×
Ad

ಧೋಬಿ ಅಂಗಡಿಯಿಂದ ನಗದು ಕಳವು

Update: 2017-03-06 00:22 IST

ಉಪ್ಪಿನಂಗಡಿ, ಮಾ.5: ಇಲ್ಲಿನ ಸಿಂಡಿಕೇಟ್ ಬ್ಯಾಂಕ್ ಬಳಿಯ ಧೋಬಿ ಅಂಗಡಿ, ಮನೆ ಹಾಗೂ ಖಾಸಗಿ ಬೀಡಿ ಕಂಪೆನಿಯ ಕಚೇರಿಯೊಂದಕ್ಕೆ ನುಗ್ಗಿದ ಕಳ್ಳರು, ಧೋಬಿ ಅಂಗಡಿಯಿಂದ ಸಾವಿರಾರು ರೂ. ದೋಚಿಕೊಂಡು ಪರಾರಿಯಾದ ಘಟನೆ ವರದಿಯಾಗಿದೆ.

ಸಿಂಡಿಕೇಟ್ ಬ್ಯಾಂಕ್‌ನ ಬಳಿಯಿರುವ ಬಾಬು ಮಡಿವಾಳ ಎಂಬವರ ಧೋಬಿ ಅಂಗಡಿಯ ಹಿಂಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು ಅಲ್ಲಿದ್ದ ಕಾಣಿಕೆ ಡಬ್ಬಿ ಹಾಗೂ ಎರಡು ಸಾವಿರ ರೂ. ನಗದನ್ನು ದೋಚಿದ್ದಾರೆ ಎಂದು ತಿಳಿದು ಬಂದಿದೆ.

ಶನಿವಾರ ಸಂಜೆ ಅಂಗಡಿ ಬಂದ್ ಮಾಡಿ ತೆರಳಿದ್ದ ಬಾಬು ಮಡಿವಾಳ ರವಿವಾರ ಅಂಗಡಿಯ ಬಾಗಿಲು ತೆರೆದಾಗ ಕಳ್ಳತನ ನಡೆದ ಕೃತ್ಯ ಬೆಳಕಿಗೆ ಬಂದಿದೆ. ತಕ್ಷಣ ಉಪ್ಪಿನಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿದಾಗ ಸಮೀಪದಲ್ಲಿರುವ ವಿನಾಯಕ ಪೈ ಅವರಿಗೆ ಸೇರಿದ ಮನೆಯ ಹೆಂಚನ್ನು ಸರಿಸಿ, ಒಳನುಗ್ಗಿರುವುದು ಪತ್ತೆಯಾಗಿದೆ.

ಆದರೆ ವಿನಾಯಕ ಪೈ ಅವರ ಕುಟುಂಬ ಸದ್ರಿ ಮನೆಯಲ್ಲಿ ವಾಸ್ತವ್ಯವಿರುವುದರಿಂದ ಅಲ್ಲಿ ಕಳ್ಳತನ ನಡೆದಿರುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಅಲ್ಲಿಯೇ ಸಮೀಪದ ಖಾಸಗಿ ಬೀಡಿ ಕಂಪೆನಿಯ ಕಚೇರಿಗೂ ಹೆಂಚನ್ನು ಸರಿಸಿ ಕಳ್ಳರು ಒಳ ಪ್ರವೇಶಿಸಿದ್ದು ಕಂಡು ಬಂದಿದೆ. ಈ ಎಲ್ಲ್ಲ ಕೃತ್ಯಗಳು ಶನಿವಾರ ರಾತ್ರಿಯೇ ನಡೆದಿರುವ ಸಾಧ್ಯತೆಯಿದ್ದು, ದೋಬಿ ಅಂಗಡಿಗೆ ನುಗ್ಗಿದವರೇ ಇಲ್ಲಿಗೂ ನುಗ್ಗಿ ಸಾಧ್ಯತೆಯ ಬಗ್ಗೆ ಶಂಕೆ ವ್ಯಕ್ತವಾಗಿದೆ. ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News