×
Ad

ಸಂಗೀತ ಜ್ಞಾನ ಹಂಚುವುದೆ ಬದುಕಿನ ಗುರಿ: ಡಾ.ಬಿ.ಕೆ.ಸುಮಿತ್ರಾ

Update: 2017-03-06 20:56 IST

ಉಡುಪಿ, ಮಾ.6: ಸಂಗೀತವೇ ನನ್ನ ದೇವರು ಹಾಗೂ ಸಂಗೀತ ಸೇವೆಯೇ ಪೂಜೆ. ತರಬೇತಿ ಶಿಬಿರಗಳ ಮೂಲಕ ಸಂಗೀತ ಜ್ಞಾನವನ್ನು ಆಸಕ್ತರಿಗೆ ಹಂಚುವುದೇ ತಮ್ಮ ಬದುಕಿನ ಗುರಿಯಾಗಿದೆ ಎಂದು ಚಲನಚಿತ್ರ ಗಾಯಕಿ ನಾಡೋಜ ಡಾ.ಬಿ.ಕೆ.ಸುಮಿತ್ರ ಅಭಿಪ್ರಾಯ ಪಟ್ಟಿದ್ದಾರೆ.

ಹಿರಿಯಡಕದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪಳ್ಳಿ ಶ್ರೀನಿವಾಸ ಹೆಗ್ಡೆ ಟ್ರಸ್ಟ್ ಹಾಗೂ ಕಾಲೇಜಿನ ಮಾನವತಾ ಮತ್ತು ಐ.ಕ್ಯೂ.ಎ.ಸಿ. ವತಿ ಯಿಂದ ಇತ್ತೀಚೆಗೆ ನಡೆದ ಮಧುರ ಮಧುರವೀ ಮಂಜುಳಗಾನ ಎಂಬ ಎರಡು ದಿನಗಳ ಸಂಗೀತ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡುತಿದ್ದರು.

ಸಂಗೀತ ನಿರ್ದೇಶಕ ಬಿ.ವಿ.ಶ್ರೀನಿವಾಸ ಮಾತನಾಡಿ, ಸಂಗೀತಕ್ಕೆ ಎಲ್ಲರನ್ನೂ ಆಕರ್ಷಿಸುವ ಶಕ್ತಿಯಿದೆ. ಸಂಗೀತವನ್ನು ಆರಾಧಿಸುವ ಮನಸ್ಸೂ ಎಲ್ಲರಲ್ಲಿ ಇರುತ್ತದೆ. ಅಂತೆಯೇ ಸಂಗೀತ ಕಲಿಯಬೇಕು, ಹಾಡಬೇಕು ಎನ್ನುವ ಆಸೆಯೂ ಹಲವರಲ್ಲಿ ಇರುತ್ತದೆ. ಸಂಗೀತಾಸಕ್ತಿ ಇರುವ ಮನಸ್ಸುಗಳನ್ನು ಸಂಗೀತದ ಕಡೆ ಹೊರಳಿಸಲು ಸಂಗೀತ ಶಿಬಿರಗಳು ನೆರವಾಗುತ್ತವೆ ಎಂದರು.

ಈ ಸಂದರ್ಭದಲ್ಲಿ ಡಾ.ಬಿ.ಕೆ. ಸುಮಿತ್ರ ಅವರನ್ನು ಗೌರವಿಸಲಾಯಿತು. ಮುಖ್ಯ ಅತಿಥಿಯಾಗಿ ನಟರಾಜ್ ಮಾತನಾಡಿದರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಸೋಜನ್ ಕೆ.ಜಿ. ವಹಿಸಿದ್ದರು. ಐಕ್ಯೂಎಸಿ ಸಂಚಾಲಕಿ ಆಶಾ ಹಾಗೂ ಮಾನವತಾ ಸಂಚಾಲಕಿ ಸುಜಯಾ ಕೆ.ಎಸ್. ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕಿ ಮಮತಾ ಸ್ವಾಗತಿಸಿ, ಸುಜಾತ ಟಿ. ವಂದಿಸಿದರು. ರತಿ ಶೆಟ್ಟಿ ಮತ್ತು ಮಲ್ಲಿಕಾ ಕಾರ್ಯಕ್ರಮ ನಿರೂಪಿಸಿದರು.

ಶಿಬಿರದಲ್ಲಿ ಜಿಲ್ಲೆಯ ಸುಮಾರು 200 ಸಂಗೀತಾಸಕ್ತರು ಡಾ.ಬಿ.ಕೆ. ಸುಮಿತ್ರ ಹಾಗೂ ಸಂಗೀತ ನಿರ್ದೇಶಕ ಬಿ.ವಿ.ಶ್ರೀನಿವಾಸ ಇವರಿಂದ ತರಬೇತಿಯನ್ನು ಪಡೆದರು. ತರಬೇತಿಯಲ್ಲಿ ಭಾವಗೀತೆ, ಜನಪದಗೀತೆ, ದಾಸರ ಪದಗಳು ಹಾಗೂ ಭಕ್ತಿಗೀತೆಗಳನ್ನು ಒಳಗೊಂಡಂತೆ ಹಲವು ಹಾಡುಗಳನ್ನು ಕಲಿಸಿಕೊಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News