×
Ad

ದಿಲ್ಲಿಯನ್ನು ವಿಶ್ವದ ಈ ಪ್ರತಿಷ್ಠಿತ ನಗರದಂತೆ ರೂಪಿಸುವೆ ಎಂದಿದ್ದಾರೆ ಕೇಜ್ರಿವಾಲ್

Update: 2017-03-06 10:11 IST

ಹೊಸದಿಲ್ಲಿ, ಮಾ.6: ದಿಲ್ಲಿಯನ್ನು ಲಂಡನ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು. ಇದು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಹೊಸ ಭರವಸೆ.

ದಿಲ್ಲಿಯಲ್ಲಿ ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗೆ ಸಜ್ಜಾಗುತ್ತಿರುವ ಆಮ್ ಆದ್ಮಿ ಪಕ್ಷದ ಮುಖಂಡ ರವಿವಾರ ರಾಜಧಾನಿಯ ಮೂರು ಕಡೆಗಳಲ್ಲಿ ವಿವಿಧ ನಾಗರಿಕ ಸೌಲಭ್ಯಗಳನ್ನು ಉದ್ಘಾಟಿಸಿ ಮಾತನಾಡುವ ವೇಳೆ ಈ ವಿಷಯ ಪ್ರಕಟಿಸಿದರು. ಉತ್ತಮ್‌ನಗರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, "ದಿಲ್ಲಿಯ ಸ್ಥಳೀಯ ಸಂಸ್ಥೆಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಪಾಲಿಕೆ ಸದಸ್ಯರು ಹಣ ಮಾಡುವ ದಂಧೆಯಲ್ಲಿ ತೊಡಗಿದ್ದಾರೆ. ಚುನಾವಣೆಗೆ ಮುನ್ನ ಸೈಕಲ್ ಹಾಗೂ ಸ್ಕೂಟರ್‌ಗಳಲ್ಲಿ ಓಡಾಡುತ್ತಿದ್ದ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರು ಇದೀಗ ಐದೈದು ಬಂಗಲೆ ಹಾಗೂ ಐದೈದು ಕಾರುಗಳನ್ನು ಹೊಂದಿದ್ದಾರೆ. ಎಂಸಿಡಿ ಚುನಾವಣೆಯಲ್ಲಿ ನಾವು ಗೆದ್ದರೆ, ಒಂದು ವರ್ಷದಲ್ಲಿ ಲಂಡನ್ ಜತೆ ದಿಲ್ಲಿಯನ್ನು ನೀವು ಹೋಲಿಸುವಂತೆ ಅಭಿವೃದ್ಧಿ ಮಾಡುತ್ತೇವೆ" ಎಂದು ಬಣ್ಣಿಸಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ವಿದ್ಯುತ್ ಹಾಗೂ ನೀರಿನ ಸಬ್ಸಿಡಿ ಯೋಜನೆ ಜಾರಿಗೆ ತರಲಾಗಿದೆ ಎಂದು ಸಿಎಂ ಹೇಳಿದರು. ತಮ್ಮ ಸರಕಾರ ಮಾಡಿದಷ್ಟು ಅಭಿವೃದ್ಧಿ ಕಾರ್ಯಗಳನ್ನು ದೇಶದ ಯಾವುದೇ ರಾಜ್ಯ ಸರಕಾರಗಳು ಮಾಡಿಲ್ಲ ಎಂದು ಕೇಜ್ರಿವಾಲ್ ಹೇಳಿಕೊಂಡರು. ಹಿಂದೆ ದಿಲ್ಲಿಯ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಕಾಂಗ್ರೆಸ್ ಪಕ್ಷ ವಿದ್ಯುತ್ ವಿತರಣಾ ಕಂಪೆನಿಗಳ ಜತೆ ಷಾಮೀಲಾಗಿ ಭ್ರಷ್ಟಾಚಾರದಲ್ಲಿ ತೊಡಗಿತ್ತು ಎಂಬ ಗಂಭೀರ ಆರೋಪ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News