ಭಟ್ಕಳ: ಎಂಆರ್ ಲಸಿಕೆ ಕುರಿತು ಮಾಹಿತಿ ನೀಡಲು ತಾಲೂಕಾಡಳಿತ ಜಾಮಿಯಾ ಕ್ಕೆ ಭೇಟಿ
ಭಟ್ಕಳ, ಮಾ.6: ಸಾಮಾಜಿಕ ಜಾಲತಾಣಗಳಲ್ಲಿ ರುಬೆಲ್ಲಾ ಲಸಿಕಾ ಕುರಿತ ತಪ್ಪು ಸಂದೇಶಗಳಿಂದಾಗಿ ಭಟ್ಕಳದಲ್ಲಿ ಲಸಿಕಾ ಅಭಿಯಾನ ಯಶಸ್ವಿಗೊಳ್ಳದ ಹಿನ್ನೆಲೆಯಲ್ಲಿ ಇಲ್ಲಿನ ಸಹಾಯಕ ಆಯುಕ್ತ ಎಂ.ಎನ್.ಮಂಜುನಾಥ್, ತಹಶೀಲ್ದಾರ್ ವಿ.ಎನ್.ಬಾಡ್ಕರ್ ಹಾಗೂ ಜಿಲ್ಲಾ ಆರೋಗ್ಯಾಧಿಕಾರಗಳ ತಂಡವು ರವಿವಾರ ಇಲ್ಲಿನ ಜಾಮಿಯಾ ಇಸ್ಲಾಮಿಯಾ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿ ಅಲ್ಲಿನ ಪ್ರಾಂಶುಪಾಲ, ಸಿಬ್ಬಂದಿ ಹಾಗೂ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ಲಸಿಕೆ ಕುರಿತಂತೆ ಮುಸ್ಲಿಮರಲ್ಲಿ ಉಂಟಾಗಿರುವ ಗೊಂದಲಗಳನ್ನು ನಿವಾರಿಸುವಂತೆ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಹಳಿಯಾಳ ವೈದ್ಯ ಡಾ.ಸಲೀಮ್ ಹಾಗೂ ಡಾ.ವಿನಾಯಕ ಲಸಿಕೆ ಕುರಿತಂತೆ ಸಮಗ್ರವಾದ ಮಾಹಿತಿಯನ್ನು ಮುಂದಿಟ್ಟರು. ಸಂಸ್ಥೆಯ ಪ್ರಾಂಶುಪಾಲ ಮೌಲಾನ ಮುಹಮ್ಮದ್ ಮಕ್ಬೂಲ್ ಆಹ್ಮದ್ ಕೋಬಟ್ಟೆಯವರು ಆದಷ್ಟು ಮಟ್ಟಿಗೆ ಸಮುದಾಯದಲ್ಲಿ ಈ ಕುರಿತಂತೆ ಜಾಗೃತಿ ಮೂಡಿಸಲಾಗುವುದು ತಂಝೀಮ್ ಕೈಗೊಂಡಿರುವ ನಿರ್ಣಯಗಳಿಗೆ ನಾವು ಬದ್ಧರಾಗಿದ್ದು ತಂಝೀಮ್ ಸಂಸ್ಥೆಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಅಲಿ ಪಬ್ಲಿಕ್ ಶಾಲೆಯ ಕಾರ್ಯದರ್ಶಿ ಹಾಗೂ ಜಾಮಿಯಾದ ಉಪನ್ಯಾಸಕ ಮೌಲಾನ ಮುಹಮ್ಮದ್ ಇಲ್ಯಾಸ್ ನದ್ವಿ, ಜಾಮಿಯಾ ಮಸೀದಿಯ ಖತೀಬ್ ಮೌಲಾನ ಅಬ್ದುಲ್ ಅಲೀಮ್ ನದ್ವಿ ಸೇರಿಂದತೆ ಹಲವು ಉಲೇಮಾಗಳು ಉಪಸ್ಥಿತರಿದ್ದರು.