' ನಂಡೆ ಪೆಂಙಳ್ ' ಅಭಿಯಾನಕ್ಕೆ ಚಾಲನೆ
ಮಂಗಳೂರು, ಮಾ. 6 : 30 ವರ್ಷ ದಾಟಿದರೂ ವಿವಿಧ ಕಾರಣಗಳಿಂದಾಗಿ ವಿವಾಹವಾಗದೇ ಉಳಿದಿರುವ ದಕ್ಷಿಣ ಕನ್ನಡ ಜಿಲ್ಲೆಯ ಮುಸ್ಲಿಂ ಮಹಿಳೆಯರಿಗೆ ವಿವಾಹ ಭಾಗ್ಯ ನೀಡುವ ವಿಶಿಷ್ಟ ಯೋಜನೆ ' ನಂಡೆ ಪೆಂಙಳ್ ' ಅನ್ನು ಟ್ಯಾಲೆಂಟ್ ರಿಸರ್ಚ್ ಪೌಂಡೇಷನ್ ಪ್ರಾರಂಭಿಸಿದೆ.
ಈ ನಿಟ್ಟಿನಲ್ಲಿ ಎಲ್ಲ ಸಮಾನ ಮನಸ್ಕರ ಸಕ್ರಿಯ ಸಹಭಾಗಿತ್ವಕ್ಕಾಗಿ ಇತ್ತೀಚಿಗೆ ನಗರದ ಖಾಸಗಿ ಹೋಟೆಲ್ ನಲ್ಲಿ ಗಣ್ಯರ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ನ ಅಧ್ಯಕ್ಷ ಎಸ್.ಎಂ. ರಶೀದ್ ಹಾಜಿ ಅವರು, ಟಿಆರ್‌ಎಫ್ ಕಳೆದೊಂದು ದಶಕದಿಂದ ಬೇರೆ ಯಾವುದೇ ಸಂಘಟನೆ ಕೈಗೆತ್ತಿಕೊಳ್ಳದಂತಹ ವಿಭಿನ್ನ, ವಿಶಿಷ್ಟ ಸಮಾಜಮುಖಿ ಯೋಜನೆಗಳನ್ನು ಅನುಷ್ಠಾನ ಮಾಡುತ್ತಾ ಬಂದಿದೆ. ಇದರಿಂದ ದೊಡ್ಡ ಸಂಖ್ಯೆಯಲ್ಲಿ ಅರ್ಹ ಜನರಿಗೆ ಉಪಕಾರವಾಗಿದೆ. ಈ ನಿಟ್ಟಿನಲ್ಲಿ ಟಿಆರ್‌ಎಫ್ ಆರಂಭಿಸಿರುವ ಈ ಹೊಸ ಯೋಜನೆಗೆ ಎಲ್ಲರೂ ಸಂಪೂರ್ಣ ಸಹಕಾರ ನೀಡಬೇಕು ಎಂದು ಕರೆ ನೀಡಿದರು.
ಟ್ಯಾಲೆಂಟ್ ಸಂಸ್ಥೆಯ ಸಲಹೆಗಾರ ರಫೀಕ್ ಮಾಸ್ಟರ್ ಅವರು 30 ವರ್ಷ ದಾಟಿದರೂ ವಿವಿಧ ಕಾರಣಗಳಿಂದಾಗಿ ವಿವಾಹವಾಗದೇ ಉಳಿದಿರುವ ದಕ್ಷಿಣ ಕನ್ನಡ ಜಿಲ್ಲೆಯ ಮುಸ್ಲಿಂ ಮಹಿಳೆಯರ ಸ್ಥಿತಿಗತಿ ಹಾಗು ಅಂಕಿ ಅಂಶಗಳ ವಿವರಗಳನ್ನು ಸಭೆಯ ಮುಂದಿಟ್ಟು ಈ ಯೋಜನೆಯ ಮಹತ್ವ ಹಾಗು ಅನಿವಾರ್ಯತೆಯನ್ನು ವಿವರಿಸಿದರು.
