ಮುಸ್ಲಿಮ್ ರಾಷ್ಟ್ರಗಳಿಗೆ ಪ್ರವೇಶ ನಿಷೇಧ : ಪರಿಷ್ಕೃತ ಆದೇಶಕ್ಕೆ ನಾಳೆ ಟ್ರಂಪ್ ಸಹಿ ನಿರೀಕ್ಷೆ
ವಾಷಿಂಗ್ಟನ್, ಮಾ.5: ಏಳು ಮುಸ್ಲಿಮ್ ಬಾಹುಳ್ಯದ ರಾಷ್ಟ್ರಗಳಿಗೆ ಅಮೆರಿಕಕ್ಕೆ ಪ್ರವೇಶ ನಿರಾಕರಿಸುವ ಬಗ್ಗೆ ಪರಿಷ್ಕೃತ ಆದೇಶಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಾಳೆ (ಸೋಮವಾರ) ಸಹಿ ಹಾಕುವ ನಿರೀಕ್ಷೆಯಿದೆ.
ಏಳು ಮುಸ್ಲಿಮ್ ಬಾಹುಳ್ಯದ ರಾಷ್ಟ್ರಗಳಿಗೆ ಅಮೆರಿಕಕ್ಕೆ ಪ್ರವೇಶ ನಿರಾಕರಿಸುವ ಬಗ್ಗೆ ಜನವರಿ 27ರಂದು ಹೊರಡಿಸಿದ ಆದೇಶವು ಅಮೆರಿಕದಾದ್ಯಂತ ವಿವಾದಕ್ಕೆ ಹಾಗೂ ವಿಮಾನ ನಿಲ್ದಾಣದಲ್ಲಿ ಗೊಂದಲಕ್ಕೆ ಕಾರಣವಾಗಿತ್ತು .ಪರಿಷ್ಕೃತ ಕಾರ್ಯಕಾರಿ ಆದೇಶಕ್ಕೆ ರಾಷ್ಟ್ರೀಯ ಭದ್ರತಾ ಇಲಾಖೆಯ ಕಚೇರಿಯಲ್ಲಿ ಅಧ್ಯಕ್ಷರು ಸಹಿ ಹಾಕಲಿದ್ದಾರೆ ಎಂದು ಹಿರಿಯ ಸರಕಾರಿ ಅಧಿಕಾರಿಗಳನ್ನು ಉಲ್ಲೇಖಿಸಿ ಅಮೆರಿಕದ ‘ಪೊಲಿಟಿಕೊ’ ಪತ್ರಿಕೆ ವರದಿ ಮಾಡಿದ್ದು , ಪರಿಷ್ಕೃತ ಆದೇಶದಲ್ಲಿ ಇರಬಹುದಾದ ಬದಲಾವಣೆಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ತಿಳಿಸಿದೆ.
ಜ.27ರಂದು ಟ್ರಂಪ್ ಆಡಳಿತ ಹೊರಡಿಸಿದ ಆದೇಶದ ಪ್ರಕಾರ 7 ಮುಸ್ಲಿಂ ಬಾಹುಳ್ಯದ ರಾಷ್ಟ್ರಗಳ ಪ್ರಜೆಗಳಿಗೆ ಅಮೆರಿಕ ಪ್ರವೇಶಕ್ಕೆ 90 ದಿನಗಳವರೆಗೆ ನಿಷೇಧ ವಿಧಿಸಲಾಗಿದ್ದರೆ, ನಿರಾಶ್ರಿತರಿಗೆ 120 ದಿನಗಳವರೆಗೆ, ಸಿರಿಯನ್ ನಿರಾಶ್ರಿತರಿಗೆ ಶಾಶ್ವತವಾಗಿ ನಿಷೇಧ ಹೇರಲಾಗಿತ್ತು. ಆರಂಭದ ದಿನಗಳಲ್ಲಿ ಈ ಆದೇಶದಿಂದ ವಿಮಾನ ನಿಲ್ದಾಣದಲ್ಲಿ ಭಾರೀ ಗೊಂದಲದ ಪರಿಸ್ಥಿತಿ ಉಂಟಾಗಿತ್ತು. ಉದ್ದೇಶಿತ ರಾಷ್ಟ್ರಗಳ ನಾಗರಿಕರನ್ನು ಅಮೆರಿಕದ ವಿಮಾನ ನಿಲ್ದಾಣಗಳಲ್ಲಿ ತಡೆ ಹಿಡಿದು ವಾಪಾಸು ಕಳಿಸಲಾಗುತ್ತಿತ್ತು.
ಆದರೆ ಟ್ರಂಪ್‌ರ ಈ ಆದೇಶಕ್ಕೆ ಎರಡು ಕಾನೂನು ಹಿನ್ನಡೆ ಉಂಟಾಗಿತ್ತು. ಅಮೆರಿಕ ಸಂಸತ್ತಿನಲ್ಲಿ ಜಿಲ್ಲಾ ನ್ಯಾಯಾಧೀಶರು ಈ ಆದೇಶಕ್ಕೆ ತಡೆಯಾಜ್ಞೆ ವಿಧಿಸಿದ್ದರು ಮತ್ತು ಇದನ್ನು ಸ್ಯಾನ್‌ಫ್ರಾನ್ಸಿಸ್ಕೋದ 9ನೆ ಸರ್ಕಿಟ್ ಮೇಲ್ಮನವಿ ನ್ಯಾಯಾಲಯ ಪುರಸ್ಕರಿಸಿತ್ತು.