​ಐಎಎಸ್, ಐಪಿಎಸ್, ವೈದ್ಯ, ವಕೀಲ, ಪಿಎಚ್ಡಿ, ಅತ್ಯಂತ ಕಿರಿಯ ಶಾಸಕ ಇತ್ಯಾದಿ ಇತ್ಯಾದಿ -ಎಲ್ಲ ಇವರೊಬ್ಬರೇ !

Update: 2017-03-07 15:44 GMT

ನಾಗ್ಪುರ್, ಮಾ.7: ಒಬ್ಬ ವ್ಯಕ್ತಿ ಏನೇನೆಲ್ಲಾ ಆಗಬಹುದೆಂದು ಊಹಿಸಬಲ್ಲಿರಾ? ಇಲ್ಲೊಬ್ಬರು ಐಎಎಸ್, ಐಪಿಎಸ್, ವೈದ್ಯ, ವಕೀಲ, ಎಂಬಿಎ, ಪಿಎಚ್ಡಿ, ಶಾಸಕ, ವರ್ಣಚಿತ್ರ ಕಲಾವಿದ, ಛಾಯಾಗ್ರಾಹಕ ಮತ್ತು ನಟರೂ ಆಗಿದ್ದಾರೆ. ಇಷ್ಟೆಲ್ಲಾ ಸಾಧಿಸಲು ಒಂದು ಜೀವನ ಸಾಕೇ ಎಂದು ಎಲ್ಲರೂ ಹುಬ್ಬೇರಿಸಬಹುದು. ಆದರೆ ಸಾಧ್ಯವೆಂದು ತೋರಿಸಿದವರು ದಿ. ಶ್ರೀಕಾಂತ್ ಜಿಚ್ಕರ್.

ಸೆಪ್ಟೆಂಬರ್ 14,1954ರಂದು ಮರಾಠಿ ಕುಟುಂಬವೊಂದರಲ್ಲಿ ನಾಗ್ಪುರ ಸಮೀಪದ ಆಜಂಗಾಂವ್ ಎಂಬಲ್ಲಿ ಹುಟ್ಟಿದ್ದ ಶ್ರೀಕಾಂತ್ ಅವರು ಅತ್ಯಂತ ಹೆಚ್ಚು ಪದವಿ ಪಡೆದ ಭಾರತೀಯನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಅವರಿಗೆ ವಿಜ್ಞಾನ, ರಾಜಕೀಯ, ರಂಗಭೂಮಿ, ಕ್ರೀಡೆ, ಪತ್ರಿಕೋದ್ಯಮ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಆಸಕ್ತಿಯಿತ್ತು ಹಾಗೂ ಎಲ್ಲಾ ವಿಷಯಗಳಲ್ಲೂ ಅವರು ಪರಿಣತರಾಗಿದ್ದರು.

ಮೊದಲಿಗೆ ಎಂಬಿಬಿಎಸ್ ಪದವಿ ಪಡೆದ ಅವರು ನಂತರ ಎಂಎಸ್ ಪೂರ್ತಿಗೊಳಿಸಿದರು. ವೈದ್ಯರಾಗುತ್ತಲೇ ಆ ಕ್ಷೇತ್ರವನ್ನು ತೊರೆದು ಕಾನೂನು ಕ್ಷೇತ್ರಕ್ಕೆ ಕಾಲಿಟ್ಟರು. ಹೀಗೆ ಎಲ್ ಎಲ್ ಬಿ ಪದವಿ ಪಡೆದ ಅವರು ನಂತರ ಅಂತಾರಾಷ್ಟ್ರೀಯ ಕಾನೂನು ವಿಷಯದಲ್ಲಿ ಎಲ್‌ಎಲ್‌ಎಂ ಪದವಿ ಪಡೆದರು. ಇಷ್ಟಕ್ಕೇ ತೃಪ್ತಿ ಪಟ್ಟುಕೊಳ್ಳದ ಅವರು ಎಂಬಿಎ ಪದವಿಯನ್ನೂ ಗಳಿಸಿದರಲ್ಲದೆ ಆಗಿನ ಕಾಲದ ಪತ್ರಿಕೋದ್ಯಮ ಪದವಿಯನ್ನೂ ಗಿಟ್ಟಿಸಿದ್ದರು.

1973 ಹಾಗೂ 1990 ನಡುವೆ ಅವರು 42 ವಿಶ್ವವಿದ್ಯಾಲಯ ಪರೀಕ್ಷೆಗಳನ್ನು ಎದುರಿಸಿದ್ದರಲ್ಲದೆ ಈ ಅವಧಿಯಲ್ಲಿ 20ಕ್ಕೂ ಹೆಚ್ಚು ಸ್ನಾತ್ತಕೋತ್ತರ ಪದವಿಗಳನ್ನು ಕೇವಲ 24 ವರ್ಷ ವಯಸ್ಸಿನಲ್ಲೇ ಪಡೆದಿದ್ದರು.

