ಪುತ್ತೂರು: ಮಿಷನ್ 95+ ಯೋಜನೆಗೆ ರಾಷ್ಟ್ರ ಪ್ರಶಸ್ತಿ
ಪುತ್ತೂರು, ಮಾ.17: ಎಸೆಸೆಲ್ಸಿ ಫಲಿತಾಂಶವನ್ನು ಹೆಚ್ಚುಗೊಳಿಸುವ ಉದ್ದೇಶದಿಂದ ಪುತ್ತೂರಿನ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್. ಶಶಿಧರ್ ಆರಂಭಿಸಿದ ಮಿಷನ್ 95+ ಯೋಜನೆಗೆ ರಾಷ್ಟ್ರ ಮಟ್ಟದ ಪ್ರಶಸ್ತಿ ಲಭಿಸಿದೆ.
ಮಂಗಳವಾರ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್. ಶಶಿಧರ್ ಅವರಿಗೆ ದೆಹಲಿಯಲ್ಲಿ ದೆಹಲಿಯಲ್ಲಿ ನಡೆದ ಸರಕಾರಿ ಕಾರ್ಯಕ್ರಮದಲ್ಲಿ ಕೇಂದ್ರ ಮಾನವ ಸಂಪನ್ಮೂಲ ಖಾತೆಯ ಸಚಿವ ಪ್ರಕಾಶ್ ಜಾವ್ಡೇಕರ್ ಅಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.
ಪುತ್ತೂರು ತಾಲೂಕಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶವನ್ನು ಹೆಚ್ಚುಗೊಳಿಸುವ ಉದ್ದೇಶದಿಂದ 35 ಮಾರ್ಕ್ ಒಳಗೆ ಪಡೆಯುವ ವಿದ್ಯಾರ್ಥಿಗಳನ್ನು ಗುರಿಯಾಗಿರಿಸಿ 2014-15ರ ಶೈಕ್ಷಣಿಕ ವರ್ಷದಿಂದ ಮಿಶನ್ 95 ಪ್ಲಸ್ ಯೋಜನೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್.ಶಶಿಧರ್ ಅವರು ಹಮ್ಮಿಕೊಂಡು ಯೋಜನೆ ರೂಪಿಸಿದ್ದರು.
ಶಿಕ್ಷಣ ಆಡಳಿತದಲ್ಲಿ ನಡೆಸಿದ ಆವಿಷ್ಕಾರಕ್ಕಾಗಿ ಈ ರಾಷ್ಟ್ರೀಯ ಪ್ರಶಸ್ತಿಯನ್ನು ಇದೀಗ ಶಶಿಧರ್ ಜಿ.ಎಸ್. ಅವರಿಗೆ ಪ್ರದಾನ ಮಾಡಲಾಗಿದೆ. ರಾಷ್ಟ್ರೀಯ ಶೈಕ್ಷಣಿಕ ಯೋಜನೆ ಮತ್ತು ಆಡಳಿತ ವಿಶ್ವ ವಿದ್ಯಾನಿಲಯ (ಎನ್‌ಯುಇಪಿಎ) ನೀಡುವ ಈ ಪ್ರಶಸ್ತಿಯನ್ನು ಮಂಗಳವಾರ ದೆಹಲಿಯಲ್ಲಿ ನಡೆದ ಶೈಕ್ಷಣಿಕ ಆಡಳಿತದ ಆವಿಷ್ಕಾರದ ಕುರಿತಾದ ರಾಷ್ಡ್ರೀಯ ಸಮ್ಮೇಳನದಲ್ಲಿ ಕೇಂದ್ರ ಸರಕಾರ ಮತ್ತು ವಿವಿಯ ಪ್ರಮುಖರ ಸಮ್ಮುಖ ಪ್ರದಾನ ಮಾಡಲಾಯಿತು.
ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ಶೈಕ್ಷಣಿಕ ಆಡಳಿತದಲ್ಲಿ ಮಾಡಲಾದ ನಾನಾ ಆವಿಷ್ಕಾರಗಳಿಗೆ ಸಂಬಂಧಿಸಿದ ಯೋಜನಾ ವರದಿಗಳನ್ನು ರಾಷ್ಟ್ರಮಟ್ಟದಿಂದ ಆಮಂತ್ರಿಸಲಾಗಿತ್ತು.
ಕರ್ನಾಟಕದಿಂದ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಯವರ ಮಿಶನ್ 95 ಪ್ಲಸ್ ಯೋಜನೆಯನ್ನು ಆರಿಸಲಾಗಿತ್ತು. ದೆಹಲಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಈ ಯೋಜನೆಯನ್ನು ಪ್ರಸ್ತುತಪಡಿಸಿದ್ದರು.