×
Ad

ಸಂವಿಧಾನ ಪ್ರತಿಪಾದಿಸುವ ಪಕ್ಷದ ಆಡಳಿವಿರುವ ರಾಜ್ಯಗಳು ಅಭಿವೃದ್ಧಿಯಾಗುತ್ತಿವೆ: ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್

Update: 2017-03-06 19:37 IST

ಕೊಣಾಜೆ, ಮಾ.6: ಹಿಂದುಳಿದ ವರ್ಗದವರ ಮೇಲೆ ದೌರ್ಜನ್ಯ ಮತ್ತು ಜಾತಿ ಪದ್ಧತಿಯನ್ನು ಮರು ಸ್ಥಾಪಿಸಲು ಯತ್ನಿಸುತ್ತಿರುವ ರಾಜಕಾರಣದಿಂದ ಜನರ ದಿಕ್ಕು ತಪ್ಪಿಸುವ ಪ್ರಯತ್ನ ನಡೆಯುತ್ತಿದೆ. ಸಂವಿಧಾನವನ್ನು ಪ್ರತಿಪಾದಿಸುವ ಪಕ್ಷದ ಆಡಳಿತವಿರುವ ರಾಜ್ಯಗಳಲ್ಲಿ ಎಲ್ಲಾ ರೀತಿಯ ಅಭಿವೃದ್ಧಿಗಳು ನಡೆಯುತ್ತಿವೆ ಎಂದು ಎಂದು ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ಅಭಿಪ್ರಾಯಪಟ್ಟರು.

ಅವರು ಮಂಗಳೂರು ವಿಶ್ವವಿದ್ಯಾನಿಲಯ ಇದರ ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠದ ವತಿಯಿಂದ ಎಂ.ಬಿ.ಎ ಸೆಮಿನಾರ್ ಹಾಲ್‌ನಲ್ಲಿ ಸೋಮವಾರ ನಡೆದ ಬ್ರಹ್ಮಶ್ರೀ ನಾರಾಯಣ ಗುರು ಜೀವನ ತತ್ವ ಪ್ರಸರಣ ಉಪನ್ಯಾಸ ಮಾಲಿಕೆಯನ್ನು ಉದ್ಘಾಟಿಸಿ ಮಾತನಾಡಿದರು.

ದೇಶದಲ್ಲಿ ಜಾತಿಪದ್ದತಿ ವ್ಯವಸ್ಥೆ ದೂರವಾಗಿದ್ದರೂ ಕೆಲವೊಂದು ಆಡಳಿತ ನಡೆಸುವ ರಾಜ್ಯಗಳಲ್ಲಿ ಶೇ.20 ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಮೀಸಲಾತಿಗಳನ್ನು ಒದಗಿಸಲಾಗುತ್ತಿದ್ದು, ಇದು ಹಿಂದಿನ ಜಾತಿಪದ್ಧತಿಗಳನ್ನು ಮತ್ತೆ ನೆನಪಿಸುವಂತಹ ವಾತಾವರಣ ನಿರ್ಮಿಸುವುದರ ಮೂಲಕ ಅಂತಹ ರಾಜ್ಯಗಳಲ್ಲಿ ಅಭಿವೃದ್ಧಿಯೂ ಕುಂಠಿತವಾಗಿರುವುದನ್ನು ನಾವು ಗಮನಿಸಬಹುದು ಎಂದು ಹೇಳಿದರು.

ನಾರಾಯಣ ಗುರುಗಳ ತತ್ವ ಸಂದೇಶದ ಪಾಲನೆಯಿಂದ ಸಮಾಜದಲ್ಲಿ ಹಿಂದೆ ಇದ್ದಂತಹ ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರುತ್ತಿದ್ದರೆ, ಹಿಂದುಳಿದ ವರ್ಗದವರು ಸಾಕಷ್ಟು ಅಭಿವೃದ್ಧಿಯನ್ನು ಕಂಡಿದ್ದಾರೆ. ಇಂತಹ ಆದರ್ಶ ವ್ಯಕ್ತಿಯ ಕುರಿತು ವಿದ್ಯಾರ್ಥಿಗಳು ಸಂಶೋಧನೆಯನ್ನು ನಡೆಸುವ ಮೂಲಕ ಅವರ ತತ್ವಾದರ್ಶಗಳನ್ನು ಜಗತ್ತಿಗೆ ಸಾರುವ ಕೆಲಸ ಆಗಬೇಕಿದೆ. ಇದಕ್ಕೆ ವಿಶ್ವವಿದ್ಯಾನಿಲಯಗಳು ಪ್ರೋತ್ಸಾಹಿಸಬೇಕಿದೆ ಎಂದು ಹೇಳಿದರು.

