ವಿದೇಶದಲ್ಲಿ ಸಮಸ್ಯೆಗೊಳಗಾಗಿ ಹಿಂದಿರುಗಿದವರಿಗೆ ವಿಶೇಷ ಪ್ಯಾಕೇಜ್: ಸಚಿವ ಖಾದರ್
ಮಂಗಳುರು, ಮಾ.6: ವಿದೇಶದಲ್ಲಿ ನೌಕರಿಯಲ್ಲಿರುವ ರಾಜ್ಯದ ಯಾರೇ ಆದರೂ ಸಮಸ್ಯೆಗೊಳಗಾಗಿ ಹಿಂದಿರುಗಿದರೆ ಅವರ ಮುಂದಿನ ಜೀವನ ನಿರ್ವಹಣೆ ನಿಟ್ಟಿನಲ್ಲಿ ಬಜೆಟ್‌ನಲ್ಲಿ ವಿಶೇಷ ಪ್ಯಾಕೇಜ್ ಘೋಷಿಸುವ ಯೋಚನೆ ಮುಖ್ಯಮಂತ್ರಿಯ ಮುಂದಿದೆ ಎಂದು ಸಚಿವ ಯು.ಟಿ.ಖಾದರ್ ಹೇಳಿದರು.
ಕಲ್ಲಾಪು ಕಾಂಗ್ರೆಸ್ ಸಮಿತಿ ಹಾಗೂ ಬ್ಲಾಕ್ ಕಾಂಗ್ರೆಸ್ ಜಂಟಿ ಆಶ್ರಯದಲ್ಲಿ ಕಲ್ಲಾಪು ಮೈದಾನದಲ್ಲಿ ರವಿವಾರ ನಡೆದ ಜನವೇದನಾ ಸಮಾವೇಶದಲ್ಲಿ ಅವರು ಮಾತನಾಡಿದರು.
ಹಿಂದೆ ಕಲ್ಲಾಪುವಿನಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಇನ್ನೂ ಅಭಿವೃದ್ಧಿಯಾಗಬೇಕಾಗಿದೆ. ಉಪಚುನಾವನೆ ನಡೆದ ಎರಡು ವಾರ್ಡ್‌ಗಳ ಅಭಿವೃದ್ದಿಗೆ 2 ಕೋ.ರೂ. ಅನುದಾನ ಬಿಡುಗಡೆಗೊಳಿಸಲಾಗುವುದು ಎಂದರು.
ಫೆ.26ರ ರವಿವಾರ ಬೆಳಗ್ಗೆನಿಂದ ಸಂಜೆಯವರೆಗೂ ಕ್ಷೇತ್ರದಲ್ಲೇ ತಿರುಗಾಡಿಕೊಂಡಿದ್ದ ನಾನು ಬಜೆಟ್ ಕುರಿತಾದ ಸಭೆಯಲ್ಲಿ ಭಾಗವಹಿಸುವ ಸಲುವಾಗಿ ಬೆಂಗಳೂರಿಗೆ ಹೋಗಿದ್ದೇನೆಯೇ ಹೊರತು ಯಾರೋ ಮುತ್ತಿಗೆ ಹಾಕುತ್ತಾರೆ ಎಂದು ಹೆದರಿ ಹೋಗಿದ್ದಲ್ಲ. ಒಂದು ರಾಜ್ಯದ ಮುಖ್ಯಮಂತ್ರಿ ಮಂಗಳೂರಿಗೆ ಬರುವುದನ್ನು ವಿರೋಧಿಸಿ ಹರತಾಳಕ್ಕೆ ಕರೆ ನೀಡಿ ಬಸ್ಸಿಗೆ ಕಲ್ಲು ಹೊಡೆದರೆ, ಕಚೇರಿಗೆ ಬೆಂಕಿ ಹಾಕಿದರೆ, ಮಕ್ಕಳ ಪರೀಕ್ಷೆಗೆ ತಡೆಯೊಡ್ಡಬಹುದು. ಆದರೆ ನನ್ನ ಹೇಳಿಕೆ ಮಾತ್ರ ದೊಡ್ಡ ವಿಷಯವಾಗುತ್ತದೆ. ಬೆಂಗಳೂರಿನಲ್ಲಿ ಸಭೆ ಇಲ್ಲದಿದ್ದರೆ ಎಷ್ಟೇ ಜನ ಮುತ್ತಿಗೆ ಹಾಕಲು ಸೇರಿದ್ದರೂ ನಾನು ಆ ಸಭೆಯಲ್ಲಿ ಭಾಗವಹಿಸುತ್ತಿದ್ದೆ. ನನಗೆ ಸಂಘ ಕಟ್ಟಲೂ ಗೊತ್ತು, ಒಡೆಯಲೂ ಗೊತ್ತು ಎಂದು ಯು.ಟಿ.ಖಾದರ್ ಬಿಜೆಪಿರಿಗೆ ತಿರುಗೇಟು ನೀಡಿದರು.
