×
Ad

​ದ.ಕ.ದಿಂದ ಸೇನೆಗೆ ಸೇರುವವರು ವಿರಳ: ಸೇನಾ ಅಧಿಕಾರಿ

Update: 2017-03-06 15:44 IST

ಮಂಗಳೂರು, ಮಾ.6: ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ದ.ಕ.ಜಿಲ್ಲೆಯಿಂದ ಸೇನೆಗೆ ಸೇರುವವರ ಸಂಖ್ಯೆ ವಿರಳ ಎಂದು ಭಾರತೀಯ ಸೇನಾ ನೇಮಕಾತಿಯ ಕರ್ನಾಟಕ ರಾಜ್ಯ ಅಧಿಕಾರಿ ಪ್ರಶಾಂತ್ ಪೇಡ್ಕರ್ ಬೇಸರ ವ್ಯಕ್ತಪಡಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಸೇನಾ ನೇಮಕಾತಿ ಬಗ್ಗೆ ಮಾಹಿತಿ ನೀಡಿ ಮಾತನಾಡಿದ ಅವರು, ಭಾರತೀಯ ಸೇನೆಯ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಲು ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತರು ಮಾರ್ಚ್ 12ರಿಂದ ಎಪ್ರಿಲ್ 25ರ ಒಳಗೆ  www.joinindianarmy.nic.in ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದ್ದು, ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ರ‍್ಯಾಲಿಯಲ್ಲಿ ಪಾಲ್ಗೊಳ್ಳುವಂತೆ ಅವರು ಕರೆ ನೀಡಿದರು.

2015ರಲ್ಲಿ 134 ಮಂದಿ ಅರ್ಜಿ ಸಲ್ಲಿಸಿದ್ದು, 2016ರಲ್ಲಿ ಈ ಸಂಖ್ಯೆ ಕೇವಲ 34. ಬಿಜಾಪುರ, ಬಾಗಲಕೋಟೆ, ಗದಗ ಧಾರವಾಡ ಜಿಲ್ಲೆಗಳಿಂದ ಅತ್ಯಧಿಕ ಪ್ರಮಾಣದಲ್ಲಿ ಅಭ್ಯರ್ಥಿಗಳು ಸೇನೆಗೆ ಸೇರ್ಪಡೆಗೊಳ್ಳುತ್ತಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಹಳಿಯಾಳದಿಂದ 800 ಅಭ್ಯರ್ಥಿಗಳು ಕಳೆದ ರ‍್ಯಾಲಿಯಲ್ಲಿ ಭಾಗವಹಿಸಿದ್ದರು. ದ.ಕ.ಭಾಗದಿಂದಲೂ ಹೆಚ್ಚಿನ ಯುವಜನತೆ ಬರುವಂತಾಗಬೇಕು. ಈ ಬಗ್ಗೆ ಜಾಗೃತಿಯೂ ಅಗತ್ಯವಿದೆ. ಉದ್ಯೋಗಕ್ಕೆ ಸೇರಿದ ಬಳಿಕ ಕೇವಲ 15ರಿಂದ 17 ವರ್ಷ ಸೇವೆ ಸಲ್ಲಿಸಲು ಅವಕಾಶ. ಆ ನಂತರ ನಿವೃತ್ತಿ ದೊರೆಯಲಿದ್ದು, ಜೀವನದ ಅಂತ್ಯದವರೆಗೂ ಪಿಂಚಣಿ ದೊರೆಯಲಿದೆ. ಆತ ಮೃತಪಟ್ಟರೆ ಆತನ ಪತ್ನಿಯ ಜೀವಿತಾವಧಿಯವರೆಗೆ ಪಿಂಚಣಿ ದೊರೆಯಲಿದೆ. 17ನೆ ವಯಸ್ಸಿನಲ್ಲಿ ಸೇನೆ ಸೇರುವ ವ್ಯಕ್ತಿ 33 ವರ್ಷದೊಳಗೆ ನಿವೃತ್ತಿ ಹೊಂದುತ್ತಾರೆ ಎಂದವರು ಹೇಳಿದರು.

