×
Ad

ಬಾಬರಿ ಮಸೀದಿ ದ್ವಂಸ ಪ್ರಕರಣ: ಅಡ್ವಾಣಿ, ಜೋಷಿ, ಉಮಾ ಸೇರಿದಂತೆ ಬಿಜೆಪಿ ನಾಯಕರಿಗೆ ಕಂಟಕ

Update: 2017-03-06 19:42 IST

ಹೊಸದಿಲ್ಲಿ, ಮಾ.6: ಬಾಬರಿ ಮಸೀದಿ ದ್ವಂಸ ಪ್ರಕರಣದಲ್ಲಿ ಪಿತೂರಿ ನಡೆಸಿದ್ದಾರೆ ಎಂದು ಬಿಜೆಪಿಯ ಉನ್ನತ ನಾಯಕರಾದ ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ್ ಜೋಷಿ ಮತ್ತು ಉಮಾ ಭಾರತಿಯವರ ವಿರುದ್ಧ ಇರುವ ದೋಷಾರೋಪವನ್ನು ಪುನರೂರ್ಜಿತಗೊಳಿಸುವ ಬಗ್ಗೆ ಪರಿಶೀಲನೆ ನಡೆಸುವ ಸಾಧ್ಯತೆಯಿದೆ ಎಂದು ಸುಪ್ರೀಂಕೋರ್ಟ್ ಸೋಮವಾರ ತಿಳಿಸಿದೆ.

ಈ ಕುರಿತು ಮುಂದಿನ ವಿಚಾರಣೆಯನ್ನು ವಿಭಾಗೀಯ ಪೀಠವೊಂದು ಮಾ.22ಕ್ಕೆ ನಿಗದಿಗೊಳಿಸಿದೆ.

ಬಾಬರಿ ಮಸೀದಿ ದ್ವಂಸಗೊಂಡ ಸಂದರ್ಭ ಉತ್ತರಪ್ರದೇಶ ಮುಖ್ಯಮಂತ್ರಿಯಾಗಿದ್ದ ಕಲ್ಯಾಣ್ ಸಿಂಗ್ ಸೇರಿದಂತೆ, ಅಡ್ವಾಣಿ , ಜೋಷಿ ಮತ್ತು ಉಮಾ ಭಾರತಿ ವಿರುದ್ಧದ ಪಿತೂರಿ ದೋಷಾರೋಪವನ್ನು ಕೈಬಿಟ್ಟಿರುವುದನ್ನು ಪ್ರಶ್ನಿಸಿ ಸಿಬಿಐ ಮತ್ತು ಹಾಜಿ ಮಹಬೂಬ್ ಅಹಮದ್ ಸಲ್ಲಿಸಿದ್ದ ಅರ್ಜಿಯ ಕುರಿತು ಸುಪ್ರೀಂಕೋರ್ಟ್ ವಿಚಾರಣೆ ನಡೆಸಿತು. ಈ ಮುಖಂಡರು ಒಳಗೊಂಡಿರುವ ಲಕ್ನೊ ಮತ್ತು ರಾಯ್‌ಬರೆಲಿ ಪ್ರಕರಣವನ್ನು ಒಟ್ಟು ಸೇರಿಸಿ ವಿಚಾರಣೆ ನಡೆಸುವ ಸಾಧ್ಯತೆಯಿದೆ. ಪ್ರಕರಣದಲ್ಲಿ ಒಳಗೊಂಡಿರುವ ಜನರ ವಿರುದ್ಧದ ವಿಚಾರಣೆಯಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ 2015ರಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಕೋರ್ಟ್, ಪ್ರಕರಣದ ಜಂಟಿ ವಿಚಾರಣೆ ಬಗ್ಗೆ ಒಲವು ತೋರಿತ್ತು.

