ಆಧುನಿಕ ತಂತ್ರಜ್ಞಾನದಿಂದ ಮಾನವೀಯ ಮೌಲ್ಯಗಳಿಗೆ ಕುಂದಾಗದಿರಲಿ: ಬಳ್ಳಮೂಲೆ
ಕಾಸರಗೋಡು, ಮಾ.7: “ಮನುಷ್ಯನಲ್ಲಿ ಮಾನವೀಯ ಮೌಲ್ಯಗಳಿದ್ದರೆ ಮಾತ್ರ ಆತನ ವ್ಯಕ್ತಿತ್ವ ಶೋಭಿಸುತ್ತದೆ. ವಿದ್ಯೆ, ಅಧಿಕಾರ, ಸಂಪತ್ತು – ಇವೆಲ್ಲವುಗಳಿಗಿಂತಲೂ ಬಹುಮುಖ್ಯವಾದ ಆಸ್ತಿಯೆಂದರೆ ಅದು ಮಾನವೀಯ ಮೌಲ್ಯ. ಇಂದಿನ ಆಧುನಿಕ ತಂತ್ರಜ್ಞಾನದಿಂದಾಗಿ ಮಾನವೀಯ ಮೌಲ್ಯ ಹಾಗೂ ಮನುಷ್ಯ ಸಂಬಂಧಗಳು ಇಲ್ಲವಾಗುತ್ತಿವೆ. ಆದ ಕಾರಣ ಈ ಕುರಿತು ಚಿಂತಿಸುವ ಮನೋಭಾವ ಇಂದಿನ ಯುವಜನತೆಯಲ್ಲಿ ಉಂಟಾಗಬೇಕು.” ಎಂದು ವಿಶ್ರಾಂತ ಅಧ್ಯಾಪಕ ಗೋವಿಂದ ಭಟ್ ಬಳ್ಳಮೂಲೆ ಅಭಿಪ್ರಾಯಪಟ್ಟರು.
ಅವರು ಕಾಸರಗೋಡು ಸರಕಾರಿ ಕಾಲೇಜಿನ ಯೂನಿಯನ್ ನ 2016-17 ನೇ ಶೈಕ್ಷಣಿಕ ವರ್ಷದ ಕನ್ನಡ ಸಂಘದ ಕಾರ್ಯಚಟುವಟಿಕೆಗಳ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತದ್ದರು.
ಕಲಿಯುವಿಕೆಯು ನಿತ್ಯನಿರಂತರವಾದುದು. ಅದಕ್ಕೆ ವಯಸ್ಸಿನ ಅಂತರವಿಲ್ಲ. ಚಿಕ್ಕ ಮಕ್ಕಳಿಂದಲೂ ಕಲಿಯಬೇಕಾದುದು ಬಹಳಷ್ಟಿದೆ. ಆದುದರಿಂದ ತಿಳುವಳಿಕೆಯ ವಿಷಯದಲ್ಲಿ ‘ಅಹಂ’ ಇರಬಾರದು ಜತೆಗೆ ಆಧುನಿಕತೆಯ ಭರಾಟೆಯಲ್ಲಿ ನಮ್ಮ ವ್ಯಕ್ತಿತ್ವ ಹರಣವಾಗದಂತೆ ಎಚ್ಚರಿಕೆಯಿಂದ ಇರಬೇಕು ಎಂದು ಗೋವಿಂದ ಭಟ್ ಬಳ್ಳಮೂಲೆ ನುಡಿದರು.
ಕಾಲೇಜು ಪ್ರಭಾರ ಪ್ರಾಂಶುಪಾಲ ಡಾ. ವಿನಯನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಕನ್ನಡ ವಿಭಾಗದ ಮುಖ್ಯಸ್ಥೆ ಸುಜಾತ ಎಸ್, ಕಾಲೇಜು ವಿದ್ಯಾರ್ಥಿ ಸಂಘದ ಅಧ್ಯಕ್ಷ ಉಮ್ಮರ್ ಸಿ, ಕಾಸರಗೋಡು ಕೇಂದ್ರೀಯ ವಿಶ್ವವಿದ್ಯಾನಿಲಯದ ಸಂಶೋಧನ ವಿದ್ಯಾರ್ಥಿ ಪ್ರಶಾಂತ ಬಳ್ಳುಳ್ಳಾಯ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕನ್ನಡ ಸಂಘದ ಕಾರ್ಯದರ್ಶಿ ವಿನೀತ ಎಂ.ಎನ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಅರ್ಶಿತಾ ಮತ್ತು ಅನುರಾಧ ಕಾರ್ಯಕ್ರಮ ನಿರೂಪಿಸಿದರು. ಶ್ರದ್ಧಾ ನಾಯರ್ಪಳ್ಳ ಪ್ರಾರ್ಥನೆ ಹಾಡಿದರು. ಶ್ರಾವ್ಯ ಎಸ್ ಎನ್ ಸ್ವಾಗತಿಸಿ, ಸ್ನೇಹರಂಗದ ಅಧ್ಯಕ್ಷ ಪ್ರದೀಪ್ ಕುಮಾರ್ ಧನ್ಯವಾದವಿತ್ತರು.
ಪ್ರಕಾಶ ಮುಳ್ಳೇರಿಯಾ, ಕೀರ್ತನ್ ಕುಮಾರ್, ಮಂಜುಶ್ರೀ, ಅಭಿಷೇಕ್ ಕಾರ್ಯಕ್ರಮಕ್ಕೆ ನೇತೃತ್ವ ವಹಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಭಾವಗಾಯನ, ಕಾವ್ಯವಾಚನ ಮತ್ತು ನೃತ್ಯವೈವಿಧ್ಯ ನೆರವೇರಿತು. ಅಮೃತ ಜೆ ಎಸ್, ಚೈತ್ರಶ್ರೀ, ಅಶ್ವಿತಾರವರಿಂದ ನೃತ್ಯ, ಶ್ರದ್ಧಾ ನಾಯರ್ಪಳ್ಳರವರಿಂದ ಕಾವ್ಯವಾಚನ, ಸುಜಾತಾ ಸಿ ಎಚ್, ಸ್ವಾತಿ ವಿ,ಎಂ, ಪವಿತ್ರ ಡಿ. ಆರ್, ಶರಣ್ಯ ಡಿ ಇವರಿಂದ ಭಾವಗಾಯನ ನಡೆಯಿತು.