1978ರಲ್ಲಿ ಅವರು ತಮ್ಮ 25ನೆ ವಯಸ್ಸಿನಲ್ಲಿ ಐಪಿಎಸ್ ಪರೀಕ್ಷೆಗೆ ಹಾಜರಾಗಿ ಉತ್ತೀರ್ಣರಾದರು. ನಂತರ ಐಎಎಸ್ ಪರೀಕ್ಷೆಯಲ್ಲೂ ತಮ್ಮ ಸಾಮರ್ಥ್ಯವನ್ನು ಒರೆಗೆ ಹಚ್ಚಿದ್ದರು.

ತರುವಾಯ ಅರ್ಥಶಾಸ್ತ್ರ, ಇಂಗ್ಲಿಷ್ ಸಾಹಿತ್ಯ, ಸಂಸ್ಕೃತ, ಭಾರತೀಯ ಇತಿಹಾಸ, ಸಾರ್ವಜನಿಕ ಆಡಳಿತ, ರಾಜಕೀಯ ಶಾಸ್ತ್ರ ಮತ್ತು ಸಮಾಜಶಾಸ್ತ್ರದಲ್ಲೂ ಸ್ನಾತ್ತಕೋತ್ತರ ಪದವಿಯನ್ನು ಪಡೆದಿದ್ದರು. ಅವರು ಸಂಸ್ಕೃತದಲ್ಲೂ ಡಿ.ಲಿಟ್ ಪದವಿ ಪಡೆದವರಾಗಿದ್ದರು.

1980ರಲ್ಲಿ ರಾಜಕೀಯ ಪ್ರವೇಶಿಸಿದ ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಅದೇ ವರ್ಷದಲ್ಲಿ ಅವರು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ವಿಜೇತರಾದರಲ್ಲದೆ 14 ಖಾತೆಗಳನ್ನು ಹೊಂದಿದ ಏಕೈಕ ಹಾಗೂ ಅತ್ಯಂತ ಕಿರಿಯ ಸಚಿವರೆನಿಸಿಕೊಂಡಿದ್ದರು.

ಅವರ ಖಾಸಗಿ ಗ್ರಂಥಾಲಯದಲ್ಲಿ 52,000ಕ್ಕೂ ಹೆಚ್ಚಿನ ಪುಸ್ತಕಗಳ ಸಂಗ್ರಹವಿತ್ತು. ಶೈಕ್ಷಣಿಕ ರಂಗ ಹೊರತುಪಡಿಸಿ ಅವರೊಬ್ಬ ಪ್ರತಿಭಾವಂತ ವರ್ಣಚಿತ್ರ ಕಲಾವಿದರಾಗಿದ್ದರಲ್ಲದೆ ವೃತ್ತಿಪರ ಛಾಯಾಗ್ರಾಹಕರೂ ಆಗಿದ್ದರು. ರಂಗಭೂಮಿಯಲ್ಲೂ ಆಸಕ್ತಿ ವಹಿಸಿದ್ದ ಅವರು ಚತುರ ಭಾಷಣಕರ್ತರಾಗಿದ್ದರು ಹಾಗೂ ವಿವಿಧ ವಿಚಾರಗಳ ಬಗ್ಗೆ ತಮ್ಮ ವಾದವನ್ನು ನಿರರ್ಗಳವಾಗಿ ಮಂಡಿಸುತ್ತಿದ್ದರು. ಧಾರ್ಮಿಕ ಪ್ರವಚನಗಳನ್ನು ನೀಡುವಲ್ಲಿಯೂ ಅವರು ಸಿದ್ಧಹಸ್ತರಾಗಿದ್ದರು.

1992-1998 ನಡುವೆ ಅವರು ರಾಜ್ಯಸಭಾ ಸದಸ್ಯರಾಗಿದ್ದರು. ಜೂನ್ 2, 2004ರಂದು ಅವರು ಕಾರೊಂದರಲ್ಲಿ ಪ್ರಯಾಣಿಸುತ್ತಿದ್ದಾಗ ನಾಗ್ಪುರದಿಂದ 40 ಕಿಮೀ ದೂರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಕ್ ಒಂದು ಅವರ ಕಾರಿಗೆ ಢಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಅವರು ನಂತರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಆಗ ಅವರ ವಯಸ್ಸು ಕೇವಲ 51 ಆಗಿತ್ತು.

ಕೃಪೆ : http://speakingtree.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News