ಆತ್ಮಹತ್ಯೆ ಪ್ರಕರಣ: ಜ್ಯುವೆಲ್ಲರಿ ನೌಕರನೋರ್ವನ ಬಂಧನ
ಕಾಸರಗೋಡು, ಮಾ.6: ನಿರುಪಯುಕ್ತ ಟ್ಯಾ೦ಕ್ ನಲ್ಲಿ ಯುವತಿಯೋರ್ವಳು ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಜ್ಯುವೆಲ್ಲರಿ ನೌಕರ ಅಜಿತ್ ಕುಮಾರ್ (23) ಎಂಬಾತನನ್ನು ಬೇಡಡ್ಕ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪೂಕಾಯ ಎಂಬಲ್ಲಿನ ರೇವತಿ ಕಳೆದ ಶುಕ್ರವಾರ ದೇವಸ್ಥಾನವೊಂದರ ಉತ್ಸವಕ್ಕೆಂದು ಹೋದವಳು ಮನೆಗೆ ಹಿಂತಿರುಗಿರಲಿಲ್ಲ . ಆತಂಕಗೊಂಡ ಮನೆಯವರು ಶೋಧ ನಡೆಸಿದಾಗ ಮನೆಯ ಅಲ್ಪ ದೂರದ ನಿರುಪಯುಕ್ತ ನೀರಿನ ಟ್ಯಾ೦ಕ್ ನಲ್ಲಿ ಮೃತದೇಹ ಪತ್ತೆಯಾಗಿತ್ತು.
ಆತ್ಮಹತ್ಯೆಗೆ ಜ್ಯುವೆಲ್ಲರಿ ನೌಕರ ಅಜಿತ್ ಕುಮಾರ್ ಕಾರಣ ಎಂದು ಯುವತಿಯ ಸಂಬಂಧಿಕರು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣವನ್ನು ಕೈಗೆತ್ತಿಕೊಂಡ ಪೊಲೀಸರು ಆರೋಪಿ ಅಜಿತ್ ಕುಮಾರ್ ನನ್ನು ವಶಕ್ಕೆ ಪಡೆದು ಈತನ ವಿರುದ್ಧ ಆತ್ಮಹತ್ಯೆಗೆ ಪ್ರೇರಣೆ ಮೊಕದ್ದಮೆ ದಾಖಲಿಸಿಕೊಳ್ಳಲಾಗಿದೆ.
ಈತ ರೇವತಿಗೆ ನಿರಂತರ ಕಿರುಕುಳ ನೀಡುತ್ತಿದ್ದನೆನ್ನಲಾಗಿದೆ. ಕಿರುಕುಳ ತಾಳಲಾರದೆ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತನಿಖೆಯಿಂದ ತಿಳಿದು ಬಂದಿದೆ.