×
Ad

​ಸುಳ್ಯ ತಾಲೂಕು ಪಂಚಾಯತ್ ಕೆಡಿಪಿ ಸಭೆ: ಕುಡಿಯುವ ನೀರಿನ ಸಮಸ್ಯೆ ಕುರಿತು ಗಂಭೀರ ಚರ್ಚೆ

Update: 2017-03-07 19:18 IST

ಸುಳ್ಯ, ಮಾ.7: ತುರ್ತು ಕುಡಿಯುವ ನೀರಿಗೆ ಅನುದಾನ ನೀಡುವುದಾಗಿ ಸರ್ಕಾರ ಘೋಷಣೆ ಮಾಡುವುದಲ್ಲದೆ ಅನುದಾನ ಬರುವುದಿಲ್ಲ. ಅನುದಾನ ಘೋಷಣೆಗಷ್ಟೇ ಸೀಮಿತವಾಗುತ್ತಿದೆ ಎಂದು ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಆರೋಪಿಸಿದ್ದಾರೆ.

 ತಾ.ಪಂ.ಅಧ್ಯಕ್ಷ ಚನಿಯ ಕಲ್ತಡ್ಕ ಅಧ್ಯಕ್ಷತೆಯಲ್ಲಿ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕುಡಿಯುವ ನೀರಿನ ವಿಷಯಗಳ ಬಗ್ಗೆ ಚರ್ಚೆ ನಡೆದಾಗ ಮಾತನಾಡಿದ ಅವರು ಕಳೆದ ನಾಲ್ಕು ವರ್ಷಗಳಿಂದಲೂ ಕುಡಿಯುವ ನೀರಿನ ಯೋಜನೆಗೆ ವಿಶೇಷ ಅನುದಾನ ನೀಡುವುದಾಗಿ ಸರ್ಕಾರ ಹೇಳುತ್ತಾ ಬಂದಿದ್ದರೂ ಯಾವುದೇ ಅನುದಾನ ಬರುವುದಿಲ್ಲ. ಯೋಜನೆ ಮಾಡುವುದಲ್ಲದೆ ಅದು ಅನುಷ್ಠಾನವಾಗುವುದಿಲ್ಲ ಎಂದು ಆರೋಪಿಸಿದರು.

ಸುಳ್ಯ ತಾಲೂಕಿನಲ್ಲಿ ತುರ್ತು ಕುಡಿಯುವ ನೀರಿನ ಯೋಜನೆಗಾಗಿ 87 ಲಕ್ಷದ ಕ್ರಿಯಾ ಯೋಜನೆ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದ ಎಂದು ತಾ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರ್.ಮಧುಕುಮಾರ್ ತಿಳಿಸಿದರು. ತುರ್ತು ಕುಡಿಯುವ ನೀರಿನ ಬೇಡಿಕೆ ಬಂದರೆ ಅನುದಾನ ಇದೆ ಎಂದು ಇಂಜಿನಿಯರ್‌ಗಳು ಸಭೆಗೆ ತಿಳಿಸಿದರು.

ರಾತ್ರಿ ಹಗಲೆನ್ನದೆ ನಿರಂತರ ವಿದ್ಯುತ್ ಕಡಿತ ಮಾಡುತ್ತಿರುವುದರಿಂದ ಸಾರ್ವಜನಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪರೀಕ್ಷೆ ಸಮೀಪಿಸುತ್ತಿದ್ದಂತ ಮಕ್ಕಳು ಕತ್ತಲಿನಲ್ಲಿ ಪರೀಕ್ಷಾ ಸಿದ್ಧತೆ ಮಾಡಬೇಕಾದ ಸ್ಥಿತಿ ಬಂದಿದೆ ಎಂದು ಅಧ್ಯಕ್ಷ ಚನಿಯ ಕಲ್ತಡ್ಕ ಮೆಸ್ಕಾಂ ಇಂಜಿನಿಯರ್‌ಗಳನ್ನು ತರಾಟೆಗೆತ್ತಿಕೊಂಡರು.

ಇದಕ್ಕೆ ಧ್ವನಿಗೂಡಿಸಿದ ರಾಧಾಕೃಷ್ಣ ಬೊಳ್ಳೂರು ಸಾರ್ವಜನಿರಿಗೆ ವಿತರಿಸುವ ಸೀಮೆ ಎಣ್ಣೆಯೂ ವಿತರಣೆಯನ್ನೂ ನಿಲ್ಲಿಸಲಾಗಿದೆ. ಮಕ್ಕಳು ಪರೀಕ್ಷೆಗೆ ಓದುವುದು ಹೇಗೆ ಎಂದು ಪ್ರಶ್ನಿಸಿದರು. ವಿದ್ಯುತ್‌ನ ಬೇಡಿಕೆ ಅಧಿಕವಿದ್ದು ಲೋಡ್ ಹೆಚ್ಚಾಗುತ್ತಿರುವ ಕಾರಣ ಸಮರ್ಪಕವಾಗಿ ವಿತರಣೆ ಸಾಧ್ಯವಾಗುತ್ತಿಲ್ಲ. 110 ಕೆವಿ ಸಬ್ ಸ್ಟೇಷನ್ ಅನುಷ್ಠಾನ ಆಗದೆ ವಿದ್ಯುತ್ ಸರಬರಾಜು ಮಾಡಲು ಆಗುವುದಿಲ್ಲ ಎಂದು ಮೆಸ್ಕಾಂ ಇಂಜಿನಿಯರ್‌ಗಳು ಸ್ಪಷ್ಟೀಕರಣ ನೀಡಿದರು.

