ಜಿಎಸ್‌ಟಿ ನೋಂದಣಿಯಲ್ಲಿ ದೇಶದಲ್ಲೇ ಕರ್ನಾಟಕ ಪ್ರಥಮ: ಬಿ.ಎ.ನಾಣಿಯಪ್ಪ
ಮಂಗಳೂರು, ಮಾ.7: ಕೇಂದ್ರ ಸರಕಾರ ಜಾರಿಗೊಳಿಸಲಿರುವ ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ)ನೋಂದಣಿಯಲ್ಲಿ ಕರ್ನಾಟಕವು ದೇಶದಲ್ಲೇ ಮತ್ತು ಮಂಗಳೂರು ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ ಎಂದು ಮಂಗಳೂರು ಪಶ್ಚಿಮ ವಲಯ ವಾಣಿಜ್ಯ ತೆರಿಗೆ (ಜಾರಿ) ಜಂಟಿ ಆಯುಕ್ತ ಬಿ.ಎ. ನಾಣಿಯಪ್ಪ ಹೇಳಿದರು.
ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ (ಬಿಸಿಸಿಐ) ಮಂಗಳವಾರ ನಗರದ ಐಎಂಎ ಸಭಾಂಗಣದಲ್ಲಿ ಏರ್ಪಡಿಸಿದ ಸರಕು ಸೇವಾ ತೆರಿಗೆ (ಜಿಎಸ್‌ಟಿ) ಕುರಿತ ವಿಚಾರ ಸಂಕಿರಣದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ಸಮಾಜದಲ್ಲಿ ಬೇರೆ ಬೇರೆ ವಿಧದ ವರ್ತಕರಿದ್ದಾರೆ. ವ್ಯಾಪಾರ-ವ್ಯವಹಾರಕ್ಕೆ ಸಂಬಂಧಿಸಿ ತೆರಿಗೆ ವ್ಯವಸ್ಥೆಯಲ್ಲಿ ವರ್ತಕರ ಪಾತ್ರ ಅಪಾರ. 1997ರಿಂದ ವ್ಯಾಟ್ ವ್ಯವಸ್ಥೆ ಜಾರಿಗೆ ಬಂದ ಬಳಿಕ ಬೇರೆ ಬೇರೆ ತೆರಿಗೆಗಳ ಮೂಲಕ ಶೇ.35ರಷ್ಟು ಆರ್ಥಿಕ ಹೊರೆ ಬೀಳುತ್ತಿತ್ತು. ಆದರೆ, ಜಿಎಸ್‌ಟಿ ಬಂದ ಬಳಿಕ ಶೇ.18ರಿಂದ 20ರವರೆಗೆ ಅದರ ಇಳಿಕೆಯಾಗಲಿದೆ. ಇದು ಪ್ರತಿ ಗ್ರಾಹಕನಿಗೆ ಅನುಕೂಲವಾಗಲಿದೆ ಎಂದು ಬಿ.ಎ. ನಾಣಿಯಪ್ಪ ನುಡಿದರು.
ಜಿಎಸ್‌ಟಿಗೆ ಆರಂಭದಲ್ಲಿ ಭಾರೀ ಪ್ರತಿರೋಧ ವ್ಯಕ್ತವಾದರೂ ಇದೀಗ ಎಲ್ಲರೂ ಅದಕ್ಕೆ ಒಗ್ಗಿಕೊಳ್ಳುತ್ತಿದ್ದಾರೆ. ಕೋಟ್ಯಂತರ ವ್ಯವಹಾರ ಮಾಡಿದರೂ ಕೂಡ ಪಾರದರ್ಶಕವಾಗಿರಲಿ. ಇದರಿಂದ ಸ್ವತ: ಉದ್ಯಮಿಗೆ ಮಾತ್ರವಲ್ಲ ಸಮಾಜಕ್ಕೂ ಒಳ್ಳೆಯದಾಗಲಿದೆ. ಯಾವ ಕಾರಣಕ್ಕೂ ಜಿಎಸ್‌ಟಿಯಲ್ಲಿ ಅಕ್ರಮ ವ್ಯವಹಾರಕ್ಕೆ ಅವಕಾಶವಿಲ್ಲ. ಅಕ್ರಮ ಎಸಗಿದರೆ ಕಟ್ಟುನಿಟ್ಟಾಗಿ ದಂಡ ಪಾವತಿಸಬೇಕಾಗುತ್ತದೆ. ಸಣ್ಣಪುಟ್ಟ ತಪ್ಪುಗಳಾದರೆ ಅದನ್ನು ಸರಿಪಡಿಸಲು ವರ್ಷವೇ ಕಾಯಬೇಕಾದಿತು. ಯಾವ ವಾಣಿಜ್ಯ ತೆರಿಗೆ ಅಧಿಕಾರಿ ಕೂಡ ಯಾರನ್ನೂ ರಕ್ಷಿಸಲಾರರು. ಎಲ್ಲವೂ ಹೊಸದಿಲ್ಲಿ ಕೇಂದ್ರಿತವಾಗಿರುತ್ತದೆ. ಹಾಗಾಗಿ ಕಾನೂನು ಪರಿಪಾಲನೆಯೊಂದಿಗೆ ಪಾರದರ್ಶಕ ವ್ಯವಹಾರ ಮಾಡಿ ಎಂದು ಬಿ.ಎ. ನಾಣಿಯಪ್ಪ ಕರೆ ನೀಡಿದರು.
