×
Ad

ಬಾಲವನ ಜಿಮ್ ಕೇಂದ್ರ ಸ್ಥಳಾಂತರಕ್ಕೆ ಅವಕಾಶ ನೀಡುವುದಿಲ್ಲ: ಶಕುಂತಳಾ ಶೆಟ್ಟಿ

Update: 2017-03-05 17:51 IST

ಪುತ್ತೂರು, ಮಾ.5: ಡಾ.ಶಿವರಾಮ ಕಾರಂತರ ಬಾಲವನಕ್ಕೆ ಮಂಜೂರುಗೊಂಡಿರುವ ಜಿಮ್ ಕೇಂದ್ರವನ್ನು ಯಾವುದೇ ಕಾರಣಕ್ಕೂ ಇತರೆಡೆಗೆ ಸ್ಥಳಾಂತರ ಮಾಡಲಾಗುವುದಿಲ್ಲ ಎಂದು ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು.

ಅವರು ಭಾನುವಾರ ಪರ್ಲಡ್ಕದಲ್ಲಿನ ಡಾ. ಶಿವರಾಮ ಕಾರಂತರ ಬಾಲವನದಲ್ಲಿ ನಡೆದ ಪುತ್ತೂರು ಅಕ್ವೆಟಿಕ್ ಕ್ಲಬ್ ವಾರ್ಷಿಕ ದಿನಾಚರಣೆ, ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸರ್ಕಾರದಿಂದ ಬಾಲವನಕ್ಕೆ ಮಂಜೂರುಗೊಂಡಿರುವ ಜಿಮ್ ಕೇಂದ್ರವನ್ನು ಬೇರೆಡೆಗೆ ಸ್ಥಳಾಂತರಿಸುವ ಹುನ್ನಾರ ನಡೆಯುತ್ತಿದೆ. ಈ ಉದ್ದೇಶವನ್ನು ಯಾವುದೇ ಕಾರಣಕ್ಕೂ ಈಡೇರಲು ಬಿಡುವುದಿಲ್ಲ ಎಂದು ಭರವಸೆ ನೀಡಿದರು.

ಡಾ. ಕಾರಂತರ ವಾಸದ ಮನೆ ತೀರಾ ಅಜೀರ್ಣಾವಸ್ಥೆಯಲ್ಲಿದ್ದಾಗ ಯಾರೂ ಮಾತನಾಡಿಲ್ಲ. ತನ್ನ ಪ್ರಯತ್ನದಿಂದ ಮನೆ ದುರಸ್ತಿಗೆ ಅನುದಾನ ಮಂಜೂರುಗೊಂಡಾಗ ಕಾರಂತರ ಮೂಲಪರಂಪರೆಗೆ ಧಕ್ಕೆಯಾಗಬಾರದು ಎನ್ನುತ್ತಾ ಹಲವರು ಮಾತನಾಡಲಾರಂಭಿಸಿದರು. ಅನುದಾನ ಮಂಜೂರುಗೊಳ್ಳುವ ಮೊದಲು ಕಾರಂತರ ಕರ್ಮಭೂಮಿಯ ಬಗ್ಗೆ ಮೌನವಾಗಿದ್ದವರು ಇದೀಗ ಮಾತನಾಡಲಾರಂಬಿಸಿದ್ದಾರೆ ಎಂದು ದೂರಿದರು.

ಅಧ್ಯಕ್ಷತೆ ವಹಿಸಿದ್ದ ಸವಣೂರು ಸೀತಾರಾಮ ರೈ ಮಾತನಾಡಿ ಬಾಲವನದ ಈಜುಕೊಳ ಸ್ಥಾಪನೆಯ ಸಂದರ್ಭದಲ್ಲಿದ್ದ ವಿರೋಧಕ್ಕೆ ಇದೀಗ ಈಜುಕೊಳದಲ್ಲಿ ತರಬೇತಿ ಪಡೆದವರು ಸಾಧನೆಯ ಮೂಲಕ ಉತ್ತರ ನೀಡಿದ್ದಾರೆ. 1000ಕ್ಕೂ ಅಧಿಕ ಪದಕಗಳೊಂದಿಗೆ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ತೋರಿದ ಅಕ್ವೆಟಿಕ್ ಕ್ಲಬ್ ಸಾಧಕರ ಸಾಧನೆ ಅಭಿನಂದನಾರ್ಹ ಎಂದರು.
 ಈ ಸಂದರ್ಭದಲ್ಲಿ ಅಕ್ವೆಟಿಕ್ ಕ್ಲಬ್ ಸದಸ್ಯರಾಗಿದ್ದು, ಜಿಲ್ಲಾ, ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಅಕ್ವೆಟಿಕ್ ಕ್ಲಬ್ ಕಾರ್ಯದರ್ಶಿ ಗಣೇಶ್ ಶೆಟ್ಟಿ, ತರಬೇತುದಾರ ಪಾರ್ಥಾ ವಾರಣಾಸಿ ಉಪಸ್ಥಿತರಿದ್ದರು.

ತರಬೇತುದಾರ ವಸಂತ ಕುಮಾರ್ ಸಾಧಕರ ಪಟ್ಟಿ ವಾಚಿಸಿದರು. ಡಾ. ಗಾಯತ್ರಿ ಅನಿಸಿಕೆ ವ್ಯಕ್ತಪಡಿಸಿದರು. ಪ್ರತಿಮಾ ಹೆಗ್ಡೆ ಪ್ರಸ್ತಾವಿಕ ಮಾತುಗಳನ್ನಾಡಿದರು. ಎವೆರೆಸ್ಟ್ ರೋಡ್ರಿಗಸ್ ಸ್ವಾಗತಿಸಿದರು. ತರಬೇತುದಾರ ನಿರುಫ್ ಜಿ.ಆರ್ ವಂದಿಸಿದರು. ದಿವ್ಯಾ ಅನಿಲ್ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News