ಯಾವಾಗಲೂ ಸಮಸ್ಯೆಯನ್ನೇ ಹೇಳುವ ಬದಲು ಅದನ್ನು ಪರಿಹರಿಸಿ ಜನರಿಗೆ ಸಮರ್ಪಕವಾದ ರೀತಿಯಲ್ಲಿ ವಿದ್ಯುತ್ ನೀಡಿ ಎಂದು ಅಧ್ಯಕ್ಷರು ಇಂಜಿನಿಯರ್‌ಗಳಿಗೆ ಸೂಚನೆ ನೀಡಿದರು.

ಶಾಲೆಗಳಲ್ಲಿ ಶಿಷ್ಟಾಚಾರ ಪಾಲನೆಗೆ ಸೂಚನೆ:
ಶಾಲೆಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ ಮತ್ತು ಇತರ ಜನಪ್ರತಿನಿಧಿಗಳನ್ನು ಕಡೆಗಣಿಸಲಾಗುತ್ತಿದೆ. ಶಾಲೆಗಳಲ್ಲಿನ ಈ ಶಿಷ್ಟಾಚಾರ ಉಲ್ಲಂಘನೆಯ ಕುರಿತು ಶಿಕ್ಷಣ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಭೆ ಸೂಚಿಸಿತು. ತಾಲೂಕಿನಲ್ಲಿ ಜನಪ್ರತಿನಿಧಿಗಳನ್ನು ಕಡೆಗಣಿಸಿ ಕಾರ್ಯಕ್ರಮ ನಡೆಸಿದ ಶಾಲೆಗಳಿಗೆ ಶೋಕಾಸ್ ನೋಟೀಸ್ ನೀಡಲು ಶಿಕ್ಷಣ ಇಲಾಖೆಗೆ ಆದೇಶ ನೀಡಲಾಯಿತು.

ಪಶು ಸಂಗೋಪನಾ ಇಲಾಖೆಯಲ್ಲಿ ಒಟ್ಟು ಮಂಜೂರಾದ 51 ಹುದ್ದೆಗಳಲ್ಲಿ ಇದುವರೆಗೆ ಕೇವಲ 15 ಮಂದಿ ಮಾತ್ರ ಇದ್ದವು. ಇದೀಗ ಮತ್ತೆ ಎರಡು ಮಂದಿ ವರ್ಗಾವಣೆಯಾಗಿರುವುದರಿಂದ ಕೇವಲ 13 ಮಂದಿ ಉಳಿಯುತ್ತಾರೆ. ಸಿಬ್ಬಂದಿಗಳ ತೀವ್ರ ಕೊರತೆಯಿಂದ ಇಲಾಖೆಯ ಕೆಲಸ ಕಾರ್ಯಗಳಿಗೆ ತೀವ್ರ ತೊಂದರೆ ಉಂಟಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು. ತಾಲೂಕಿನಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

 ಪಹಣಿ ಪತ್ರವನ್ನು ಈಗ ನೀಡಲು ಕ್ರಮ ಕೈಗೊಳ್ಳಲಾಗುತಿದೆ, 94ಸಿ ಯೋಜನೆಯಡಿಯಲ್ಲಿ ಪ್ರಥಮ ಹಂತದಲ್ಲಿ ಬಂದ 7,120 ಅರ್ಜಿಗಳಲ್ಲಿ ಶೇ.99ರಷ್ಟು ಅರ್ಜಿ ವಿಲೇವಾರಿ ಮಾಡಲಾಗಿದೆ. ಎರಡನೇ ಹಂತದಲ್ಲಿ 979 ಅರ್ಜಿಗಳು ಸ್ವೀಕೃತಗೊಂಡಿದ್ದು ಅದರ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

28 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿನ ಸರ್ಕಾರಿ ಜಾಗದ ಕುರಿತು, ನಿವೇಶನ, ಶ್ಮಶಾನ ಭೂಮಿ ಮತ್ತಿತರ ಎಲ್ಲಾ ವಿವರಗಳನ್ನೂ ಮಾ.13ರ ಮೊದಲು ಸಲ್ಲಿಸುವಂತೆ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಸರ್ವೇ ಇಲಾಖೆಗೆ ಸೂಚಿಸಿದರು.

ಏಪ್ರಿಲ್ ಎರಡು ಮತ್ತು 30 ರಂದು ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಸುಬ್ರಹ್ಮಣ್ಯ ಸಭೆಗೆ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News