×
Ad

ರಾಜ್ಯದಲ್ಲಿ ಸಹಕಾರಿ ಸಂಘ ಬಲಿಷ್ಠ :ಎಂ.ಎನ್. ರಾಜೇಂದ್ರಕುಮಾರ್

Update: 2017-03-07 19:42 IST

ಸುಳ್ಯ, ಮಾ.7: ರಾಷ್ಟ್ರೀಕೃತ ಬ್ಯಾಂಕ್ ಸೇವಾ ಸೌಲಭ್ಯದಷ್ಟೇ ಪ್ರಾಥಮಿಕ ಸಹಕಾರಿ ಸಂಸ್ಥೆಗಳು ಗ್ರಾಹಕರಿಗೆ ಸೇವೆ ನೀಡುತ್ತಿದ್ದು, ಗ್ರಾಹಕರೇ ನಮ್ಮ ಆಸ್ತಿಯಾಗಿದ್ದಾರೆ. ರಾಷ್ಟ್ರೀಕೃತ ಬ್ಯಾಂಕ್ ಗಳು ಇತ್ತೀಚೆಗೆ ಸೇವಾ ಶುಲ್ಕವನ್ನು ವಿಧಿಸಲು ಆರಂಭಿಸಿದ್ದು, ನಾವು ನಮ್ಮ ಗ್ರಾಹಕರಿಗೆ ಸೇವಾ ಶುಲ್ಕ ವಿಧಿಸುವುದಿಲ್ಲ. ಸಹಕಾರಿ ಕೇಂದ್ರ ಬಲಿಷ್ಠವಾಗಿದ್ದು ಕೃಷಿಕರ ಆಶೋತ್ತರವನ್ನು ಈಡೇರಿಸುವಲ್ಲಿ ನಾವು ಸಫಲರಾಗಿದ್ದೇವೆ ಎಂದು ಮಂಗಳೂರು ಎಸ್.ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಡಾ ರಾಜೇಂದ್ರಕುಮಾರ್ ಹೇಳಿದರು.

 ಅವರು ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಜಾಲ್ಸೂರು ಇದರ ನೂತನ ಕಟ್ಟಡ ಕನಕ ಸೌಧವನ್ನು ಉದ್ಘಾಟಿಸಿ ಮಾತನಾಡಿದರು.

ನೋಟು ಅಮಾನ್ಯದಿಂದ ಕೃಷಿ ಸಾಲ ಮರುಪಾವತಿ ಮಾಡಲು ತೊಡಕು ಉಂಟಾಗಿದೆ. ಇದನ್ನು ಮೂರು ತಿಂಗಳಿಗೆ ವಿಸ್ತರಿಸಬೇಕೆಂದು ವಿನಂತಿಸಿದ ಮೇರೆಗೆ ಎರಡು ತಿಂಗಳು ವಿಸ್ತರಣೆಯಾಗಿದೆ. ಇನ್ನೂ ಒಂದು ತಿಂಗಳು ವಿಸ್ತರಣೆಯಾಗಬೇಕು ಎಂದು ವಿನಂತಿಸುತ್ತೇವೆ. ಪುತ್ತೂರು-ಸುಳ್ಯ ಭಾಗದಲ್ಲಿ ಮಳೆ ಕಡಿಮೆಯಾಗಿ ಬರಗಾಲ ಎದುರಾಗಿದೆ. ಈ ನಿಟ್ಟಿನಲ್ಲಿ ಸುಳ್ಯ ಪುತ್ತೂರನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ, ಬರ ಪರಿಹಾರವನ್ನು ಈ ಭಾಗಕ್ಕೂ ವಿಸ್ತರಿಸಬೇಕೆಂದು ರಾಜೇಂದ್ರಕುಮಾರ್ ಒತ್ತಾಯಿಸಿದರು.

ಆಡಳಿತ ಕಚೇರಿಯನ್ನು ಶಾಸಕ ಎಸ್. ಅಂಗಾರ ಉದ್ಘಾಟಿಸಿ, ಶುಭಹಾರೈಸಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಕೆ.ಎಸ್. ದೇವರಾಜ್ ಭದ್ರತಾ ಕೊಠಡಿಯನ್ನು ಉದ್ಘಾಟಿಸಿದರು.

ಸಂಸದ ನಳಿನ್‌ಕುಮಾರ್ ಕಟೀಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ನೋಟು ಅಮಾನ್ಯದಿಂದ ಎಲ್ಲರಿಗೆ ಸ್ವಲ್ಪ ತೊಂದರೆಯಾದರೂ ಕಪ್ಪು ಹಣವನ್ನು ಹೊರಗೆ ತರುವಲ್ಲಿ ಪ್ರಧಾನಿಯವರ ದಿಟ್ಟ ನಿರ್ಧಾರ ಭವ್ಯ ಭಾರತದ ಆರ್ಥಿಕ ಬೆಳವಣಿಗೆಗೆ ಪೂರಕವಾಗಿದೆ. ಸುಳ್ಯ ಮತ್ತು ಪುತ್ತೂರನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ಮತ್ತು ಪುತ್ತೂರಿಗೆ ಬೋರ್‌ವೆಲ್ ಕೊರೆತ ನಿಷೇಧವಾಗಿರುವುದನ್ನು ತೆರವುಗೊಳಿಸುವಲ್ಲಿ ಪ್ರಯತ್ನಿಸುವುದಾಗಿ ಅವರು ತಿಳಿಸಿದರು.