ಬಳಿಕ ಮಾತನಾಡಿದ ಮೌಲಾನಾ ಅಬ್ದುಲ್ ಅಜ್ಹೀಜ್ಹ್ ದಾರಿಮಿ ಅವರು, ವಿವಾಹವಾಗದೆ ಉಳಿದು ಸಂಕಟ ಪಡುತ್ತಿರುವ ಕುಟುಂಬಗಳ ಸಂಕಟವನ್ನು ತಾನು ಸ್ವತಃ ನೋಡಿದ್ದೇನೆ. ಇನ್ನು ತಮಗೆ ಮದುವೆ ಸಾಧ್ಯವೇ ಇಲ್ಲ ಎಂಬ ಭಾವನೆ ಈ ಹೆಣ್ಣು ಮಕ್ಕಳು ಹಾಗೂ ಅವರ ಹೆತ್ತವರಿಗೆ ಬಂದು ಬಿಡುತ್ತದೆ. ಆಗ ಅವರು ಎಲ್ಲವನ್ನೂ, ಎಲ್ಲರನ್ನೂ ದೂರ ಮಾಡಿ ದ್ವೀಪದಂತೆ ಬದುಕುವ ನಿರ್ಧಾರಕ್ಕೆ ಬರುತ್ತಾರೆ. ಇನ್ನು ಕೆಲವರು ಹೆತ್ತವರು ಅನಿವಾರ್ಯವಾಗಿ ಸಿಕ್ಕಿದವರಿಗೆ ಅವರ ಪೂರ್ವಾಪರ ಅರಿತುಕೊಳ್ಳದೆ ಅಥವಾ ಗೊತ್ತಿದ್ದರೂ ಮದುವೆ ಮಾಡಿ ಕೊಡುತ್ತಾರೆ. ಆ ವ್ಯಕ್ತಿ ಒಂದೆರಡು ತಿಂಗಳು ಜೊತೆಗಿದ್ದು ನಂತರ ಕಾಣೆಯಾಗಿಬಿಡುತ್ತಾರೆ. ಇಂತಹ ಯಾತನಾಮಯ ಪರಿಸ್ಥಿತಿಯಲ್ಲಿ ಅದೆಷ್ಟೋ ಕುಟುಂಬಗಳು ನಮ್ಮ ಆಸುಪಾಸಿನಲ್ಲೇ ಇವೆ. ಆದರೂ ನಾವು ಅದರ ಪರಿವೆಯೇ ಇಲ್ಲದೆ ನಮ್ಮದೇ ಲೋಕದಲ್ಲಿ ವಿಲಾಸಿ ಜೀವನ ನಡೆಸುತ್ತಿದ್ದೇವೆ. ಅವರ ನೋವುಗಳಿಗೆ ಸ್ಪಂದಿಸದಿದ್ದರೆ ನಾಳೆ ನಾವು ಇದಕ್ಕೆ ಪರಲೋಕದಲ್ಲಿ ಉತ್ತರ ನೀಡಬೇಕಾದೀತು ಎಂದು ಎಚ್ಚರಿಸಿದರು.
' ನಂದೆ ಪೆಂಜಳ್ ' ಅಭಿಯಾನದ ಸಂಚಾಲಕ ಮುಹಮ್ಮದ್ ಯು. ಬಿ. ಮಾತನಾಡಿ ಕ್ರಿಯಾಯೋಜನೆಯನ್ನು ಸಭೆಯ ಮುಂದಿಟ್ಟರು.
ಟ್ಯಾಲೆಂಟ್‌ನ ಸ್ಥಾಪಕಾಧ್ಯಕ್ಷ ಅಬ್ದುಲ್ ರವೂಫ್ ಪುತ್ತಿಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ನೂರಾರು ಸಹೋದರಿಯರಿಗೆ ದಾಂಪತ್ಯ ಭಾಗ್ಯ ಕಲ್ಪಿಸಿದ ಸಮಾಜ ಸೇವಕ ನೌಷಾದ್ ಹಾಜಿ ಸೂರಲ್ಪಾಡಿ ಮತ್ತು ತನ್ನ ಮಗಳ ಮದುವೆಯ ಸಂದರ್ಭದಲ್ಲಿ ಸಮುದಾಯದ ಆರು ಹೆಣ್ಮಕ್ಕಳಿಗೆ ಮದುವೆ ಮಾಡಿಸಿದ ಇಬ್ರಾಹಿಂ ಹಾಜಿ, ಮೊಗರ್ಪಣೆ ಸುಳ್ಯ ಇವರಿಗೆ ’ ನಲ್ಲೆ ಆಂಙಳೆ ’ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು. ಕೊನೆಯಲ್ಲಿ ’ ನಂಡೆ ಪೆಂಙಳ್ ’ ಅಭಿಯಾನ ಸ್ವಾಗತ ಸಮಿತಿಯನ್ನು ರಚಿಸಲಾಯಿತು.
ಹಾಶಿರ್ ಸುಲೈಮಾನ್ ಶೇಖ್ ಕಿರಾಅತ್ ಪಠಿಸಿದರು. ಟ್ಯಾಲೆಂಟ್ ಅಧ್ಯಕ್ಷ ರಿಯಾರ್ ಕಣ್ಣೂರು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಡಿ.ಅಬ್ದುಲ್ ಹಮೀದ್ ಕಣ್ಣೂರು ಧನ್ಯವಾದಗೈದರು. ಉಪಾಧ್ಯಕ್ಷ ಸೈದುದ್ದೀನ್ ಬಜ್ಪೆ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲೆಯ ಪ್ರಮುಖ ಉದ್ಯಮಿಗಳು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.