ವಾರಾಹಿ ನೀರಾವರಿ ಯೋಜನೆ ಕಾಮಗಾರಿ ಪ್ರಗತಿ ಪರಿಶೀಲನೆ
ಹೊಸಂಗಡಿ (ಸಿದ್ಧಾಪುರ), ಮಾ.6: ಕಳೆದ ಸುಮಾರು ನಾಲ್ಕು ದಶಕಗಳಿಂದ ಕುಂಟುತ್ತಾ ಸಾಗಿರುವ ವಾರಾಹಿ ನೀರಾವರಿ ಯೋಜನಾ ಕಾಮಗಾರಿಗಳಿಂದ ಅಚ್ಚುಕಟ್ಟು ಪ್ರದೇಶದ ಜನತೆಯ ಬವಣೆ ಎಂದೆಂದೂ ಮುಗಿಯದ ಗೋಳಿನ ಕತೆಯಂತಾಗಿದೆ ಎಂಬುದು ಇಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮತ್ತೊಮ್ಮೆ ಸಾಬೀತಾಯಿತು.
ಬೆಳಗಿನಿಂದ ಯೋಜನೆಯ ಎಡದಂಡೆ ಕಾಲುವೆ ಕಾಮಗಾರಿ ಈಗಲೂ ನಡೆಯುತ್ತಿರುವ ತೀರಾ ಒಳಪ್ರದೇಶದ ಹಲವು ಸ್ಥಳಗಳಿಗೆ ಕಾಲ್ನಡಿಗೆಯಲ್ಲಿ ತೆರಳಿ ಪರಿಶೀಲಿಸಿ ವಸ್ತುಸ್ಥಿತಿಯನ್ನು ಖುದ್ದಾಗಿ ಅರಿತುಕೊಂಡ ಸಚಿವ ಪ್ರಮೋದ್, ಹೊಸಂಗಡಿಯಲ್ಲಿರುವ ಕರ್ನಾಟಕ ನೀರಾವರಿ ನಿಗಮದ ಸಭಾಂಗಣದಲ್ಲಿ ಕರೆಯಲಾದ ಸಭೆಯಲ್ಲಿ ಸಂತ್ರಸ್ಥ ಜನತೆಯ ದೂರುಗಳ ಮಹಾಪೂರವನ್ನು ಕಂಡು ಅಧಿಕಾರಿಗಳ ಕಾರ್ಯವೈಖರಿಯ ಕುರಿತಂತೆ ಕೆಂಡಾಮಂಡಲರಾದರು.
ಕಳೆದ ನಾಲ್ಕು ದಶಕಗಳಿಂದ 600 ಕೋಟಿ ರೂ.ಗಳಿಗೂ ಅಧಿಕ ಹಣವನ್ನು ವ್ಯಯಿಸಿ 2015ರ ಮೇ 4ರಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಯೋಜನೆಯನ್ನು ಉದ್ಘಾಟಿಸಿದ ಬಳಿಕವೂ ಪ್ರದೇಶದ ರೈತರ ಬೆಳೆಗೆ ಇನ್ನೂ ಸರಿಯಾಗಿ ನೀರು ಸಿಗದೇ, ಜನತೆಗೆ ಕುಡಿಯುವ ನೀರು ದೊರಕದೇ ಪಡುತ್ತಿರುವ ಬವಣೆ, ಕಾಮಗಾರಿಯ ವೇಳೆ ಅಲ್ಲಲ್ಲಿ ಆದ ನಷ್ಟಗಳಿಗೆ ಇನ್ನೂ ಪರಿಹಾರ ದೊರಕದ ಬಗ್ಗೆ ನೂರಾರು ಮಂದಿ ತಮ್ಮ ಅಹವಾಲುಗಳನ್ನು ಸಲ್ಲಿಸಿದಾಗ, ಅದಕ್ಕೆ ಉತ್ತರಿಸಬೇಕಿದ್ದ ಅಧಿಕಾರಿಗಳು, ಇಂಜಿನಿಯರ್‌ಗಳ ಬೇಜವಾಬ್ದಾರಿತನದ ಉತ್ತರ ಸಚಿವರನ್ನು ವಸ್ತುಶ: ಕೆರಳಿಸಿತು.
ಮೊಳಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ 2013ರಲ್ಲಿ ಸ್ಪೋಟದಿಂದ ಪರಿಸರದ ಸುಮಾರು ಎಂಟು ಮನೆಗಳಿಗೆ ಇನ್ನೂ ಪರಿಹಾರ ದೊರಕದೇ ತಾವು ಪಡುತ್ತಿರುವ ಬವಣೆಯನ್ನು ಆ ಮನೆಯವರು ಬಂದು ಮನವಿ ಅರ್ಪಿಸಿ ವಿವರಿಸಿದಾಗ ಸಚಿವರು ಸಂಬಂಧಿತ ಇಂಜಿನಿಯರ್‌ಗಳನ್ನು ವಸ್ತುಶ: ಚೆನ್ನಾಗಿ ತರಾಟೆಗೆ ತೆಗೆದುಕೊಂಡರು.
ಘಟನೆ ನಡೆದು ನಾಲ್ಕು ವರ್ಷವಾದರೂ, ಇದಕ್ಕೆ ಸಂಬಂಧಿಸಿ ಜಿಲ್ಲಾಧಿಕಾರಿ, ಎಸಿ ಸೇರಿದಂತೆ ಎಲ್ಲರಿಗೂ ಮನವಿ ಮೇಲೆ ಮನವಿ ಅರ್ಪಿಸಿದರೂ ಏನೂ ಪ್ರಗತಿಯಾಗಿಲ್ಲ ಎಂದು ಮಹಿಳೆಯೊಬ್ಬರು ದೂರಿದರು. ಇಂಜಿನಿಯರ್‌ರನ್ನು ಸಚಿವರು ಈ ಬಗ್ಗೆ ಪ್ರಶ್ನಿಸಿದಾಗ ಬಂದ ಉತ್ತರದಿಂದ ಕೋಪಗೊಂಡ ಸಚಿವರು ಏರುಧ್ವನಿಯನ್ನು ಅವರನ್ನು ತರಾಟೆಗೆ ತೆಗೆದುಕೊಂಡರು.
ಸ್ಥಳ ಪರಿಶೀಲನೆ ನಡೆಸಿದ, ಪೊಲೀಸರಲ್ಲಿ ಪ್ರಕರಣ ದಾಖಲಿಸಿದ ಬಗ್ಗೆ ಹಾಗೂ ಆ ಫೈಲ್ ಎಲ್ಲಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲದೆ ಬಂದ ಅಧಿಕಾರಿಯನ್ನು ಝಾಡಿಸಿದ ಸಚಿವರು ಇಂಜಿನಿಯರಿಂಗ್ ಇಲಾಖೆಯಿಂದ ಅಲ್ಲಿರುವ ಎಲ್ಲಾ ದೂರುಗಳಿಗೆ ಸಂಬಂಧಿಸಿದಂತೆ ಎಲ್ಲಾ ಮಾಹಿತಿಗಳನ್ನು ತರಿಸಿಕೊಂಡು ಅವುಗಳ ಬಗ್ಗೆ ಗಮನ ಹರಿಸುವಂತೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ಗೆ ಸೂಚಿಸಿದರು.