19ನೇ ಶತಮಾನದಲ್ಲಿ ಕೇರಳದಲ್ಲಿ ಮಾತ್ರವಲ್ಲದೇ ದೇಶದ ವಿವಿಧ ಭಾಗಗಳಲ್ಲಿ ಇದ್ದ ವರ್ಣಬೇಧ ಹಾಗೂ ಜಾತಿಪದ್ದತಿ ವ್ಯವಸ್ಥೆಯ ವಿರುದ್ಧ ನಾರಾಯಣ ಗುರು, ಮಹಾತ್ಮ ಫುಲೆ, ಬಸವಣ್ಣ, ಪೆರಿಯಾರ್‌ರಾಮಸ್ವಾಮಿ, ಗುರುನಾನಕ್ ನಂತಹ ಸಮಾಜ ಸುಧಾರಕರು ಹೋರಾಡಿ ಸಮಾಜದಲ್ಲಿ ಹೊಸ ಬದಲಾವಣೆಯನ್ನು ಹುಟ್ಟು ಹಾಕಿದರು. ಸಮಾನತೆ ಹಾಗೂ ಏಕತೆಯ ಉದ್ದೇಶವನ್ನಿಟ್ಟುಕೊಂಡು ಸಮಾಜ ಸುಧಾರಣೆಯಲ್ಲಿ ಎಲ್ಲರೂ ಪಾಲ್ಗೊಂಡಿದ್ದರು ಇಂತಹ ಮಹಾತ್ಮರ ಆದರ್ಶಗಳನ್ನು ನಾವು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

 ಕೇರಳ ವಿಶ್ವವಿದ್ಯಾಲಯದ ಸೆಂಟರ್ ಫಾರ್ ಟ್ರಾನ್ಸ್‌ಲೇಶನ್ ಸ್ಟಡಿಸ್ ನ ನಿರ್ದೇಶಕ ಡಾ.ಎನ್.ಸುರೇಶ್ ಅವರು ಮಾತನಾಡಿ, 19ನೇ ಶತಮಾನದಲ್ಲಿ ನಾರಾಯಣ ಗುರುಗಳು ಕೇರಳದಲ್ಲಿ ನಡೆಸಿದ ನವೋದಯ ಎಂಬ ವಿಷಯದ ಬಗ್ಗೆ ಮಾತನಾಡಿ ಮಧ್ಯಮ ವರ್ಗದಲ್ಲಿ ಹುಟ್ಟಿದ ನಾರಾಯಣ ಗುರು ಬಾಲ್ಯದಲ್ಲಿಯೇ ಜಾತಿಪದ್ದತಿಯ ವಿರುದ್ದ ಧ್ವನಿ ಎತ್ತಿದವರು. ಕೇರಳದಲ್ಲಿ ಬೇರೂರಿದ್ದ ಇಳವ ಹಾಗೂ ನಾಯರ್ ಎಂಬ ಜಾತಿಗಳ ಮಧ್ಯೆ ಇದ್ದ ವರ್ಣಬೇಧವನ್ನು ದೂರ ಮಾಡಿ ಅಸ್ಪಶ್ಯತೆಯನ್ನು ಹೋಗಲಾಡಿಸಿ ಒಂದೇ ಜಾತಿ. ಒಂದೇ ಮತ ಹಾಗೂ ಒಂದೇ ಧರ್ಮ ಎಂಬ ಸಂದೇಶವನ್ನು ನೀಡಿದವರು ನಾರಾಯಣ ಗುರುಗಳು ಎಂದರು.

ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಭೈರಪ್ಪ ಅಧ್ಯಕ್ಷತೆ ವಹಿಸಿದ್ದರು. ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠ ಇದರ ನಿರ್ದೇಶಕ ಮುದ್ದು ಮೂಡಬೆಳ್ಳೆ ಪ್ರಸ್ತಾವಿಕವಾಗಿ ಮಾತನಾಡಿದರು.

ಮಂಗಳೂರು ವಿವಿ ಕುಲಸಚಿವ ಪ್ರೊ.ಕೆ.ಎಂ.ಲೋಕೇಶ್ ಸ್ವಾಗತಿಸಿದರು. ಡಾ.ಸುಜಯಾ ಸುವರ್ಣ ಕಾರ್ಯಕ್ರಮ ನಿರೂಪಿಸಿದರು. ಪ್ರೊ.ಇಸ್ಮಾಯಿಲ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News