ಇಂಗ್ಲಿಷ್ ಭಾಷೆ ಮಾಹಿತಿಯ ಭಾಷೆಗೆ ಸೀಮಿತವಾಗಿರಲಿ: ಎಸ್.ಆರ್. ವಿಜಯಶಂಕರ
ಸುಳ್ಯ, ಮಾ.6: ಇಂಗ್ಲೀಷ್ ಭಾಷೆ ಕರ್ನಾಟಕಕ್ಕೆ ಸಮಸ್ಯೆ ಅಲ್ಲ. ಇಂಗ್ಲೀಷ್ ನಮಗೆ ಮಾಹಿತಿಯ ಭಾಷೆ, ಸಂಗ್ರಹದ ಭಾಷೆ ಮತ್ತು ಸಂಶೋಧನೆಯ ಭಾಷೆಗೆ ಮಾತ್ರ ಸೀಮಿತ ಆಗಲಿ. ನಮ್ಮ ಆತ್ಮದ ಭಾಷೆ ಮಾತೃಭಾಷೆ ಕನ್ನಡ ಅದನ್ನು ಉಳಿಸಿ ಬೆಳೆಸುವ ಹೊಣೆಗಾರಿಗೆ ನಮ್ಮ ಮೇಲಿದೆ ಎಂದು ಬೆಂಗಳೂರಿನ ಖ್ಯಾತ ವಿಮರ್ಶಕ ಎಸ್.ಆರ್. ವಿಜಯಶಂಕರ ಹೇಳಿದರು.
ಅವರು ಸುಳ್ಯದ ಯುವಜನ ಸಂಯುಕ್ತ ಮಂಡಳಿ ರಂಗಮಂದಿರ, ಕುರುಂಜಿ ಜಾನಕಿ ವೆಂಕಟ್ರಮಣ ಗೌಡ ವೇದಿಕೆ, ಚೇತನ್ ರಾಮ್ ಸಭಾಂಗಣದಲ್ಲಿ ನಡೆದ ಸುಳ್ಯ ತಾಲೂಕು 21ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಭಾಷಣ ಮಾಡಿ, ಸುಳ್ಯ ತಾಲೂಕು ಕನ್ನಡ ಸಾಹಿತ್ಯಕ್ಕೆ ಬಹುಮುಖ್ಯ ಕೊಡುಗೆ ನೀಡಿದೆ. ಸಾಹಿತ್ಯ ಕ್ಷೇತ್ರದಲ್ಲಿ ವಿಚಾರಧಾರೆಗಳು ಮರೆತು ಹೋಗುತ್ತಿದೆ. ಅನುಭವಗಳನ್ನು ಮಾಹಿತಿಗಳು ನುಂಗಿ ಹಾಕುತ್ತದೆ. ಮಾಹಿತಿ ಮತ್ತು ಕಾವ್ಯಗಳ ಭಾಷೆ ಬೇರೆ ಬೇರೆ. ಸಾಹಿತಿಗಳ ಮೂಲಕ ವಿಜ್ಞಾನ ಸೃಷ್ಟಿಯಾಗಬೇಕು. ಅದೈತ ಎಂಬುದು ಅನುಕರಣೆ ಅಲ್ಲ. ದೇಶಭಕ್ತಿ ಇವತ್ತಿನ ದಿನಗಳಲ್ಲಿ ಅನುಕರಣೆ ಆಗುತ್ತಿದೆ. ಅನುಕರಣೆಯಿಂದ ದೇಶಭಕ್ತಿ ಸೃಷ್ಟಿಯಾಗುವುದಿಲ್ಲ ಎಂದು ಹೇಳಿದರು.
ಜಿಲ್ಲಾ ಕ.ಸಾ.ಪ.ಅಧ್ಯಕ್ಷ ಪ್ರದೀಪ್‌ಕುಮಾರ್ ಕಲ್ಕೂರ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಗಳಾಗಿ ಕುಕ್ಕೆಶ್ರೀಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಭಾಗವಹಿಸಿ, ಮಾತನಾಡಿ, ಸಾಹಿತ್ಯ ಸಮ್ಮೇಳನಗಳು ಕನ್ನಡವನ್ನು ಉಳಿಸುವ ಕೆಲಸ ಮಾಡಿದೆ. ಇಂದು ಮುಂದಿನ ದಿನಗಳಲ್ಲಿ ಇಂಗ್ಲೀಷ್ ಮಾದ್ಯಮ ಶಾಲೆಗಳಲ್ಲಿ ಕನ್ನಡವನ್ನು ಕಲಿಸುವ ಕೆಲಸ ಆಗಬೇಕು. ಆಗ ಕನ್ನಡ ಬೆಳವಣಿಗೆಗೆ ಮತ್ತಷ್ಟು ಪುಷ್ಟಿಸಿಕ್ಕಿದಂತಾಗುತ್ತದೆ ಎಂದರು.