ಶಾಸಕ ಜೆ.ಆರ್.ಲೋಬೊ ಮಾತನಾಡಿ ಯುಪಿಎ ಸರಕಾರದ ಅವಧಿಯಲ್ಲಿ ಕಚ್ಛಾ ತೈಲ ಬೆಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬ್ಯಾರಲ್‌ಗೆ 140 ಡಾಲರ್ ಇದ್ದರೆ, ಇಂದು 40 ಡಾಲರ್‌ಗೆ ಕುಸಿದಿದೆ, ಆದರೂ ದೇಶದಲ್ಲಿ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಾಗುತ್ತಲೇ ಇದೆ. ನೋಟು ನಿಷೇಧದಿಂದ ದೇಶ 30 ವರ್ಷ ಹಿಂದಕ್ಕೆ ಹೋಗಿದ್ದು, ಮಾಧ್ಯಮಗಳಲ್ಲಿ ಪ್ರಧಾನಿ ದಿನಕ್ಕೊಂದು ಹೇಳಿಕೆ ನೀಡಿ ಆತಂಕ ಹುಟ್ಟಿಸುತ್ತಿದ್ದಾರೆ ಎಂದರು.
ಉಪಚುನಾವಣೆಯಲ್ಲಿ ಜಯಗಳಿಸಿದ ಉಸ್ಮಾನ್ ಕಲ್ಲಾಪು ಮತ್ತು ಬಾಝಿಲ್ ಡಿಸೋಜ, ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಕಮಲಮ್ಮ ಮತ್ತು ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ ಅವರನ್ನು ಸನ್ಮಾನಿಸಲಾಯಿತು.
ವಿಧಾನಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ, ಉಳ್ಳಾಲ ನಗರಸಭಾಧ್ಯಕ್ಷ ಹುಸೈನ್ ಕುಂಞಿಮೋನು, ಸದಸ್ಯರಾದ ಮಹಮ್ಮದ್ ಮುಕಚ್ಚೇರಿ, ಮುಸ್ತಫಾ ಯು.ಎ, ದಿನೇಶ್ ರೈ, ರಝಿಯಾ ಬಾನು, ಇಸ್ಮಾಯಿಲ್ ಯು.ಎ., ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ಸದಸ್ಯ ಅಬೂಬಕರ್ ಸಿದ್ದೀಕ್ ಕೊಳರಂಗೆ, ಕಾಂಗ್ರೆಸ್ ಮುಖಂಡರಾದ ಅಬ್ದುರ್ರಹ್ಮಾನ್ ಕೋಡಿಜಾಲ್, ಸುರೇಶ್ ಭಟ್ನಗರ, ಗಣೇಶ್ ತಲಪಾಡಿ, ಸಂತೋಷ್ ಶೆಟ್ಟಿ, ವಕ್ಫ್ ಬೋರ್ಡ್ ಉಪಾಧ್ಯಕ್ಷ ಮಹಮ್ಮದ್ ಶರೀಫ್, ತಾಪಂ ಮಾಜಿ ಸದಸ್ಯ ಮುಹಮ್ಮದ್ ಮುಸ್ತಫಾ ಮಲಾರ್, ಸಮಾಜ ಸೇವಕ ರಾಝಿಕ್ ಉಳ್ಳಾಲ್ ಉಪಸ್ಥಿತರಿದ್ದರು.
ಯು.ಪಿ.ಅಯೂಬ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು.