ಇರ್ದೆ ಪಳ್ಳಿತ್ತಡ್ಕದಲ್ಲಿ ಹಿಂದೂ ಮುಸ್ಲಿಮ್ ಸೌಹಾರ್ದಕ್ಕೆ ಎಂದಿಗೂ ಭಂಗವಿಲ್ಲ: ರಕ್ಷಣ್ ರೈ
ಪುತ್ತೂರು, ಮಾ.5: ನಮ್ಮ ಕುಟುಂಬದ ಹಿರಿಯರು ತಮಗೆ ಸೇರಿದ್ದ ಜಮೀನಿನಲ್ಲಿ ಇರ್ದೆ - ಪಳ್ಳಿತ್ತಡ್ಕ ದರ್ಗಾ ಶರೀಫ್ ದರ್ಗಾ ನಿರ್ಮಾಣಕ್ಕೆ ಭೂಮಿಯನ್ನು ನೀಡುವ ಮೂಲಕ ಸೌಹಾರ್ಧತೆಗೆ ನಾಂದಿಯಾಗಿದ್ದರು. ಸುಮಾರು 41 ವರ್ಷಗಳಿಂದ ಇಲ್ಲಿ ಉರೂಸ್ ಸೇರಿದಂತೆ ಮುಸ್ಲಿಂ ಧಾರ್ಮಿಕ ಕಾರ್ಯಕ್ರಮಗಳು ಹಿಂದೂ ಮತ್ತು ಮುಸ್ಲಿಂ ಐಕ್ಯತೆಯೊಂದಿಗೆ ನಡೆಯುತ್ತಿದ್ದು, ಈತನಕ ಸೌಹಾರ್ಧತೆಗೆ ಭಂಗ ಉಂಟಾಗಿಲ್ಲ , ಮುಸ್ಲಿಂ ಧಾರ್ಮಿಕ ಕ್ಷೇತ್ರವಾದ ದರ್ಗಾ ನಮ್ಮ ಜಮೀನಿನಲ್ಲಿರುವುದು ನಮ್ಮ ಕುಟುಂಬಕ್ಕೆ ಅತ್ಯಂತ ಹೆಮ್ಮೆಯ ವಿಚಾರವಾಗಿದೆ ಎಂದು ಬೆಟ್ಟಂಪಾಡಿ ಗ್ರಾಪಂ ಸದಸ್ಯ ರಕ್ಷಣ್ ರೈ ಹೇಳಿದರು.
ಅವರು ಇರ್ದೆ - ಪಳ್ಳಿತ್ತಡ್ಕ ದರ್ಗಾ ಶರೀಫ್ ಇದರ 41 ನೇ ಉರೂಸ್ ಸಮಾರೋಪ ಸಮಾರಂಭದ ಪ್ರಯುಕ್ತ ನಡೆದ ಸೌಹಾರ್ಧ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮ್ಮ ಹಿರಿಯರು ಜಾತಿ ಧರ್ಮಗಳ ಸಂಘರ್ಷಗಳಿಲ್ಲದೆ ಪರಸ್ಪರ ಸೌಹಾರ್ಧತೆಯಿಂದ ಬದುಕುತ್ತಿದ್ದರು. ಆದರೆ ಇದೀಗ ಮನುಷ್ಯರು ಜಾತಿ ಧರ್ಮದ ಹೆಸರಿನಲ್ಲಿ ಪರಸ್ಪರ ಕಚ್ಚಾಡುತ್ತಾ ಊರಿನ ನೆಮ್ಮದಿ ಕೆಡಿಸುತ್ತಿದ್ದಾರೆ. ಪೂರ್ವಜರು ಹಾಕಿಕೊಟ್ಟ ಮಾದರಿಯನ್ನು ನಾವೀಗ ಮರೆಯುತ್ತಿದ್ದೇವೆ ಎಂದರು.
