ಬಿಜೆಪಿಯನ್ನು ಗೆಲ್ಲಿಸುವಂತೆ ಉ.ಪ್ರ.ಮತದಾರರಿಗೆ ಪ್ರಧಾನಿಯ ಭಾವಪೂರ್ಣ ಮನವಿ
ವಾರಣಾಸಿ,ಮಾ.6: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ತನ್ನ ಬಿರುಸಿನ ಪ್ರಚಾರ ಅಭಿಯಾನಕ್ಕೆ ಸೋಮವಾರ ಮುಕ್ತಾಯ ಹಾಡಿದ ಪ್ರಧಾನಿ ನರೇಂದ್ರ ಮೋದಿ ಯವರು, ರಾಜ್ಯವನ್ನು ಈ ಸ್ಥಿತಿಗೆ ತಂದಿಟ್ಟಿರುವ ಎಸ್‌ಪಿ-ಕಾಂಗ್ರೆಸ್ ಮೈತ್ರಿಕೂಟ ಮತ್ತು ಬಿಎಸ್‌ಪಿಯನ್ನು ಪರಾಭವಗೊಳಿಸುವಂತೆ ಮತದಾರರಲ್ಲಿ ಭಾವಪೂರ್ಣ ಮನವಿಯನ್ನು ಮಾಡಿಕೊಂಡರು.
ರೋಹನಿಯಾ ವಿಧಾನಸಭಾ ಕ್ಷೇತ್ರದ ಖುಷಿಪುರ ಗ್ರಾಮದಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿಯು ಅಧಿಕಾರಕ್ಕೆ ಬಂದರೆ ಕೃಷಿಕರ ಸಾಲಗಳನು ಮನ್ನಾ ಮಾಡುವ ಮತ್ತು ಪೊಲೀಸ್ ಪಡೆಯಲ್ಲಿ ವೃತ್ತಿಪರತೆಯನ್ನು ಮರಳಿ ತರುವ ಭರವಸೆಗಳನ್ನು ಪುನರುಚ್ಚರಿಸಿದರು.
ತನ್ನನ್ನು ‘ಬಡತನವನ್ನು ಅನುಭವಿಸಿರುವ ವ್ಯಕ್ತಿ’ಎಂದು ಬಣ್ಣಿಸಿಕೊಂಡ ಅವರು, ಆದ್ದರಿಂದ ಬಡಜನರ ಅಭ್ಯುದಯವನ್ನು ತಾನು ಬಯಸಿದ್ದೇನೆ ಎಂದರು. 2022ರಲ್ಲಿ ದೇಶವು ತನ್ನ ಸ್ವಾತಂತ್ರದ 75ನೇ ವರ್ಷವನ್ನು ಆಚರಿಸುತ್ತಿದ್ದು, ಆ ವೇಳೆಗೆ ದೇಶದ ಪ್ರತಿ ಕುಟುಂಬಕ್ಕೂ ಸ್ವಂತ ಸೂರನ್ನು ಒದಗಿಸುವುದು ತನ್ನ ಸರಕಾರದ ಗುರಿಯಾಗಿದೆ ಎಂದರು.
ದೇಶದ ಆರ್ಥಿಕತೆಯು ಮುಖ್ಯವಾಗಿ ಕೃಷಿಕರ ಏಳಿಗೆ ಮತ್ತು ಅವರ ಖರೀದಿಸುವ ಶಕ್ತಿಯಲ್ಲಿ ಸುಧಾರಣೆಯನ್ನು ಅವಲಂಬಿಸಿದೆ ಎಂದು ಒತ್ತಿ ಹೇಳಿದ ಅವರು, 2022ರ ವೇಳೆಗೆ ಕೃಷಿಕರ ಆದಾಯವನ್ನು ದುಪ್ಪಟ್ಟುಗೊಳಿಸಲು ತನ್ನ ಸರಕಾರವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದರು.