×
Ad

2030ರ ವೇಳೆಗೆ ಮಲೇರಿಯಾ ನಿರ್ಮೂಲನೆಯ ಗುರಿ: ಡಾ.ಪ್ರೇಮಾನಂದ

Update: 2017-03-07 20:50 IST

ಉಡುಪಿ, ಮಾ.7: ಮಲೇರಿಯಾ ಪ್ರಕರಣದಲ್ಲಿ ರಾಜ್ಯದಲ್ಲೇ ಎರಡನೆ ಸ್ಥಾನದಲ್ಲಿರುವ ಉಡುಪಿ ಜಿಲ್ಲೆಯು ಪ್ರಸ್ತುತ ಕೆಟಗರಿ ಮೂರರಲ್ಲಿ ಸ್ಥಾನ ಪಡೆದುಕೊಂಡಿದೆ. ಅದನ್ನು 2020ರಲ್ಲಿ ಕೆಟಗರಿ ಒಂದಕ್ಕೆ ಮತ್ತು 2030ರ ವೇಳೆಗೆ ಸೊನ್ನೆಗೆ ತರುವ ಗುರಿಯನ್ನು ಹೊಂದಲಾಗಿದೆ. ಆ ನಿಟ್ಟಿನಲ್ಲಿ ಈ ವರ್ಷದಿಂದಲೇ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಉಡುಪಿ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಪ್ರೇಮಾ ನಂದ ತಿಳಿಸಿದ್ದಾರೆ.

ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಕಚೇರಿಯ ವತಿ ಯಿಂದ ರಾಷ್ಟ್ರೀಯ ಕೀಟ ಜನ್ಯ ರೋಗಗಳ ನಿಯಂತ್ರಣ ಕಾರ್ಯಕ್ರಮದಡಿ ಇಂದು ಬ್ರಹ್ಮಗಿರಿಯ ವಾರ್ತಾಭವನದಲ್ಲಿ ಆಯೋಜಿಸಲಾದ ಮಾಧ್ಯಮ ಪ್ರತಿನಿಧಿಗಳ ಕಾರ್ಯಾಗಾರದಲ್ಲಿ ಅವರು ಮಾತನಾಡುತಿದ್ದರು.

ಉಡುಪಿ ಜಿಲ್ಲೆಯಲ್ಲಿ 2015ರಲ್ಲಿ ರಕ್ತದ ಮಾದರಿ ಪರೀಕ್ಷಿಸಿದ 2,25,332 ಮಂದಿಯಲ್ಲಿ 1366(ಪ್ಲಾಸ್ಮೋಡಿಯಂ ವೈವ್ಯಾಕ್ಸ್- 1153, ಪ್ಲಾಸ್ಮೋಡಿಯಂ ಫಾಲ್ಸಿಪಾರಂ-213), 2016ರಲ್ಲಿ ರಕ್ತದ ಮಾದರಿ ಪರೀಕ್ಷಿಸಿದ 2,42,253 ಮಂದಿಯಲ್ಲಿ 1168(ಪಿವಿ-1022, ಪಿಎಫ್-146), 2017ರ ಫೆಬ್ರವರಿ ವರೆಗೆ 52(ಪಿವಿ-45, ಪಿಎಫ್-7) ಮಲೇರಿಯಾ ಪ್ರಕರಣಗಳು ಪತ್ತೆಯಾ ಗಿವೆ. ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ 2015ರಲ್ಲಿ 787, 2016ರಲ್ಲಿ 826 ಮಲೇರಿಯಾ ಪ್ರಕರಣಗಳು ಕಂಡುಬಂದಿವೆ ಎಂದರು.

ಚಿಕುನ್‌ಗುನ್ಯ ನಿಯಂತ್ರಣ:

ಚಿಕುನ್‌ಗುನ್ಯಕ್ಕೆ ಸಂಬಂಧಿಸಿದಂತೆ 2014ರಲ್ಲಿ ಜಿಲ್ಲೆಯ 20ಮಂದಿಯ ರಕ್ತ ಪರೀಕ್ಷೆ ಮಾಡಲಾಗಿತ್ತು. ಅದರಲ್ಲಿ 3 ಮಂದಿಯಲ್ಲಿ ರೋಗ ಪತ್ತೆಯಾಗಿತ್ತು. 2015ರಲ್ಲಿ ರಕ್ತ ಪರೀಕ್ಷೆಗೆ ಒಳಪಡಿಸಲಾದ 135 ಮಂದಿಯಲ್ಲಿ 3 ಮಂದಿಯಲ್ಲಿ ಮಾತ್ರ ರೋಗ ಕಾಣಿಸಿಕೊಂಡಿತ್ತು. 2016 ಮತ್ತು 2017ರಲ್ಲಿ ಚಿಕುನ್‌ಗುನ್ಯ ಯಾವುದೇ ಪ್ರಕರಣಗಳು ಜಿಲ್ಲೆಯಲ್ಲಿ ಪತ್ತೆಯಾಗಿಲ್ಲ ಎಂದು ಡಾ.ಪ್ರೇಮಾನಂದ ತಿಳಿಸಿದರು.