ದಕ್ಷಿಣ ಕನ್ನಡದಿಂದ ಸೇನೆ ಸೇರಿದಂತೆ ಇತರ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವವರ ಸಂಖ್ಯೆ ವಿರಳ. ಭಾರತೀಯ ಸೇನೆ ಹೆಚ್ಚಿನ ಉದ್ಯೋಗವಕಾಶ ಕಲ್ಪಿಸುತ್ತಿದ್ದು ಈಗಾಗಲೇ ಈ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತೀ ತಾಲೂಕಿನ ತಹಶೀಲ್ದಾರ್‌ಗಳ ಮೂಲಕ ಮಾಹಿತಿ ಕರಪತ್ರಗಳನ್ನು ವಿತರಿಸುವ ಕೆಲಸ ನಡೆಯುತ್ತಿದೆ ಎಂದರು.

ಸೇನಾ ನೇಮಕಾತಿ ಮುಖ್ಯ ಕಾರ್ಯಾಲಯ ಆಯೋಜಿಸಿದ್ದ ಸೇನಾ ನೇಮಕಾತಿ ರ‍್ಯಾಲಿಯು ವಿಜಯಪುರದ ಸೈನಿಕ ಶಾಲೆಯಲ್ಲಿ ಮೇ12ರಿಂದ 18ರವರೆಗೆ ನಡೆಯಲಿದೆ. ಈ ಭಾಗದಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಬೋಂದೆಲ್‌ನಲ್ಲಿ ಲಿಖಿತ ಪರೀಕ್ಷೆ ಆಯೋಜಿಸಲಾಗುವುದು ಎಂದು ಅವರು ಹೇಳಿದರು.

ನಿಗದಿ ಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಮಾತ್ರ  ರ‍್ಯಾಲಿಯಲ್ಲಿ ಭಾಗವಹಿಸಲು ಅರ್ಹರಾಗುತ್ತಾರೆ. ಅರ್ಜಿ ಸಲ್ಲಿಸಿದ ಬಳಿಕ ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ಆನ್‌ಲೈನ್ ಮೂಲಕ ಮೇ 1ರ ನಂತರ ಡೌನ್‌ಲೋಡ್ ಮಾಡಿಕೊಳ್ಳಬಹುದು. ನಿಗದಿಪಡಿಸಿದ ಅಂಕದೊಂದಿಗೆ ಎಸೆಸ್ಸೆಲ್ಸಿ ಮತ್ತು ಪಿಯುಸಿ ತೇರ್ಗಡೆಯಾದ ಅಭ್ಯರ್ಥಿಗಳು ಭಾಗವಹಿಸಲು ಅರ್ಹರು ಎಂದವರು ತಿಳಿಸಿದರು.