ಕೊರಿಂಗಿಲ ಜುಮಾ ಮಸೀದಿ ಇಮಾಂ ಅಯ್ಯೂಬ್ ವಅಬಿ ಕಾರ್ಯಕ್ರಮವನ್ನು ಉದ್ಘಾಟಿಸಿ ದುವಾ ನಡೆಸಿದರು. ಕೊರಿಂಗಿಲ ಜಮಾಅತ್ ಕಮಿಟಿ ಅಧ್ಯಕ್ಷ ಮಹಮ್ಮದ್ ಕುಂಞಿ ಹಾಜಿ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಭಾಷಣ ಮಾಡಿದ ಪುತ್ತೂರು ಬದ್ರಿಯಾ ಜುಮಾ ಮಸೀದಿ ಖತೀಬ್ ಎಸ್. ಬಿ. ಮುಹಮ್ಮದ್ ದಾರಿಮಿ ಮಾತನಾಡಿ ಧರ್ಮದ ಹೆಸರಿನಲ್ಲಿ ನಡೆಯುವ ಗಲಭೆಗಳಿಂದ ಯಾವುದೇ ಧರ್ಮ ಉದ್ದಾರವಾಗಲು ಸಾಧ್ಯವಿಲ್ಲ, ದೇವರನ್ನು ನಂಬುವ ಮಂದಿ ಎಂದೂ ಅಶಾಂತಿಗೆ ಕಾರಣರಾಗುವುದಿಲ್ಲ. ದೇವರನ್ನು ನಂಬದ, ಧರ್ಮದ ಮೇಲೆ ಗೌರವ ಇಲ್ಲದ ನಕಲಿ ಧರ್ಮ ರಕ್ಷಕರು ಇಂದು ಸಮಾಜವನ್ನು ಕೆಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಭಾರತ ದೇಶದಲ್ಲಿರುವ ಪ್ರತಿಯೊಬ್ಬರೂ ಅಣ್ಣ ತಮ್ಮಂದಿರಂತೆ ಬಾಳಿದರೆ ಮಾತ್ರ ಜಗತ್ತಿನಲ್ಲಿ ನಮ್ಮ ದೇಶ ಶಕ್ತಿಯುತವಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಸಂಪ್ಯ ಠಾಣೆಯ ಉಪನಿರೀಕ್ಷಕರಾದ ಅಬ್ದುಲ್ ಖಾದರ್ ಮಾತನಾಡಿ ಕ್ಷುಲ್ಲಕ ವಿಚಾರಕ್ಕೆ ಕೋಮು ಬಣ್ಣ ಬಳಿಯುವ ಕಾರಣ ಕರಾವಳಿ ಜಿಲ್ಲೆಗೆ ಕೆಟ್ಟ ಹೆಸರು ಬರುವಂತಾಗಿದೆ, ಪ್ರತೀಯೊಬ್ಬ ನಾಗರಿಕನೂ ಅವರವರ ಧರ್ಮಕ್ಕನುಸಾರವಾಗಿ ಪರಸ್ಪರ ಪ್ರೀತಿಯಿಂದ ಬದುಕಿದರೆ ಮಾತ್ರ ಸಮಾಜದಲ್ಲಿ ನೆಮ್ಮದಿ ಕಾಣಲು ಸಾಧ್ಯವಾಗಬಹುದು. ಮನುಷ್ಯರು ಮಾನವೀಯತೆಯಿಂದ ದೂರವಾಗುತ್ತಿದ್ದು ಪ್ರಾಣಿ, ಪಕ್ಷಿಗಳಿಂದ ನಾವು ಮಾನವೀಯತೆಯನ್ನು ಕಲಿಯಬೇಕಾದ ಸ್ಥಿತಿ ಎದುರಾಗಿದೆ. ದೇಶದ ಸಂವಿದಾನವನ್ನು ಪ್ರತೀಯೊಬ್ಬರು ಗೌರವಿಸಬೇಕು, ಕಾನೂನಿಗೆ ಗೌರವ ಕೊಡುವ ವ್ಯಕ್ತಿಗಳು ನಾವಾದರೆ ಎಲ್ಲ ಕಡೆಯೂ ಶಾಂತಿ ನೆಲೆಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಮಹಮ್ಮದ್ ಕುಂಞಿ ಹಾಜಿ ಕುಕ್ಕುವಳ್ಳಿ, ಬೆಳಿಯೂರುಕಟ್ಟೆ ಸ.ಪ ಪೂ ಕಾಲೇಜಿನ ಉಪನ್ಯಾಸಕ ಹರಿಪ್ರಕಾಶ ಬೈಲಾಡಿ, ಗ್ರಾಪಂ ಸದಸ್ಯ ಪ್ರಕಾಶ್ ಬೈಲಾಡಿ, ಗಡಿನಾಡು ಪತ್ರಿಕೆಯ ಸಂಪಾದಕ ಅಬೂಬಕ್ಕರ್ ಆರ್ಲಪದವು ಮಾತನಾಡಿದರು.