ಸಾರ್ವಜನಿಕರ ಸಹಭಾಗಿತ್ವ ಅತ್ಯಗತ್ಯ:
ಜಿಎಸ್‌ಟಿ ಯಶಸ್ವಿಗೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯವಿದೆ. ಜಿಎಸ್‌ಟಿಯಿಂದ ವರ್ತಕರಿಗೆ ಮಾತ್ರವಲ್ಲ ಜನಸಾಮಾನ್ಯರಿಗೂ ಪ್ರಯೋಜನವಾಗಲಿದೆ. ಹೊರರಾಜ್ಯದಿಂದ ವಸ್ತುಗಳನ್ನು ಆಮದು ಮಾಡಿದರೂ ಕೂಡ ಹೆಚ್ಚಿನ ತೆರಿಗೆ ಬೀಳುವುದಿಲ್ಲ. ಉತ್ಪನ್ನಗಳು ಹೆಚ್ಚಾಗಲಿದೆ, ಅದರ ದರ ಕಡಿಮೆಯಾಗಲಿದೆ. ಸರಕಾರಗಳಿಗೂ ಸಂಪನ್ಮೂಲ ಕ್ರೋಢೀಕರಣಗೊಳ್ಳಲಿದೆ. ರಾಜ್ಯ ಸರಕಾರಗಳು ಕೇಂದ್ರದ ಅನುದಾನಕ್ಕಾಗಿ ಹೆಚ್ಚು ಹಾತೊರೆಯುವುದನ್ನು ತಪ್ಪಲಿದೆ ಎಂದು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತ (ಆಡಳಿತ-ವ್ಯಾಟ್ ವಿಭಾಗ) ಎಚ್. ಜಿ. ಪವಿತ್ರ ಹೇಳಿದರು.
ಜುಲೈಯಿಂದ ಜಾರಿಗೊಳ್ಳಲಿರುವ ಜಿಎಸ್‌ಟಿ ಬಗ್ಗೆ ಜಾಗೃತಿ ಅತ್ಯಗತ್ಯ. ಈಗಿರುವ ಎಲ್ಲ ತೆರಿಗೆಗಳನ್ನು ಏಕೀಕೃತ ತೆರಿಗೆ ವ್ಯವಸ್ಥೆಯಲ್ಲಿ ವಿಲೀನಗೊಳಿಸುವ ಪರೋಕ್ಷ ಪದ್ಧತಿ ಇದಾಗಿದೆ. ಕೇಂದ್ರೀಯ ಮತ್ತು ರಾಜ್ಯ ತೆರಿಗೆಗಳ ವಿಲೀನದಿಂದಾಗಿ ಅಧಿಕ ತೆರಿಗೆ ಪಾವತಿಯು ತಪ್ಪುತ್ತದೆ ಎಂದು ಎಚ್. ಜಿ. ಪವಿತ್ರ ನುಡಿದರು.
ವಾಣಿಜ್ಯ ತೆರಿಗೆಗಳ ಉಪಾಯುಕ್ತ ಬಿ. ಶಂಭು ಭಟ್, ಸಹಾಯಕ ಆಯುಕ್ತ ವಿಜಯ ಕುಮಾರ್ ಬತಾಡ್ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ವೇದಿಕೆಯಲ್ಲಿ ಬಿಸಿಸಿಐ ಉಪಾಧ್ಯಕ್ಷ ಅಬ್ದುರ್ರವೂಫ್ ಪುತ್ತಿಗೆ, ಪ್ರಧಾನ ಕಾರ್ಯದರ್ಶಿ ಇಮ್ತಿಯಾಝ್, ಕೋಶಾಧಿಕಾರಿ ಮನ್ಸೂರ್ ಅಹ್ಮದ್ ಉಪಸ್ಥಿತರಿದ್ದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಬಿಸಿಸಿಐ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ ಸ್ವಾಗತಿಸಿದರು. ಖಾಲಿದ್ ತಣ್ಣೀರುಬಾವಿ ಕಿರಾಅತ್ ಪಠಿಸಿದರು. ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.