ಮೆದುಳು ಜ್ವರಕ್ಕೆ ಸಂಬಂಧಿಸಿದಂತೆ 2015ರಲ್ಲಿ 68 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಇವರಲ್ಲಿ ಮೂವರಲ್ಲಿ ಈ ಕಾಯಿಲೆ ಪತ್ತೆಯಾಗಿತ್ತು. 2016ರಲ್ಲಿ 77 ಮಂದಿಯಲ್ಲಿ ಒಬ್ಬರಲ್ಲಿ ಮಾತ್ರ ಮೆದುಳು ಜ್ವರ ಕಾಣಿಸಿಕೊಂಡಿತ್ತು. ಈ ವರ್ಷ ಮೆದುಳು ಜ್ವರದ ಯಾವುದೇ ಪ್ರಕರಣಗಳು ಪತ್ತೆಯಾಗಿಲ್ಲ ಎಂದು ಅವರು ಮಾಹಿತಿ ನೀಡಿದರು.

ಆನೆಕಾಲು ರೋಗ ನಿರ್ಮೂಲನೆ:

ಲೇರಿಯಾ, ಡೆಂಗ್, ಚಿಕುನ್‌ಗುನ್ಯ, ಮೆದುಳುಜ್ವರ ಹಾಗೂ ಆನೆಕಾಲು ಸೊಳ್ಳೆಯಿಂದ ಹರಡುವ ಕಾಯಿಲೆಗಳಾಗಿವೆ. ಆನೆಕಾಲು ರೋಗವನ್ನು ಸಂಪೂರ್ಣ ನಿರ್ಮೂಲನೆ ಮಾಡುವ ಹಂತದಲ್ಲಿದ್ದೇವೆ. ಹೊಸದಾಗಿ ಆನೆಕಾಲು ರೋಗ ಎಲ್ಲೂ ಕಂಡುಬಂದಿಲ್ಲ ಎಂದು ಅವರು ಹೇಳಿದರು.

ಮಲೇರಿಯಾ, ಆನೆಕಾಲು ರೋಗಕ್ಕೆ ನಿರ್ದಿಷ್ಟ ಚಿಕಿತ್ಸೆ ಇದೆ. ಆನೆಕಾಲು ರೋಗ ಪೀಡಿತರ ವೃಷಣ ಶಸ್ತ್ರಚಿಕಿತ್ಸೆಗೆ ಸರಕಾರದ ಅನುದಾನ ಒದಗಿಸುತ್ತದೆ. ಅದಕ್ಕಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆ ಜೊತೆ ಒಡಂಬಡಿಕೆ ಮಾಡಿಕೊಳ್ಳ ಲಾಗಿದೆ. ಡೆಂಗ್ಯು ರೋಗಕ್ಕೆ ನಿರ್ದಿಷ್ಟವಾದ ಚಿಕಿತ್ಸೆ ಇಲ್ಲ. ಮೆದುಳು ಜ್ವರ ಹೊರತು ಪಡಿಸಿ ಉಳಿದ ನಾಲ್ಕು ಕಾಯಿಲೆಗಳಿಗೆ ಯಾವುದೇ ಲಸಿಕೆಗಳಿಲ್ಲ ಎಂದು ಅವರು ತಿಳಿಸಿದರು.

ಕಾರ್ಯಾಗಾರವನ್ನು ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಯಕರ ಸುವರ್ಣ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೋಹಿಣಿ, ವಾರ್ತಾಧಿ ಕಾರಿ ಕೆ.ರೋಹಿಣಿ, ಕೀಟ ಶಾಸ್ತ್ರಜ್ಞೆ ಮುಕ್ತ ಆಚಾರ್ಯ ಉಪಸ್ಥಿತರಿದ್ದರು.

ಡೆಂಗ್ ಪ್ರಕರಣದಲ್ಲೂ 2ನೆ ಸ್ಥಾನ: 

ಉಡುಪಿ ಜಿಲ್ಲೆಯು ಡೆಂಗ್ ರೋಗದ ಪ್ರಕರಣದಲ್ಲೂ ರಾಜ್ಯದಲ್ಲಿಯೇ ಎರಡನೆ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ಡೆಂಗ್ ಪ್ರಕರಣ ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದಿದೆ.