ಕಕ್ಕುಂಜೆ ಗ್ರಾಮದಲ್ಲಿ ಎಂಟು ಮಂದಿಗೆ ಹಾಗೂ ಮೊಳಹಳ್ಳಿ ಗ್ರಾಮದಲ್ಲಿ ಎಂಟು ಮಂದಿಗೆ 2013ರಿಂದ ಇದುವರೆಗೂ ಪರಿಹಾರ ಸಿಕ್ಕಿಲ್ಲ ಎಂದು ಅಲ್ಲಿನ ಗ್ರಾಮಸ್ಥರು ಮನವಿ ಅರ್ಪಿಸಿದರು. ನಮ್ಮ ಮುಂದಿನ ಮನೆಯ ಎಂಟು ಮಂದಿಗೆ ಪರಿಹಾರ ನೀಡಿದ್ದಾರೆ. ಅದೇ ರೀತಿ ಹಿಂದಿನ ಎಂಟು ಮನೆಗಳಿಗೂ ಪರಿಹಾರ ಸಿಕ್ಕಿದೆ. ಆದರೆ ನಡುವಿನ ನಮ್ಮ ಎಂಟು ಮನೆಗಳಿಗೆ ಪರಿಹಾರ ಸಿಕ್ಕಿಲ್ಲ. ಕೇಳಿದರೆ ಉಡಾಫೆಯ ಉತ್ತರ ನೀಡುತ್ತಾರೆ ಎಂದು ಮೊಳಹಳ್ಳಿಯ ಸಂತ್ರಸ್ತರು ದೂರಿದರು.
ಮೊಳಹಳ್ಳಿಯ ಲೀಲಾವತಿ ಮತ್ತು ಚಂದ್ರಾವತಿ ಎಂಬವರ ಪರಿಹಾರ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಎರಡು ತಿಂಗಳೊಳಗೆ ಪರಿಹಾರ ಮೊತ್ತ ನಿಮ್ಮ ಕೈಸೇರಲಿದೆ ಎಂದು ಕುಂದಾಪುರ ಉಪವಿಭಾಗಾಧಿಕಾರಿ ಶಿಲ್ಪಾ ನಾಗ್ ತಿಳಿಸಿದರು.
ಬಹಳಷ್ಟು ಮಂದಿ ಸಂತ್ರಸ್ಥರು, ನಮಗೆ ಭೂಸ್ವಾಧೀನದ ನೋಟೀಸು ಬಾರದೇ ನಮ್ಮ ಭೂಮಿಯನ್ನು ಆಕ್ರಮಿಸಿಕೊಳ್ಳುತಿದ್ದಾರೆ. ಪರಿಹಾರ ನೀಡದೇ ನಮ್ಮ ಜಾಗದಲ್ಲಿ ಅವರ ಕಾಮಗಾರಿ ಸಾಮಗ್ರಿಗಳನ್ನು ತಂದು ಸಂಗ್ರಹಿಸುತಿದ್ದಾರೆ ಎಂದು ಗೋಳು ತೋಡಿಕೊಂಡರು.
ಇಂದು ಇಲ್ಲಿ ಬಂದಿರುವ ಎಲ್ಲಾ ದೂರುಗಳನ್ನು ಪರಿಶೀಲಿಸಿ, ಸ್ಥಳಗಳಿಗೆ ತೆರಳಿ ದೂರುಗಳ ಬಗ್ಗೆ ಪರಿಶೀಲನೆ ನಡೆಸಿ ವರದಿ ತಯಾರಿಸಿ ಬಳಿಕ ಅರಣ್ಯ ಇಲಾಖೆ ಹಾಗೂ ಎಸಿ ಅವರೊಂದಿಗೆ ಕುಳಿತು ಎಲ್ಲಾ ದೂರುಗಳನ್ನು ಪರಿಶೀಲಿಸಿ ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ಪ್ರಮೋದ ಮಧ್ವರಾಜ್, ವಾರಾಹಿಯ ಚೀಫ್ ಇಂಜಿನಿಯರ್ ಕುಲಕರ್ಣಿ ಅವರಿಗೆ ತಿಳಿಸಿದರು.