ಬಾಗಲಕೋಟೆ, ವಿಜಯಪುರ, ಧಾರವಾಡ, ಉತ್ತರ ಕನ್ನಡ, ದ.ಕ., ಉಡುಪಿ ಸೇರಿದಂತೆ ರಾಜ್ಯದ 11 ಜಿಲ್ಲಾ ಸೈನಿಕ ಶಾಲೆಗಳ ಮೂಲಕ ನೇಮಕಾತಿ ನಡೆಯುತ್ತಿದೆ. ಅವಿವಾಹಿತ ಪುರುಷ ಅಭ್ಯರ್ಥಿಗಳಿಗೆ ಸೋಲ್ಜರ್ ಜನರಲ್ ಡ್ಯೂಟಿ, ಸೋಲ್ಜರ್(ಕ್ಲರ್ಕ್, ಸ್ಟೋರ್ ಕೀಪರ್) ಸೋಲ್ಜರ್ ಕುಶಲಕರ್ಮಿ, ಸೋಲ್ಜರ್ ತಾಂತ್ರಿಕ ಮತ್ತು ಸೋಲ್ಜರ್‌ ನರ್ಸಿಂಗ್ ಸಹಾಯಕ ಹೀಗೆ ವಿವಿಧ ಹುದ್ದೆಗಳು ಇರಲಿವೆ. ಸಿಪಾಯಿ ಜಿ.ಡಿ. ಹುದ್ದೆಗೆ ಅರ್ಜಿ ಸಲ್ಲಿಸುವವರು ಎಸೆಸೆಲ್ಸಿ ತೇರ್ಗಡೆಯಾಗಿರಬೇಕು. ಶೇ.45 ಅಂಕಗಳೊಂದಿಗೆ ಪ್ರತಿ ವಿಷಯದಲ್ಲಿ ಕನಿಷ್ಠ ಶೇ.33 ಅಂಕ ಹೊಂದಿರಬೇಕು. ಹದಿನೇಳುವರೆಯಿಂದ 21 ವಯಸ್ಸಿನೊಳಗಿರಬೇಕು. ಸಿಪಾಯಿ ಕ್ಲಾರ್ಕ್, ಎಸ್‌ಕೆಟಿ ಹುದ್ದೆಗೆ ಪಿಯುಸಿ ವಿದ್ಯಾರ್ಹತೆ ಅವಶ್ಯವಿದ್ದು ಶೇ.50 ಅಂಕಗಳನ್ನು ಪಡಿದಿರಬೇಕು. ಹದಿನೇಳುವರೆಯಿಂದ 23 ವಯಸ್ಸಿನೊಳಗಿರಬೇಕು. ಸಿಪಾಯಿ ಟೆಕ್ನಿಕಲ್ ಮತ್ತು ಸಿಪಾಯಿ ನರ್ಸಿಂಗ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಪಿಯುಸಿ ತೇರ್ಗಡೆಯಾಗಿರಬೇಕು ಮತ್ತು ಹದಿನೇಳುವರೆಯಿಂದ 23 ವಯಸ್ಸಿನೊಳಗಿನವರಾಗಿರಬೇಕು. ಸಿಪಾಯಿ ಟ್ರೇಡ್‌ಮ್ಯಾನ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಎಸೆಸೆಲ್ಸಿ ಪಾಸಾಗಿರಬೇಕು ಮತ್ತು ಹದಿನೇಳುವರೆಯಿಂದ 23 ವಯಸ್ಸಿನೊಳಗಿನವರಾಗಿರಬೇಕು ಎಂದವರು ವಿವರಿಸಿದರು.

ಆರಂಭದಲ್ಲಿ ಶಾರೀರಿಕ ಪರೀಕ್ಷೆ ನಡೆಯಲಿದೆ. ಅಭ್ಯರ್ಥಿಯು 5 ನಿಮಿಷ 30 ಸಕೆಂಡಿನಲ್ಲಿ 1.6ಕಿಮೀ. ದೂರವನ್ನು ಕ್ರಮಿಸುವ ಸಾಮರ್ಥ್ಯ ಹೊಂದಿರಬೇಕು. 166ಸೆಂಟಿಮೀಟರ್ ಎತ್ತರ, ಕನಿಷ್ಠ 50 ಕೆ.ಜಿ. ತೂಕ ಇತ್ಯಾದಿ ಅರ್ಹತೆಯೂ ಅವಶ್ಯ. ವೈದ್ಯಕೀಯ ಪರೀಕ್ಷೆ ಬಳಿಕ ಸಾಮಾನ್ಯ ವಿಷಯಕ್ಕೆ ಸಂಬಂಧಿಸಿ ಲಿಖಿತ ಪರೀಕ್ಷೆ ಆಯಾ ಜಿಲ್ಲಾ ಕೇಂದ್ರಗಳಲ್ಲಿ ನಡೆಯಲಿದೆ ಎಂದು ಪ್ರಶಾಂತ್ ವಿವರಿಸಿದರು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಕುಮಾರ್, ವಾರ್ತಾಧಿಕಾರಿ ಖಾದರ್ ಷಾ  ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News