ಮೈದಾನಿಮೂಲೆ ಜಮಾತ್ ಕಮಿಟಿ ಅಧ್ಯಕ್ಷ ಯೂಸುಫ್ ಹಾಜಿ ಕೈಕಾರ, ಬೆಟ್ಟಂಪಾಡಿ ಗ್ರಾಪಂ ಸದಸ್ಯ ಮೊಯಿದು , ದಾಸ್‌ಪ್ರಕಾಶ್ ರೈ ಬೆಟ್ಟಂಪಾಡಿ, ಉರೂಸ್ ಕಮಿಟಿ ಅಧ್ಯಕ್ಷ ಕೆ. ಎಂ ಹಮೀದ್ ಕೊಮ್ಮೆಮ್ಮಾರ್, ನ್ಯಾಯವಾದಿ ರಾಧಾಕೃಷ್ಣ ರೈ ಆನಾಜೆ, ಕೊರಿಂಗಿಲ ಜಮಾತ್ ಕಮಿಟಿ ಉಪಾಧ್ಯಕ್ಷ ಇಸ್ಮಾಯಿಲ್ ಹಾಜಿ, ಕಾರ್ಯದರ್ಶಿ ಶಾಹುಲ್ ಹಮೀದ್ ಕೊರಿಂಗಿಲ, ಉರೂಸ್ ಕಮಿಟಿ ಉಪಾಧ್ಯಕ್ಷ ಶಾಫಿ ಕೇಕನಾಜೆ.ಕಾರ್ಯದರ್ಶಿ ಖಾಸಿಂ ಕೇಕನಾಜೆ, ಆರ್ಲಪದವು ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಅಬ್ದುಲ್‌ಕುಂಞಿ ಮತ್ತಿತರರು ಉಪಸ್ಥಿತರಿದ್ದರು.
ಉರೂಸ್ ಕಾರ್ಯಕ್ರಮದಲ್ಲಿ ಹಾಫಿಳ್ ಇ .ಪಿ ಅಬೂಬಕ್ಕರ್ ಅಲ್‌ಖಾಸಿಮಿ ಪತ್ತನಾಪುರಂ ಕೇರಳ ಪ್ರವಚನ ನೀಡಿದರು. ಕುಂಬೋಲ್ ಕೆ. ಎಸ್ ಆಟಕ್ಕೋ ತಂಙಳ್ ಕೂಟು ಪ್ರಾರ್ಥನೆ ನೆರವೇರಿಸಿದರು. ಅದೂರು ಅಟ್ಟು ತಂಙಳ್ ಕುಂಬೋಲ್ ಉಪಸ್ಥಿತರಿದ್ದರು.
ಉರೂಸ್ ಕಮಿಟಿ ಜೊತೆ ಕಾರ್ಯದರ್ಶಿ ಫಾರೂಕ್ ಟಿ.ಎಂ ಸ್ವಾಗತಿಸಿ, ಝಕರಿಯ್ಯಾ ಕೊರಿಂಗಿಲ ವಂದಿಸಿದರು.