ಅಂಪಾರು ಬಳಿ ಬಲದಂಡೆ ಕಾಲುವೆಗಾಗಿ ಭೂಸ್ವಾಧೀನ ಆಗಿದೆ. ಆದರೆ ನಮಗೆ ಪರಿಹಾರ ಸಿಕ್ಕಿಲ್ಲ. ಕೆಲಸವೂ ಆಗಿಲ್ಲ. ನೀರೂ ಬರುತ್ತಿಲ್ಲ. ಅದನ್ನು ನಾವು ಮಾರುವಂತೆಯೂ ಇಲ್ಲ. ಒಟ್ಟಿನಲ್ಲಿ ನಮಗಿದು ಮುಗಿಯದ ಗೋಳಾಗಿದೆ ಎಂದು ಅಲ್ಲಿನ ಸಂತ್ರಸ್ತರೊಬ್ಬರು ದೂರಿದರು.
74ನೇ ಉಳ್ಳೂರು ಗ್ರಾಮದ ಗುಡಿಕೇರಿ ಕಟ್ಟದಬೈಲು ದೊಡ್ಮನೆಯ ನಾಲೆಯಲ್ಲಿ ಅಸಮರ್ಪಕ ಕಾಮಗಾರಿ ಹಾಗೂ ನೀರಿನ ಹರಿಯುವಿಕೆಯಿಂದ ಇತ್ತೀಚೆಗೆ ಅಕಸ್ಮಿಕವಾಗಿ ನಾಲೆಗೆ ಬಿದ್ದ ವೃದ್ಧರೊಬ್ಬರ ಮೃತದೇಹ ಸುಮಾರು 11 ಕಿ.ಮೀ. ದೂರದ ಕುಳಿಂಜೆ ಗ್ರಾಮದಲ್ಲಿ ಸಿಕ್ಕಿತು ಎಂದು ಉಳ್ಳೂರಿನ ಸಂಜೀವ ಶೆಟ್ಟಿ ಸಚಿವರ ಬಳಿ ದೂರಿದರು.
ಸಭೆಯಲ್ಲಿ ವಿಧಾನಪರಿಷತ್ ಸದಸ್ಯರಾದ ಪ್ರತಾಪಚಂದ್ರ ಶೆಟ್ಟಿ, ಕೋಟ ಶ್ರೀನಿವಾಸ ಪೂಜಾರಿ, ಜಿಪಂ ಸದಸ್ಯ ಹಾಲಾಡಿ ತಾರಾನಾಥ ಶೆಟ್ಟಿ, ತಾಪಂ ಸದಸ್ಯೆ ಜಯಂತಿ ಸುಧಾಕರ್, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಎಸಿ ಶಿಲ್ಪಾ ನಾಗ್, ವಾರಾಹಿ ಯೋಜನೆಯ ಎಸ್‌ಇ ಪದ್ಮನಾಭ, ಚೀಫ್ ಇಂಜಿನಿಯರ್ ಕುಲಕರ್ಣಿ ಮುಂತಾದವರು ಉಪಸ್ಥಿತರಿದ್ದರು.
ಗುತ್ತಿಗೆದಾರರ ಜುಟ್ಟು ನಿಮ್ಮ ಕೈಯಲ್ಲಿರಬೇಕಿತ್ತು. ಆದರೆ ಇಲ್ಲಿ ನೋಡಿದರೆ ನಿಮ್ಮ ಜುಟ್ಟೇ ಗುತ್ತಿಗೆದಾರರ ಕೈಯಲ್ಲಿರುವಂತಿದೆ. ಸ್ಪೋಟದಿಂದ ಆದ ನಷ್ಟಕ್ಕೆ ಗುತ್ತಿಗೆದಾರರಿಂದಲೇ ಪರಿಹಾರವನ್ನು ದೊರಕಿಸಿಕೊಡಬೇಕು. ಎಲ್ಲರ ಬಗ್ಗೆ ಹಿಂದಿನಿಂದ ತುಂಬಾ ಮಾತನಾಡುತ್ತೀರಿ. ಆದರೆ ಬಡ ಜನರಿಗೆ ಸಹಾಯ ಮಾಡಬೇಕೆಂದು ಗೊತ್ತಿಲ್ಲ ಅಲ್ಲ.?
-ಇಂಜಿನಿಯರ್‌ಗೆ ಸಚಿವ ಪ್ರಮೋದ್