    1992ರಲ್ಲಿ ಬಾಬರಿ ಮಸೀದಿ ದ್ವಂಸ ಪ್ರಕರಣದಲ್ಲಿ ಅರೋಪಿಗಳ ವಿರುದ್ಧ ವಿಚಾರಣೆ ನಡೆಸಬೇಕು ಎಂಬ ಅರ್ಜಿಯ ಕುರಿತು ಉತ್ತರಿಸುವಂತೆ ಅಡ್ವಾಣಿ ಮತ್ತು ಇತರ 19 ಮಂದಿಗೆ ಕೋರ್ಟ್ ತಿಳಿಸಿದೆ. ಇವರು ದೋಷಿಗಳೆಂದು ಸಿಬಿಐ ಹೇಳಿದ್ದರೂ, 2010ರಲ್ಲಿ ಅಲ್ಲಹಾಬಾದ್ ಹೈಕೋರ್ಟ್ ಎತ್ತಿಹಿಡಿದ ನಿರ್ಧಾರದಂತೆ ಇವರನ್ನು ವಿಚಾರಣಾ ನ್ಯಾಯಾಲಯ ಆರೋಪಮುಕ್ತಗೊಳಿಸಿತ್ತು. ಪ್ರಕರಣದಲ್ಲಿ ಆಡಳಿತ ಪಕ್ಷದ ಹಿರಿಯ ಮುಖಂಡರ ಪಾತ್ರದ ಕುರಿತ ಸುಪ್ತ, ಆದರೆ ತೀರ್ಮಾನವಾಗದ ಪ್ರಶ್ನೆಯನ್ನು ಸುಪ್ರೀಂಕೋರ್ಟ್‌ನ ಮಧ್ಯಪ್ರವೇಶ ಪುನರೂರ್ಜಿತಗೊಳಿಸಬಹುದು ಎಂಬ ನಿರೀಕ್ಷೆಯಿದೆ.

   ಹೈಕೋರ್ಟ್ ಆದೇಶದ ವಿರುದ್ಧ ಅರ್ಜಿ ಸಲ್ಲಿಸಲು ವಿಳಂಬ ಮಾಡಿರುವುದೇಕೆ ಎಂದೂ ಸಿಬಿಐಯನ್ನು ಸುಪ್ರೀಂಕೋರ್ಟ್ ಪ್ರಶ್ನಿಸಿದೆ. ವಿಚಾರಣಾ ನ್ಯಾಯಾಲಯವು ವಾಸ್ತವಿಕ ದ್ವಂಸ ಮತ್ತು ಪ್ರಚೋದನೆ - ಇವೆರಡನ್ನೂ ಪ್ರತ್ಯೇಕ ಪ್ರಕರಣಗಳಾಗಿ ಇಬ್ಬಾಗಿಸಿದೆ ಎಂದು ಅಹಮದ್ ಅವರ ಅರ್ಜಿಯಲ್ಲಿ ಒತ್ತಿಹೇಳಲಾಗಿದೆ. ಹಲವು ಪ್ರತಿವಾದಿಗಳು ಪ್ರಸಕ್ತ ಸರಕಾರದಲ್ಲಿ ಅಧಿಕಾರಯುತ ಸ್ಥಾನದಲ್ಲಿರುವ ಕಾರಣ ಸಿಬಿಐ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ ಎಂದು ಅಹಮದ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಕಳೆದ ಒಂದು ವರ್ಷದಲ್ಲಿ ಕೇಂದ್ರ ಸರಕಾರ ಬದಲಾಗಿದೆ. ಅದೇ ಪಕ್ಷ(ಬಿಜೆಪಿ) ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿದೆ. ಆದ್ದರಿಂದ ಸಿಬಿಐ ಕಾನೂನಿನ ನಿಯಮವನ್ನು ಗಂಭೀರವಾಗಿ ಎತ್ತಿಹಿಡಿಯದಿರಬಹುದು ಎಂದು ಅರ್ಜಿದಾರರು ದೂರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News