ಅರುಣಾಚಲಕ್ಕೆ ದಲಾಯಿಲಾಮಾ ಭೇಟಿಗೆ ಅವಕಾಶ ನೀಡಿದರೆ ತೀವ್ರ ಪರಿಣಾಮ: ಚೀನಾ ಮಾಧ್ಯಮಗಳಲ್ಲಿ ಭಾರತಕ್ಕೆ ಎಚ್ಚರಿಕೆ
ಬೀಜಿಂಗ್, ಮಾ.6: ಟಿಬೆಟಿಯನ್ ಧರ್ಮಗುರು ದಲಾಯಿಲಾಮಾ ಅರುಣಾಚಲದ ‘ವಿವಾದಿತ’ ಪ್ರದೇಶಕ್ಕೆ ಭೇಟಿ ನೀಡಲು ಅವಕಾಶ ನೀಡಿದರೆ ತೀವ್ರ ಪರಿಣಾಮ ಎದುರಿಸಬೇಕಾದೀತು ಎಂದು ಚೀನಾದ ಮಾಧ್ಯಮಗಳಲ್ಲಿ ಎಚ್ಚರಿಕೆ ನೀಡಲಾಗಿದೆ.
ದಕ್ಷಿಣ ಏಶ್ಯಾ ಭಾಗದಲ್ಲಿ ಚೀನಾದ ಹೆಚ್ಚುತ್ತಿರುವ ಆರ್ಥಿಕ ಮತ್ತು ರಾಜಕೀಯ ಪ್ರಭಾವವನ್ನು ಹತ್ತಿಕ್ಕಲು ದಲಾಯಿ ಲಾಮಾರನ್ನು ಭಾರತವು ಟ್ರಂಪ್ ಕಾರ್ಡ್ ರೀತಿಯಲ್ಲಿ ಬಳಸಿಕೊಳ್ಳುತ್ತಿದೆ ಎಂದು ಮಾಧ್ಯಮದಲ್ಲಿ ಆರೋಪಿಸಲಾಗಿದೆ.
ಚೀನಾದ ಆಕ್ಷೇಪಣೆಯ ಹೊರತಾಗಿಯೂ ಚೀನಾ-ಭಾರತ ಗಡಿಭಾಗದ ಅರುಣಾಚಲದ ವಿವಾದಿತ ಪ್ರದೇಶಕ್ಕೆ ದಲಾಯಿ ಲಾಮಾ ಮುಂಬರುವ ವಾರದಲ್ಲಿ ಭೇಟಿ ನೀಡಲು ಭಾರತ ಅವಕಾಶ ನೀಡಿದೆ ಎಂದು ಚೀನಾದ ಸರಕಾರಿ ಒಡೆತನದ ಪತ್ರಿಕೆ ‘ಗ್ಲೋಬಲ್ ಟೈಮ್ಸ್’ನಲ್ಲಿ ತಿಳಿಸಲಾಗಿದೆ. ಚೀನಾವು ಅರುಣಾಚಲ ಪ್ರದೇಶವನ್ನು ದಕ್ಷಿಣ ಟಿಬೆಟ್ ಎಂದು ಪ್ರತಿಪಾದಿಸುತ್ತಿದ್ದು , ಈ ಪ್ರದೇಶಕ್ಕೆ ದಲಾಯಿ ಲಾಮಾ ಭೇಟಿಗೆ ಅವಕಾಶ ನೀಡಿರುವ ಭಾರತದ ಕ್ರಮವನ್ನು ಚೀನಾ ಟೀಕಿಸಿದೆ. ಕಳೆದ ಅಕ್ಟೋಬರ್‌ನಲ್ಲಿ ಅನುಮತಿ ನೀಡಲಾಗಿದ್ದು ಮುಂಬರುವ ವಾರದಲ್ಲಿ ಲಾಮಾ ಇಲ್ಲಿಗೆ ಭೇಟಿ ನೀಡುವ ಕಾರ್ಯಕ್ರಮವಿದೆ.
