ಉಪ್ಪಿನಂಗಡಿ: ಜೀಪು ಡಿಕ್ಕಿ; ತುಂಡಾದ ವಿದ್ಯುತ್ ಕಂಬ, ಪವಾಡ ಸದೃಶ್ಯ ಅಪಾಯದಿಂದ ಪಾರು
ಉಪ್ಪಿನಂಗಡಿ, ಮಾ.7: ಚಾಲಕನ ನಿಯಂತ್ರಣ ತಪ್ಪಿದ ಜೀಪೊಂದು ರಾಷ್ಟ್ರೀಯ ಹೆದ್ದಾರಿ ಬದಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಮಂಗಳವಾರ ರಾತ್ರಿ ಉಪ್ಪಿನಂಗಡಿಯ ಆದಿತ್ಯ ಹೊಟೇಲ್ ಬಳಿಯ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದ್ದು, ಘಟನೆಯಿಂದ ಜೀಪಿನಲ್ಲಿದ್ದ ಚಾಲಕ ಸಹಿತ ಇನ್ನೋರ್ವ ಪವಾಡ ಸದೃಶ್ಯ ಅಪಾಯದಿಂದ ಪಾರಾಗಿದ್ದಾರೆ.
ಘಟನೆಯಿಂದ ಜೀಪಿನಲ್ಲಿದ್ದ ವಳಾಲ್‌ನ ಪ್ರಸಾದ್ (30) ಹಾಗೂ ಸುಂದರ್ (25) ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಜೀಪು ಡಿಕ್ಕಿ ಹೊಡೆದ ಪರಿಣಾಮ ಎಚ್‌ಟಿ ಲೈನ್‌ನ ವಿದ್ಯುತ್ ಕಂಬ ತುಂಡಾಗಿ ಬಿದ್ದಿದ್ದು, ಚಾಲಕನ ನಿಯಂತ್ರಣ ತಪ್ಪಿದ ಜೀಪು ಎಡಗಡೆಗೆ ಚಲಿಸಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಚರಂಡಿಗೆ ಇಳಿದಿದೆ.
ಅಪಘಾತದ ಸಂದರ್ಭ ವಿದ್ಯುತ್ ತಂತಿಗಳಲ್ಲಿ ವಿದ್ಯುತ್ ಪ್ರವಹಿಸುತ್ತಿದ್ದು, ಕಂಬ ಜೀಪು ಮೇಲೇನಾದರೂ ಉರುಳಿ ಬಿದ್ದಿದ್ದರೆ, ಹೆಚ್ಚಿನ ಅನಾಹುತಕ್ಕೆ ಕಾರಣವಾಗುವ ಅಪಾಯವಿತ್ತು. ಆದರೆ, ವಿದ್ಯುತ್ ಕಂಬ ರಾಷ್ಟ್ರೀಯ ಹೆದ್ದಾರಿಗೆ ಬಾಗಿ ನಿಂತಿದೆ. ಬಜತ್ತೂರು, ಬಜತ್ತೂರು ಗ್ರಾಮಾಂತರ, ಉಪ್ಪಿನಂಗಡಿ ಸುತ್ತಮುತ್ತಲಿನ ಫೀಡರ್‌ಗಳ ವಿದ್ಯುತ್ ಸಂಪರ್ಕವನ್ನು ಸಂಪೂರ್ಣ ಕಡಿತಗೊಳಿಸಾಯಿತು.
ಇದರಿಂದಾಗಿ ಈ ಪರಿಸರದಲ್ಲಿ ವಿದ್ಯುತ್ ವ್ಯತ್ಯಯಗೊಂಡಿತು. ಬಳಿಕ ಸ್ಥಳಕ್ಕಾಗಮಿಸಿ ಉಪ್ಪಿನಂಗಡಿ ಮೆಸ್ಕಾಂನವರು ಫೀಡರ್ ಚಾರ್ಚ್ ಮಾಡಿ ತಾತ್ಕಾಲಿಕ ವಿದ್ಯುತ್ ವ್ಯವಸ್ಥೆ ಕಲ್ಪಿಸಿದರು.