ಅರಣ್ಯ ಸಚಿವ ಬಿ. ರಮಾನಾಥ ರೈ ಅವರು ಪೂಜಾ ಸಂದರ್ಭದಲ್ಲಿ ಭಾಗವಹಿಸಿದ್ದರು .ನೂತನ ಸಭಾಭವನ ರೈತ ಭವನವನ್ನು ಹಾಗೂ ನಾಮಫಲಕವನ್ನು ಕೆ.ಎಂ.ಎಫ್. ನಿರ್ದೇಶಕ ಸೀತಾರಾಮ ರೈ ಅನಾವರಣಗೊಳಿಸಿದರು. ಗೋದಾಮು ಹಾಗೂ ದಿನಬಳಕೆ ವಸ್ತುಗಳ ಮಾರಾಟ ಮಳಿಗೆಯನ್ನು ಕ್ಯಾಂಪ್ಕೋ ಅಧ್ಯಕ್ಷ ಸತೀಶ್ಚಂದ್ರ ಎಸ್.ಆರ್. ಉದ್ಘಾಟಿಸಿದರು.

ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಹರೀಶ್ ಆಚಾರ್ ಪಾಲು ಪತ್ರ ವಿತರಿಸಿದರು. ಸ್ಥಳದಾನಿಗಳಿಗೆ, ಮಾಜಿ ಅಧ್ಯಕ್ಷರುಗಳಿಗೆ, ನಿವೃತ್ತ ಕಾರ್ಯದರ್ಶಿಗಳಿಗೆ ಸುಳ್ಯ ಎ.ಪಿ.ಎಂ.ಸಿ. ಅಧ್ಯಕ್ಷ ಜಾಕೆ ಮಾಧವ ಗೌಡ ಗೌರವಾರ್ಪಣೆ ಮಾಡಿದರು. ಮುಖ್ಯ ಅತಿಥಿಗಳಾಗಿ ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ, ಜಿಲ್ಲಾ ಜೇನು ಸಹಕಾರಿ ಸಂಘದ ಅಧ್ಯಕ್ಷ ಚಂದ್ರಾ ಕೋಲ್ಚಾರು, ಬೆಂಗಳೂರು ನಬಾರ್ಡ್ ಸಹಾಯಕ ಮುಖ್ಯ ವ್ಯವಸ್ಥಾಪಕ ರಮೇಶ್ ಎಸ್, ಸುಳ್ಯ ಸಹಕಾರಿ ಯೂನಿಯನ್ ಅಧ್ಯಕ್ಷ ಹರೀಶ್ ರೈ ಉಬರಡ್ಕ, ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ, ಜಿ.ಪಂ. ಸದಸ್ಯೆ ಶ್ರೀಮತಿ ಪುಷ್ಪಾವತಿ ಬಾಳಿಲ, ತಾ.ಪಂ. ಸದಸ್ಯ ತೀರ್ಥರಾಮ ಜಾಲ್ಸೂರು, ಕನಕಮಜಲು ಗ್ರಾ.ಪಂ. ಉಪಾಧ್ಯಕ್ಷ ಶ್ರೀಧರ ಕುತ್ಯಾಳ, ಜಾಲ್ಸೂರು ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಶಶಿಕಲಾ ನಾಯಕ್, ಎ.ಪಿ.ಎಂ.ಸಿ. ಸದಸ್ಯ ಶಂಕರ ಪೆರಾಜೆ, ಸ್ಥಳದಾನಿ ಮುತ್ತಣ್ಣ ಗೌಡ ಮೂರ್ಜೆ, ಇಂಜಿನಿಯರ್ ಶ್ಯಾಂಪ್ರಸಾದ್ ಎ.ಡಿ. ಉಪಸ್ಥಿತರಿದ್ದರು.

ಸಹಕಾರಿ ಸಂಘದ ಉಪಾಧ್ಯಕ್ಷೆ ಶ್ರೀಮತಿ ಗೀತಾ ಕೆ.ಜಿ ಬೊಳುಬೈಲು, ನಿರ್ದೇಶಕರುಗಳಾದ ದಿವಾಕರ ಕಾಳಪ್ಪಜ್ಜನಮನೆ, ವಸಂತ ಮಳಿ, ಈಶ್ವರ ಕೊಂರ್ಬಡ್ಕ, ಶ್ರೀಮತಿ ವಿಜಯಲಕ್ಷ್ಮೀ ಎ. ಅಕ್ಕಿಮಲೆ, ಸತೀಶ್ ಕೆಮನಬಳ್ಳಿ, ಜಯಪ್ರಕಾಶ ಬೈತ್ತಡ್ಕ, ರಾಮಣ್ಣ ನಾಯ್ಕ ಬೊಳುಬೈಲು, ಶ್ರೀಮತಿ ರವಿಕಲಾ ರೈ ಕುರಿಯ, ವಲಯ ಮೇಲ್ವಿಚಾರಕರಾದ ಬಾಲಕೃಷ್ಣ ಪಿ, ಕಾನೂನು ಸಲಹೆಗಾರ ದೇವಿಪ್ರಸಾದ್ ಆಳ್ವ ಉಪಸ್ಥಿತರಿದ್ದರು.

ಸಹಕಾರಿ ಸಂಘದ ಅಧ್ಯಕ್ಷ ಹರೀಶ ಕೆ.ಯಂ ಮೂರ್ಜೆ ಸ್ವಾಗತಿಸಿದರು.  ದ.ಕ. ಕೃಷಿ ಅಭಿವೃದ್ಧಿ ಸಹಕಾರಿ ಸಂಘ ನಿರ್ದೇಶಕ ಕೆ. ಜಯರಾಮ ರೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಲೋಹಿತ್‌ಕುಮಾರ್ ಕುದ್ಕುಳಿ ವಂದಿಸಿದರು. ದಾಮೋದರ ಕಣಜಾಲು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News