ಸಮ್ಮೇಳನಾಧ್ಯಕ್ಷ ಸಾಹಿತಿ ಲಕ್ಷ್ಮೀಶ ಚೊಕ್ಕಾಡಿ ಮಾತನಾಡಿದರು. ಕ.ಸಾ.ಪ. ತಾಲೂಕು ಘಟಕದ ಅಧ್ಯಕ್ಷ ಡಾಹರಪ್ರಸಾದ್ ತುದಿಯಡ್ಕ, ಕನ್ನಡ ಸಾಹಿತ್ಯ ಪರಿಷತ್ತು ನಿಕಟಪೂರ್ವ ಅಧ್ಯಕ್ಷ ಮೀನಾಕ್ಷಿ ಗೌಡ, ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಕೆ.ವಿ.ಹೇಮನಾಥ, ಕ.ಸಾ.ಪ.ಗೌರವ ಕಾರ್ಯದರ್ಶಿಗಳಾದ ಚಂದ್ರಶೇಖರ ಪೇರಾಲು ಮತ್ತು ತೇಜಸ್ವಿ ಕಡಪಳ, ಕೋಶಾಧಿಕಾರಿ ದಯಾನಂದ ಆಳ್ವ ಉಪಸ್ಥಿತರಿದ್ದರು.
ಕನ್ನಡ ಕಸ್ತೂರಿ ಸನ್ಮಾನ:
ಈ ಸಂದರ್ಭದಲ್ಲಿ ಗುಲಾಬಿ ಅಜಲ್ತಿ ಬಾಳಿಲ (ಪಾಡ್ದನ), ಹರಿಹರ ಬಾಯಾಡಿ (ಸಂಗೀತ ಕ್ಷೇತ್ರ) ಕೃ.ಶಾ.ಮರ್ಕಂಜ(ಸಾಹಿತ್ಯ), ದಿನೇಶ್ ಕುಕ್ಕುಜಡ್ಕ (ವ್ಯಂಗ್ಯ ಚಿತ್ರಕಲೆ), ಗಂಗಾಧರ ಕಲ್ಲಪ್ಪಳ್ಳಿ ( ಪತ್ರಿಕೋದ್ಯಮ), ನಾರಾಯಣ ಪಾಟಾಳಿ( ನಾಟಿ ಪಶು ವೈದ್ಯಕೀಯ), ನಂದರಾಜ ಸಂಕೇಶ್( ನಟನೆ, ಸಾಂಸ್ಕೃತಿಕ ಸಂಘಟನೆ),ನೀರಬಿದಿರೆ ನಾರಾಯಣ (ಸಾಹಿತ್ಯ), ಕೆ.ಎನ್.ದೇವಿಪ್ರಸಾದ್(ಪರಿಸರ ಅಧ್ಯಯನ-ಕೃತಿ ರಚನೆ)ಇವರನ್ನು ಕನ್ನಡ ಕಸ್ತೂರಿ ಗೌರವ ಸನ್ಮಾನಿಸಿ, ತುಷಾರ (ನಟನೆ), ಧೃತಿ ಮುಂಡೋಡಿ (ವಿಜ್ಞಾನ ಆವಿಷ್ಕಾರ) ಅವರಿಗೆ ಬಾಲ ಪುರಸ್ಕಾರ ನೀಡಲಾಯಿತು.
ಬಳಿಕ ಬಿ.ವಿ.ರಾಜಾರಾಂ ನಿರ್ದೇಶನದ ರಂಗ ನಾಟಕ ಮೈಸೂರು ಮಲ್ಲಿಗೆ ಪ್ರದರ್ಶನಗೊಂಡಿತು.