮುದ್ರಾಡಿಯಲ್ಲಿ ಎರಡು ದಿನಗಳ ಕಲೋತ್ಸವ ಕಾರ್ಯಕ್ರಮ ಉದ್ಘಾಟನೆ
ಹೆಬ್ರಿ, ಮಾ.5: ಮನಸನ್ನು ಅರಳಿಸುವ ಕಾರ್ಯಕ್ರಮಗಳ ನಿತ್ಯ ನಿರಂತರ ನಡೆಯಬೇಕು, ಆ ಕೆಲಸಗಳು ಮುದ್ರಾಡಿಯಲ್ಲಿ ನಡೆಯುತ್ತಿದೆ, ಮನಸ್ಸು ಕೆರಳಿಸುವ ಹಲವಾರು ಸಂಘಟನೆಗಳ ನಡುವೆಯೂ ಮುದ್ರಾಡಿಯಲ್ಲಿ ಅತ್ಯುತ್ತಮವಾದ ಸಮಾಜಮುಖಿ ಕಾರ್ಯಗಳು ನಡೆಯುತ್ತಿವೆ, ಅದಕ್ಕೆ ಶ್ರೀಮಂತ ಮನಸ್ಸು ಮತ್ತು ಊರು ಕಾರಣ ಎಂದು ಕಾರ್ಕಳದ ಮಾಜಿ ಶಾಸಕ ಎಚ್. ಗೋಪಾಲ ಭಂಡಾರಿ ಹೇಳಿದರು.
ಅವರು ಶನಿವಾರ ಮುದ್ರಾಡಿ ರುದ್ರಾಕ್ಷಿ ನಾರಾಯಣ ಶೆಟ್ಟಿ ಬಯಲು ರಂಗ ಮಂದಿರದಲ್ಲಿ ಜಾದೂ ಜಗತ್ತು ಸಂಘ ಮುದ್ರಾಡಿ ಇದರ ವತಿಯಿಂದ ಜಾದೂ ಮಾಯಾ ಲೋಕದ 22ನೇ ವರ್ಷದ ಸಂಭ್ರಮದ ಎರಡು ದಿನಗಳ ಕಲೋತ್ಸವ - 2 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮುದ್ರಾಡಿ ಮಂಜುನಾಥ ಪೂಜಾರಿ ಅಧ್ಯಕ್ಷತೆ ವಹಿಸಿ ಶುಭಹಾರೈಸಿದರು. ಸಮಾಜ ಸೇವಕ ಮಾಧವ ಅಮ್ಮುಂಜೆ, ಕಲಾವಿದರಾದ ಆನಂದ ಸಾಂತ್ಯಾರು, ಸುರೇಶ ಬಂಗೇರ ಕಲ್ಯಾಣಪುರ, ಡ್ಯಾನ್ಸಿಂಗ್ ಸ್ಟಾರ್ ಜ್ಯೂನಿಯರ್ ಖ್ಯಾತಿಯ ಬಾಲ ನಟಿ ವಿ.ಜೆ. ಪೂರ್ವಿ ಕೆ. ರಾವ್ ಅವರನ್ನು ಸನ್ಮಾನಿಸಲಾಯಿತು.
ಅಜ್ರಿ ಜೋನಮನೆ ಕ್ಷೇತ್ರದ ಆಡಳಿತ ಧರ್ಮದರ್ಶಿ ಅಶೋಕ್ ಕುಮಾರ್ ಶೆಟ್ಟಿ, ಮುದ್ರಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಪೂಜಾರಿ, ಸದಸ್ಯರಾದ ಸಂತೋಷ ಕುಮಾರ ಶೆಟ್ಟಿ, ರತ್ನ ಮುದ್ರಾಡಿ, ಕುಕ್ಕುಂದೂರು ಯಕ್ಷಕಲಾ ರಂಗದ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ, ಕಾರ್ಯಕ್ರಮದ ಸಂಘಟಕರಾದ ಸುಧನ್ವ ಜಾದೂಗಾರ್ ಮುದ್ರಾಡಿ, ಯೋಗೀಶ್ ಪಾದೆಗುಡ್ಡೆ ಮತ್ತಿತರರು ಇದ್ದರು.
ಶಿಕ್ಷಕ ಪ್ರಕಾಶ್ ಪೂಜಾರಿ ಕಾರ್ಯಕ್ರಮ ನಿರೂಪಿಸಿ ರಂಗ ನಿರ್ದೇಶಕ ಸುಕುಮಾರ್ ಮೋಹನ್ ಸ್ವಾಗತಿಸಿದರು. ಮುದ್ರಾಡಿ ನಮತುಳುವೆರ್ ಕಲಾ ಸಂಘಟನೆಯಿಂದ ಮೂರು ಹೆಜ್ಜೆ ಮೂರು ಲೋಕ ನಾಟಕ ಮತ್ತು ವಿವಿಧ ಮನರಂಜನೆ ಕಾರ್ಯಕ್ರಮಗಳು ನಡೆಯಿತು.