×
Ad

ಮೀನುಗಾರನ ಹತ್ಯೆ ವಿರೋಧಿಸಿ ತಮಿಳುನಾಡಿನಲ್ಲಿ ಪ್ರತಿಭಟನೆ

Update: 2017-03-07 17:10 IST

ಚೆನ್ನೈ,ಮಾ.7: ಶ್ರೀಲಂಕಾ ನೌಕಾಪಡೆಯಿಂದ ರಾಮೇಶ್ವರಂ ನಿವಾಸಿ ಮೀನುಗಾರನ ಹತ್ಯೆ ಬಳಿಕ ತಮಿಳುನಾಡಿನ ವಿವಿಧೆಡೆಗಳಲ್ಲಿ ಮಂಗಳವಾರ ಪ್ರತಿಭಟನೆಗಳು ಭುಗಿಲ್ಲೆದ್ದಿವೆ.

ಸೋಮವಾರ ಸಂಜೆ ತಮಿಳುನಾಡು ಕರಾವಳಿಯಾಚೆ ಧನುಷ್ಕೋಡಿ ಮತ್ತು ಕಛತೀವು ಮಧ್ಯೆ ಮೀನುಗಾರಿಕೆಯಲ್ಲಿ ತೊಡಗಿದ್ದ ಭಾರತೀಯ ಮೀನುಗಾರರ ಮೇಲೆ ಗುಂಡು ಹಾರಾಟ ನಡೆಸಲಾಗಿದ್ದು, ಓರ್ವ ಕೊಲ್ಲಲ್ಪಟ್ಟಿದ್ದರೆ ಇತರ ಮೂವರು ಗಾಯಗೊಂಡಿದ್ದರು.

    ಮೃತ ಬ್ರಿಟ್ಸೋ (22)ನ ಕುತ್ತಿಗೆಗೆ ಗುಂಡು ತಗುಲಿದ್ದು, ಮೃತದೇಹವನ್ನು ರಾಮೇಶ್ವರಂ ಸರಕಾರಿ ಆಸ್ಪತ್ರೆಗೆ ತರಲಾಗಿದೆ. ಆದರೆ ಅದನ್ನು ಸ್ವೀಕರಿಸಲು ಆತನ ಕುಟುಂಬವು ನಿರಾಕರಿಸಿದೆ.

ಶ್ರೀಲಂಕಾ ನೌಕಾಪಡೆಯ ಸಿಬ್ಬಂದಿಗಳು ಮೀನುಗಾರರ ಮೇಲೆ ದಾಳಿಗೆ ಮುನ್ನ ಎಚ್ಚರಿಕೆ ಗುಂಡನ್ನೂ ಹಾರಿಸಿರಲಿಲ್ಲ ಎಂದು ರಾಮೇಶ್ವರಂ ಮೀನುಗಾರರ ಸಂಘದ ಅಧ್ಯಕ್ಷ ಪಿ.ಶೇಷುರಾಜ ಆರೋಪಿಸಿದ್ದಾರೆ.

 ಹತ್ಯೆಯನ್ನು ವಿರೋಧಿಸಿ ನೂರಾರು ಮೀನುಗಾರರು ರಾಮೇಶ್ವರಂನಲ್ಲಿ ಧರಣಿ ಮುಷ್ಕರ ನಡೆಸಿ ಕೇಂದ್ರ ಸಚಿವರೋರ್ವರು ಇಲ್ಲಿಗೆ ಭೇಟಿ ನೀಡಬೇಕು ಮತ್ತು ಇಂತಹ ಘಟನೆಗಳು ಪುನರಾವರ್ತನೆಯಾಗುವುದಿಲ್ಲ ಎಂದು ತಮಗೆ ಭರವಸೆ ನೀಡಬೇಕು ಎಂದು ಆಗ್ರಹಿಸಿದರು. ಸ್ಥಳೀಯ ರಾಜಕೀಯ ಪಕ್ಷ ಟಿವಿಕೆಯ ಕೆಲವು ಕಾರ್ಯ ಕರ್ತರು ಮೊಬೈಲ್ ಫೋನ್ ಗೋಪುರವನ್ನು ಹತ್ತಿ ಪ್ರತಿಭಟನೆ ನಡೆಸಿದರು.

 ಘಟನೆಯಲ್ಲಿ ಭಾಗಿಯಾಗಿದ್ದ ಶ್ರೀಲಂಕಾ ನೌಕಾಪಡೆಯ ಸಿಬ್ಬಂದಿಗಳನ್ನು ಬಂಧಿಸುವಂತೆಯೂ ಪ್ರತಿಭಟನಾಕಾರರು ಆಗ್ರಹಿಸಿದರು ಎಂದು ಮೀನುಗಾರರ ಧುರೀಣ ಎಸ್.ಇಮಿರೆಟ್ ತಿಳಿಸಿದರು.

ಪಾಕ್ ಜಲಸಂಧಿಯಲ್ಲಿ ಮೀನುಗಾರಿಕೆ ಕುರಿತಂತೆ ಶ್ರೀಲಂಕಾ ಮತ್ತು ಭಾರತೀಯ ಅಧಿಕಾರಿಗಳ ನಡುವೆ ಸಮನ್ವಯವಿಲ್ಲ ಎಂದು ಆರೋಪಿಸಿದ ಪ್ರತಿಭಟನಾಕಾರರು ಶ್ರೀಲಂಕಾ ನೌಕಾಪಡೆಯು ಬಂಧಿಸಿರುವ ಎಲ್ಲ ಭಾರತೀಯ ಮೀನುಗಾರರನ್ನು ಅವರ ದೋಣಿಗಳ ಸಹಿತ ಬಿಡುಗಡೆಗೊಳಿಸಬೇಕು ಎಂದೂ ಆಗ್ರಹಿಸಿದರು.

 ಭಾರತೀಯ ರಾಯಭಾರಿ ತರನಜಿತ್ ಸಿಂಗ್ ಸಂಧು ಅವರು ಶ್ರೀಲಂಕಾದ ಪ್ರಧಾನಿ ರನಿಲ್ ವಿಕ್ರಮಸಿಂೆ ಅವರೊಂದಿಗೆ ಈ ವಿಷಯವನ್ನು ಕೈಗೆತ್ತಿಕೊಂಡಿದ್ದಾರೆ ಮತ್ತು ಹತ್ಯೆ ಕುರಿತು ಸಮಗ್ರ ತನಿಖೆ ನಡೆಸುವುದಾಗಿ ಶ್ರೀಲಂಕಾ ನೌಕಾಪಡೆಯು ಭರವಸೆ ನೀಡಿದೆ ಎಂದು ಮೂಲಗಳು ಮಂಗಳವಾರ ತಿಳಿಸಿದವು.

ತಮಿಳುನಾಡು ಮುಖ್ಯಮಂತ್ರಿ ಇ.ಪಳನಿಸ್ವಾಮಿ ಅವರು ಮೃತ ಮೀನುಗಾರನ ಕುಟುಂಬಕ್ಕೆ ಐದು ಲ.ರೂ ಮತ್ತು ಗಾಯಾಳುಗಳಿಗೆ ತಲಾ ಒಂದು ಲ.ರೂ. ಪರಿಹಾರವನ್ನು ಘೋಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News