ಇದೊಂದು ಧಾರ್ಮಿಕ ಪ್ರವಾಸವಾಗಿದ್ದು ದಲಾಯಿ ಲಾಮಾ ಈ ಹಿಂದೆಯೂ ಹಲವಾರು ಬಾರಿ ಈ ರೀತಿಯ ಪ್ರವಾಸ ಕೈಗೊಂಡಿದ್ದರು ಎಂಬ ಭಾರತದ ಹೇಳಿಕೆಗೆ ಪತ್ರಿಕೆಯಲ್ಲಿ ಪ್ರತಿಕ್ರಿಯೆ ನೀಡಲಾಗಿದ್ದು, ಈ ಭೇಟಿಯಿಂದ ಆಗಬಹುದಾದ ಪರಿಣಾಮಗಳ ಬಗ್ಗೆ ಅಧಿಕಾರಿಗಳು ಅರಿತುಕೊಂಡಿಲ್ಲ ಎಂದು ತಿಳಿಸಲಾಗಿದೆ. ದಲಾಯಿ ಲಾಮಾ ಅವರ ಭೇಟಿ ಉಂಟುಮಾಡಬಹುದಾದ ತೀವ್ರ ಪರಿಣಾಮದ ಬಗ್ಗೆ ಈ ಅಧಿಕಾರಿಗಳು ಅರಿತುಕೊಂಡಿಲ್ಲ ಅಥವಾ ಅರಿತಿದ್ದೂ ಅದನ್ನು ನಿರ್ಲಕ್ಷಿಸುತ್ತಿದ್ದಾರೆ. 14ನೆ ದಲಾಯಿಲಾಮಾ ಓರ್ವ ಧಾರ್ಮಿಕ ಮುಖಂಡನಾಗಲು ಸಾಧ್ಯವಿಲ್ಲ. ಇವರೋರ್ವ ಟಿಬೆಟಿನ ಪ್ರತ್ಯೇಕತಾವಾದಿ ನಾಯಕ ಎಂದು ಪತ್ರಿಕೆಯಲ್ಲಿ ವಿಶ್ಲೇಷಿಸಲಾಗಿದ್ದು , ಇವರು ವಿವಾದಿತ ಪ್ರದೇಶಕ್ಕೆ ಭೇಟಿ ನೀಡಲು ಅವಕಾಶ ನೀಡಿದರೆ ಖಂಡಿತವಾಗಿಯೂ ಘರ್ಷಣೆಗೆ ದಾರಿ ಮಾಡಿಕೊಟ್ಟಂತಾಗುತ್ತದೆ ಮತ್ತು ಈ ಪ್ರದೇಶದ ಸ್ಥಿರತೆ ಹಾಗೂ ಭಾರತ-ಚೀನಾ ಸಂಬಂಧಕ್ಕೆ ಹಾನಿ ಎಸಗಿದಂತಾಗುತ್ತದೆ ಎಂದು ತಿಳಿಸಲಾಗಿದೆ.
ದಲಾಯಿ ಲಾಮಾ ಅವರನ್ನು ಒಂದು ವ್ಯೆಹಾತ್ಮಕ ಆಸ್ತಿ ಎಂಬಂತೆ ಕೆಲ ಭಾರತೀಯರು ಸುದೀರ್ಘ ಕಾಲದಿಂದ ಪರಿಗಣಿಸುತ್ತಿದ್ದಾರೆ. ದಲಾಯಿ ಲಾಮಾ ಅವರನ್ನು ಬಳಸಿಕೊಂಡು ಹಲವಾರು ಅನುಕೂಲಗಳನ್ನು ಪಡೆಯಬಹುದು ಎಂದು ಅವರು ಭಾವಿಸಿದ್ದಾರೆ. ಉದಾಹರಣೆಗೆ, ರಾಜತಾಂತ್ರಿಕ ಸಾಧನವನ್ನಾಗಿ ಬಳಸಿಕೊಂಡು, ಹೆಚ್ಚುತ್ತಿರುವ ಚೀನಾದ ಆರ್ಥಿಕ ಮತ್ತು ರಾಜಕೀಯ ಪ್ರಭಾವವನ್ನು ಕುಗ್ಗಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಪತ್ರಿಕೆ ಹೇಳಿದೆ.