 ಜಿಲ್ಲೆಯಲ್ಲಿ 2015ರಲ್ಲಿ 1745 ಸಂಶಯಾಸ್ಪದ ಡೆಂಗ್ ಜ್ವರ ಪೀಡಿತರ ರಕ್ತ ಪರೀಕ್ಷಿಸಿದಾಗ ಅವರಲ್ಲಿ 331ಮಂದಿಯಲ್ಲಿ ರೋಗ ಕಂಡುಬಂದಿತ್ತು. 2016ರಲ್ಲಿ 5377 ಸಂಶಯಾಸ್ಪದ ಡೆಂಗ್ ಜ್ವರ ಪೀಡಿತರಲ್ಲಿ 3169ಮಂದಿ ಯ ರಕ್ತ ಪರೀಕ್ಷೆ ಮಾಡಿದಾಗ ಅವರಲ್ಲಿ 600ಮಂದಿಯಲ್ಲಿ ರೋಗ ಪತ್ತೆ ಯಾಗಿತ್ತು. ಇದರಲ್ಲಿ ಒಬ್ಬರು ಮೃತಪಟ್ಟಿದ್ದರು. 2017ರ ಫೆಬ್ರವರಿಯವರೆಗೆ 29ಮಂದಿಯಲ್ಲಿ ಈ ಜ್ವರ ಕಂಡುಬಂದಿದೆ.

ಈ ಜ್ವರ ಹರಡುವ ಈಡೀಸ್ ಈಜಿಪ್ಟೈ ಸೊಳ್ಳೆ ಸಂಗ್ರಹಿಸಿದ ನೀರಿನಲ್ಲಿ ಮೊಟ್ಟೆ ಇಡುತ್ತದೆ. ಆದುದರಿಂದ ಸಂಗ್ರಹಿಸಿದ ನೀರನ್ನು ಮುಚ್ಚಿ ಇಡಬೇಕು. ಗಾಳಿ ಹೋಗುವಷ್ಟು ಸಣ್ಣ ರಂಧ್ರ ಇದ್ದರೂ ಅದರಲ್ಲಿ ಸೊಳ್ಳೆ ಪ್ರವೇಶಿಸಿ 45 ಸೆಕೆಂಡ್ ಒಳಗೆ ಮೊಟ್ಟೆ ಇಡುತ್ತದೆ. ಇದು ನೀರಿನ ಮಟ್ಟಕ್ಕಿಂತ ಮೇಲಿರುವ ನೀರಿನ ತೇವಾಂಶದಲ್ಲಿ ಮೊಟ್ಟೆ ಇಡುತ್ತದೆ.

ರೋಗಕ್ಕೆ ಹೆಣ್ಣು ಸೊಳ್ಳೆಗಳೇ ಕಾರಣ:

ಜಗತ್ತಿನಲ್ಲಿ 3000 ಜಾತಿಯ ಸೊಳ್ಳೆಗಳಿವೆ. ಹೆಣ್ಣು ಸೊಳ್ಳೆಗಳು ಮಾತ್ರ ಮನುಷ್ಯನ ರಕ್ತ ಹೀರಿ ಕಾಯಿಲೆಗಳನ್ನು ಹರಡುತ್ತವೆ. ಮಲೇರಿಯಾ, ಡೆಂಗ್ ಹರಡುವ ಸೊಳ್ಳೆ ಶುದ್ಧ ನೀರಿನಲ್ಲಿ ಮೊಟ್ಟೆ ಇಟ್ಟರೆ, ಆನೆಕಾಲು ರೋಗ ಹಬ್ಬಿಸುವ ಸೊಳ್ಳೆಯು ಮಲೀನ ನೀರಿನಲ್ಲಿ ಮೊಟ್ಟೆ ಇಡುತ್ತದೆ.

ಮೊಟ್ಟೆ, ಹುಳ, ಕೋಶ ಮತ್ತು ವಯಸ್ಕ ಸೊಳ್ಳೆ ಎಂಬ ನಾಲ್ಕು ಹಂತದಲ್ಲಿ ಇರುತ್ತದೆ. ಇದರಲ್ಲಿ ಎಲ್ಲಕ್ಕಿಂತ ಹುಳ ವ್ಯವಸ್ಥೆಯಲ್ಲಿರುವಾಗ ಸೊಳ್ಳೆಯನ್ನು ನಿಯಂತ್ರಿ ಸುವುದು ಸುಲಭ. ಸೊಳ್ಳೆಗಳ ಒಟ್ಟು ಜೀವಿತಾವಧಿ 22ದಿನಗಳು ಮಾತ್ರ ಎಂದು ಕೀಟ ಶಾಸ್ತ್ರಜ್ಞೆ ಮುಕ್ತ ಆಚಾರ್ಯ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News