ಮುಂಬೈ ಭಯೋತ್ಪಾದಕ ದಾಳಿಯ ಹಿಂದೆ ಪಾಕ್ ಮೂಲದ ತಂಡ

Update: 2017-03-06 14:29 GMT

 ಹೊಸದಿಲ್ಲಿ, ಮಾ.6: 2008ರಲ್ಲಿ ಮುಂಬೈಯಲ್ಲಿ ನಡೆದಿದ್ದ ಭಯೋತ್ಪಾದಕ ದಾಳಿಯನ್ನು ಪಾಕಿಸ್ತಾನದಲ್ಲಿ ನೆಲೆಯೂರಿರುವ ಭಯೋತ್ಪಾದಕರ ತಂಡವೊಂದು ಕೈಗೊಂಡಿತ್ತು ಎಂದು ಪಾಕಿಸ್ತಾನದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಮಹ್ಮೂದ್ ಅಲಿ ದುರಾನಿ ಒಪ್ಪಿಕೊಂಡಿದ್ದಾರೆ. ಆದರೆ ಈ ದಾಳಿ ಪ್ರಕರಣದಲ್ಲಿ ಪಾಕಿಸ್ತಾನ ಸರಕಾರದ ಯಾವುದೇ ಪಾತ್ರವಿಲ್ಲ ಎಂದೂ ಅವರು ಹೇಳಿದ್ದಾರೆ.

ದಿಲ್ಲಿಯ ರಕ್ಷಣಾ ಅಧ್ಯಯನ ಮತ್ತು ವಿಶ್ಲೇಷಣಾ ಸಂಸ್ಥೆ ಆಯೋಜಿಸಿದ್ದ ಸಮಾವೇಶದಲ್ಲಿ ಭಯೋತ್ಪಾದಕತೆಯ ವಿರುದ್ಧ ಹೋರಾಟ ಎಂಬ ವಿಷಯದ ಬಗ್ಗೆ ಅವರು ಮಾತನಾಡುತ್ತಿದ್ದರು. 26/11ರ ಮುಂಬೈ ದಾಳಿಯನ್ನು ಪಾಕ್ ಮೂಲದ ಭಯೋತ್ಪಾದಕ ತಂಡವೊಂದು ನಡೆಸಿತ್ತು ಮತ್ತು ಇದು ಗಡಿದಾಟಿ ನಡೆಸಿದ ಭಯೋತ್ಪಾದಕ ಕೃತ್ಯಕ್ಕೆ ಒಂದು ಉತ್ತಮ ಉದಾಹರಣೆಯಾಗಿದೆ ಎಂದ ಅವರು, ಜೆಯುಡಿ ಮುಖ್ಯಸ್ಥ ಹಫೀಝ್ ಸಯೀದ್ ಅವರ ವಿರುದ್ಧವೂ ಕಿಡಿ ಕಾರಿದರು. ಹಫೀಝ್ ಸಯೀದ್ ಅವರು ಅಪ್ರಯೋಜಕರು. ನಾವು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದುರಾನಿ ಹೇಳಿದರು.

2008ರ ಮುಂಬೈ ಭಯೋತ್ಪಾದಕ ದಾಳಿ ಪ್ರಕರಣದ ಮರು ವಿಚಾರಣೆ ನಡೆಸುವಂತೆ ಮತ್ತು ಜಮಾತ್ ಉದ್ ದವಾ(ಜೆಯುಡಿ) ಮುಖ್ಯಸ್ಥ ಹಫೀಝ್ ಸಯೀದ್ ವಿರುದ್ಧ ವಿಚಾರಣೆ ಕೈಗೊಳ್ಳುವಂತೆ ಈ ತಿಂಗಳ ಆರಂಭದಲ್ಲಿ ಭಾರತವು ಪಾಕ್ ಸರಕಾರವನ್ನು ಕೇಳಿಕೊಂಡಿತ್ತು . ಮುಂಬೈ ದಾಳಿ ಪ್ರಕರಣದ 24 ಸಾಕ್ಷಿಗಳ ಹೇಳಿಕೆ ದಾಖಲಿಸಲು ಅವರನ್ನು ಪಾಕ್‌ಗೆ ಕಳಿಸಿಕೊಡುವಂತೆ ಪಾಕ್ ಸರಕಾರದ ಕೋರಿಕೆಗೆ ಪ್ರತಿಯಾಗಿ ಭಾರತ ಹೊಸ ಬೇಡಿಕೆ ಮುಂದಿರಿಸಿತ್ತು.

ಈಗ ಸಯೀದ್‌ಗೆ ಲಾಹೋರ್‌ನಲ್ಲಿ ಗೃಹ ಬಂಧನ ವಿಧಿಸಲಾಗಿದೆ.ಮುಂಬೈಯಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಳಿಕವೂ ಹಫೀಝ್‌ಗೆ ಗೃಹ ಬಂಧನ ವಿಧಿಸಲಾಗಿತ್ತು. ಆದರೆ ಅವರನ್ನು ನ್ಯಾಯಾಲಯವು ಬಂಧಮುಕ್ತಗೊಳಿಸಲು ಸೂಚಿಸಿತ್ತು. ಹಫೀಝ್ ತಲೆಗೆ 10 ಮಿಲಿಯ ಡಾಲರ್ ಬಹುಮಾನ ಘೋಷಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News