ತನ್ನ ಸ್ವಹಿತಾಸಕ್ತಿಯ ರಕ್ಷಣೆಯ ವಿಷಯದಲ್ಲಿ ಚೀನಾಕ್ಕಿರುವ ದೃಢ ಸಂಕಲ್ಪವನ್ನು ತಪ್ಪಾಗಿ ಲೆಕ್ಕ ಹಾಕಲಾಗಿದೆ. ದಲಾಯಿ ಲಾಮಾ ಮತ್ತವರ ತಂಡದ ರಾಜಕೀಯ ವೌಲ್ಯಕ್ಕೆ ಅವರು ಅತಿಯಾದ ಬೆಲೆ ನಿಗದಿ ಮಾಡಿದ್ದಾರೆ ಎಂದು ಪತ್ರಿಕೆ ಟೀಕಿಸಿದೆ.
ದಲಾಯಿ ಲಾಮಾ ಕಾರ್ಡ್ ಪರಿಣಾಮಕಾರಿಯಲ್ಲ ಎಂದು ಅರಿತುಕೊಂಡು ದಲಾಯಿ ಲಾಮಾಗೆ ಬಾಗಿಲು ಮುಚ್ಚುತ್ತಿರುವ ಪಾಶ್ಚಿಮಾತ್ಯ ರಾಷ್ಟ್ರಗಳ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಗಮನಾರ್ಹವಾಗಿ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ, ಹಾಗೂ ಉಭಯ ರಾಷ್ಟ್ರಗಳ ನಡುವಿನ ಸಂಬಂಧದ ಸುಧಾರಣೆಯ ನಿಟ್ಟಿನಲ್ಲಿ ಮಾತುಕತೆ ಸಾಗುತ್ತಿರುವಾಗ , ದಲಾಯಿ ಲಾಮಾಗೆ ವಿವಾದಿತ ಪ್ರದೇಶಕ್ಕೆ ಭೇಟಿ ನೀಡಲು ಅವಕಾಶ ಮಾಡಿಕೊಡುವುದು ಬುದ್ಧಿವಂತಿಕೆಯ ನಡೆಯಲ್ಲ. ಇದರಿಂದ ಉಭಯ ರಾಷ್ಟ್ರಗಳ ಸಂಬಂಧ ಸುಧಾರಣೆಗೆ ದೊರೆತಿರುವ ವೇಗಕ್ಕೆ ಬ್ರೇಕ್ ಬೀಳಲಿದೆ.ಭವಿಷ್ಯದಲ್ಲಿ ಉಭಯ ರಾಷ್ಟ್ರಗಳ ಮಧ್ಯೆ ಸ್ನೇಹ ಸಂಬಂಧಕ್ಕೆ ಗರಿಷ್ಠ ಅವಕಾಶಗಳಿವೆ. ಆರ್ಥಿಕ ಅಭಿವೃದ್ಧಿ ಹೊಂದುತ್ತಿರುವ ಎರಡು ಬೃಹತ್ ರಾಷ್ಟ್ರಗಳು ಹೊಸ ಜಾಗತಿಕ ಆರ್ಥಿಕ ಪ್ರಕ್ರಿಯೆ ಸೇರಿದಂತೆ ಗಮನ ಹರಿಸಬಹುದಾದ ಹಲವಾರು ಪ್ರಮುಖ ವಿಷಯಗಳಿವೆ ಎಂದು ಪತ್ರಿಕೆಯಲ್ಲಿ ತಿಳಿಸಲಾಗಿದೆ.