ಮಂಗಳೂರಿನಲ್ಲಿ ವಾಯುಮಾಲಿನ್ಯ ಅಧಿಕ:ಅಧ್ಯಯನ

Update: 2017-03-05 15:41 GMT

ಮಂಗಳೂರು,ಮಾ.5: ನಗರದ ಎಪಿಡಿ ಪ್ರತಿಷ್ಠಾನವು ತನ್ನ ‘ಶುದ್ಧ ಗಾಳಿ’ ಯೋಜನೆ ಯಡಿ ಸೈಂಟ್ ಜಾರ್ಜ್‌ಸ್ ಹೋಮಿಯೊಪತಿಯ ಸಹಯೋಗದೊಂದಿಗೆ ನಡೆಸಿದ ಅಧ್ಯಯನವು ಮಂಗಳೂರಿನ ವಾತಾವರಣದಲ್ಲಿ ಸೀಸದ ಅಂಶ ಮತ್ತು ಇತರ ಮಾಲಿನ್ಯಕಾರಕಗಳು ಅನುಮತಿಸಲ್ಪಟ್ಟ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿವೆ ಎನ್ನುವುದನ್ನು ಬೆಳಕಿಗೆ ತಂದಿದೆ.

ಮಂಗಳೂರಿನಲ್ಲಿ ವಾಯು ಗುಣಮಟ್ಟದ ಕುರಿತು ತಾಂತ್ರಿಕ ವರದಿಯನ್ನು ಎಪಿಡಿ ಪ್ರತಿಷ್ಠಾನದ ಮುಖ್ಯಸ್ಥ ಅಬ್ದುಲ್ಲಾ ಎ.ರೆಹಮಾನ್ ಮತ್ತು ರಾಜ್ಯ ಸಮನ್ವಯಕಾರ ಅರ್ಜುನ ರೈ ಅವರು ಇತ್ತೀಚಿಗೆ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಪರಿಸರ ಮತ್ತು ಅರಣ್ಯಖಾತೆ ಸಚಿವ ಬಿ.ರಮಾನಾಥ ರೈ ಅವರಿಗೆ ಸಲ್ಲಿಸಿದ್ದಾರೆ. ವಾಯು ಮಾಲಿನ್ಯವನ್ನು ತಡೆಗಟ್ಟಲು ಕ್ರಮಗಳನ್ನು ಕೈಗೊಳ್ಳುವಂತೆ ಅವರು ಸಚಿವರನ್ನು ಆಗ್ರಹಿಸಿದ್ದಾರೆ.

ಮಂಗಳೂರಿನ ವಾಯು ಗುಣಮಟ್ಟ ಕುರಿತು ಸ್ವತಂತ್ರ ತನಿಖೆಯನ್ನು ಎಪಿಡಿ ಪ್ರತಿಷ್ಠಾನವು ಕಳೆದ ವರ್ಷದ ಡಿಸೆಂಬರ್‌ನಲ್ಲಿ ನಡೆಸಿತ್ತು.

ನಗರದ ಒನ್ ಅರ್ತ್ ಎನ್ವಿರೊ ಲ್ಯಾಬ್ಸ್‌ನ ತಾಂತ್ರಿಕ ತಜ್ಞರು ಅಧ್ಯಯನವನ್ನು ನಡೆಸಿದ್ದು, ಡಿ.1ರಿಂದ 8ರವರೆಗೆ ಎಂಟು ಗಂಟೆಗಳ ಅವಧಿಗೆ ನಗರದ 12 ಪ್ರಮುಖ ತಾಣಗಳಿಂದ ವಾಯು ಸ್ಯಾಂಪಲ್‌ಗಳನ್ನು ಸಂಗ್ರಹಿಸಲಾಗಿತ್ತು. ಸೈಂಟ್ ಜಾರ್ಜ್‌ಸ್ ಹೋಮಿಯೊಪತಿ ಈ ಅಧ್ಯಯನವನ್ನು ಪ್ರಾಯೋಜಿಸಿದ್ದರೆ, ಕಂಪನಿಯ ಮುಖ್ಯಸ್ಥ  (ಕ್ಲೈಂಟ್ಆ್ಯಂಡ್ ಮಾರ್ಕೆಟಿಂಗ್) ನೀಲ್ ಝಕಾರಿಯಾಸ್ ಅವರು ಸಂಘಟಿಸಿದ್ದರು.

ಪಾರ್ಟಿಕ್ಯುಲೇಟ್ ಮ್ಯಾಟರ್,10 ಮೈಕ್ರೋಮೀಟರ ಅಥವಾ ಅದಕ್ಕೂ ಸಣ್ಣ ವ್ಯಾಸದ ಉಸಿರಾಟದಲ್ಲಿ ಸೇರಬಹುದಾದ ಕಣಗಳು, 2.5 ಮೈಕ್ರೋಮೀಟರ್ ಅಥವಾ ಅದಕ್ಕೂ ಸಣ್ಣ ವ್ಯಾಸದ ಸೂಕ್ಷ್ಮ ಕಣಗಳು ಸೇರಿದಂತೆ ಆರು ಬಾಹ್ಯ ಮಾಲಿನ್ಯಕಾರಕಗಳನ್ನು ಪರಿಶೀಲನೆಗೊಳಪಡಿಸಲಾಗಿತ್ತು.

ಉಸಿರಾಟದ ಮೂಲಕ ಇವು ಮಾನವ ಶರೀರವನ್ನು ಪ್ರವೇಶಿಸಿದರೆ ಹೃದಯ ಮತ್ತು ಶ್ವಾಸಕೋಶಗಳ ಮೇಲೆ ದುಷ್ಪರಿಣಾಮ ಬೀರಿ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತವೆ. ಸೀಸದ ಜೊತೆಗೆ ನೈಟ್ರೋಜನ್ ಡಯಾಕ್ಸೈಡ್, ಸಲ್ಫರ್ ಡಯಾಕ್ಸೈಡ್ ಇವು ಮಂಗಳೂರಿನ ಗಾಳಿಯಲ್ಲಿ ಪತ್ತೆಯಾಗಿರುವ ಇತರ ಮಾಲಿನ್ಯಕಾರಕಗಳಾಗಿವೆ.

ಮಾಲಿನ್ಯಕಾರಕಗಳು ಕೆಲವು ಪ್ರದೇಶಗಳಲ್ಲಿ ಅನುಮತಿಸಲ್ಪಟ್ಟ ಮಿತಿಗಿಂತ ಹೆಚ್ಚಾಗಿವೆ ಎನ್ನುವುದನ್ನು ಅಧ್ಯಯನವು ತೋರಿಸಿದೆ. ನಗರದ ಕೆಲವು ಪ್ರದೇಶಗಳಲ್ಲಿ ಒಟ್ಟಾರೆ ವಾಯು ಗುಣಮಟ್ಟವು ಉತ್ತಮವಾಗಿದೆ ಎನ್ನುವುದನ್ನು ಅಧ್ಯಯನವು ಬೆಟ್ಟು ಮಾಡಿದೆಯಾದರೂ ಸುದೀರ್ಘ ಅವಧಿಯಲ್ಲಿ ಇದೂ ಹದಗೆಡುವ ಸಂಕೇತಗಳಿವೆ. ಸಕಾಲಿಕ ಕ್ರಮಗಳಷ್ಟೇ ನಗರವನ್ನು ವಾಯುಮಾಲಿನ್ಯದ ವಿಷಮಸ್ಥಿತಿಯಿಂದ ಪಾರು ಮಾಡಬಹುದಾಗಿದೆ ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News