ಚಿಲ್ಲರೆ ಕೊಡಿಸುವುದಾಗಿ ಹೇಳಿ ವಂಚನೆ

Update: 2017-03-05 18:56 GMT

ಉಪ್ಪಿನಂಗಡಿ, ಮಾ.5: ಚಿಲ್ಲರೆ ತೆಗೆಸಿಕೊಡುತ್ತೇನೆಂದು ನಂಬಿಸಿ ಜ್ಯೂಸ್ ಅಂಗಡಿ ಮಾಲಕರೋರ್ವರಿಂದ ಎರಡು ಸಾವಿರ ರೂ.ಪಡೆದು ಹೋದ ಅಪರಿಚಿತ ವ್ಯಕ್ತಿ ಮರಳಿ ಬಾರದೆ ವಂಚಿಸಿರುವ ಪ್ರಕರಣ ಉಪ್ಪಿನಂಗಡಿಯಲ್ಲಿ ರವಿವಾರ ನಡೆದಿದೆ.

ವಿಠಲ ಶೆಟ್ಟಿ ವಂಚನೆಗೊಳಗಾದ ವ್ಯಕ್ತಿ. ಇವರು ಉಪ್ಪಿನಂಗಡಿ ಬಸ್ ನಿಲ್ದಾಣದ ಬಳಿ ಕಬ್ಬಿನ ಹಾಲಿನ ಅಂಗಡಿಯಿಟ್ಟಿದ್ದು, ಅವರ ಬಳಿಗೆ ರವಿವಾರ ಮಧ್ಯಾಹ್ನದ ವೇಳೆ ಅಪರಿಚಿತನೋರ್ವ ಬಂದು ತಾನು ಉಪ್ಪಿನಂಗಡಿಯ ಸಹಸ್ರಲಿಂಗೇಶ್ವರ-ಮಹಾಕಾಳಿ ದೇವಾಲಯದಿಂದ ಬಂದಿದ್ದು, ಅಲ್ಲಿಗೆ 150 ಗ್ಲಾಸ್ ಕಬ್ಬಿನ ಹಾಲು ಬೇಕೆಂದು ತಿಳಿಸಿದ್ದ. ಕಬ್ಬಿನ ಹಾಲು ಕೊಂಡೊಯ್ಯಲು ದೇವಸ್ಥಾನದಿಂದಲೇ ಪಾತ್ರೆ ಕಳುಹಿಸುತ್ತೇವೆ. ಅಲ್ಲದೇ, ದೇವಾಲಯದಲ್ಲಿ ಚಿಲ್ಲರೆ ನಾಣ್ಯಗಳು ಬೇಕಾದಷ್ಟಿವೆ.

ನಿಮಗೆ ಎರಡು ಸಾವಿರ ರೂ.ನ ಚಿಲ್ಲರೆ ತೆಗೆಸಿಕೊಡುತ್ತೇನೆ ಎಂದಿದ್ದ. ಈತನ ಮಾತನ್ನು ನಂಬಿದ ವಿಠಲ ಶೆಟ್ಟಿಯವರು ತನ್ನ ಅಂಗಡಿಯ ಕೆಲಸದಾತ ನಾಗರಾಜ ಎಂಬಾತನ ಕೈಯಲ್ಲಿ ಎರಡು ಸಾವಿರ ರೂ.ನ ನೋಟು ಕೊಟ್ಟು ಚಿಲ್ಲರೆ ತರಲು ಹಾಗೂ ಜ್ಯೂಸ್‌ಗೆ ಪಾತ್ರೆ ತರಲು ಹೇಳಿ ಕಳುಹಿಸಿದ್ದರು. ನಾಗರಾಜ ಎಂಬಾತನನ್ನು ದೇವಸ್ಥಾನದ ಹೊರಗಡೆ ನಿಲ್ಲಿಸಿ ಚಿಲ್ಲರೆ ತರುವುದಾಗಿ ಹೇಳಿ, ದೇವಾಲಯದ ಒಳಾಂಗಣ ಪ್ರವೇಶಿಸಿದ ಅಪರಿಚಿತ ವ್ಯಕ್ತಿ ಮರಳಿ ಬಾರದೆ ಇನ್ನೊಂದು ಬಾಗಿಲ ಮೂಲಕ ಪರಾರಿಯಾಗಿ ವಂಚಿಸಿದ ಘಟನೆ ನಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News