ಉಡುಪಿ: 11 ಕಡೆ 11.54ಕೋಟಿ ರೂ.ವೆಚ್ಚದಲ್ಲಿ ಸಮುದ್ರ ತಡೆಗೋಡೆ ರಚನೆ
ಉಡುಪಿ, ಮಾ.7: ಜಿಲ್ಲೆಯಲ್ಲಿ ಮಳೆಗಾಲದ ವೇಳೆ ತೀವ್ರ ಸಮುದ್ರ ಕೊರೆತ ಕಾಣಿಸಿಕೊಳ್ಳುವ 11 ಸ್ಥಳಗಳಲ್ಲಿ ಒಟ್ಟು 11.54 ಕೋಟಿ ರೂ. ವೆಚ್ಚದಲ್ಲಿ ಸಮುದ್ರ ತಡೆಗೋಡೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ ಎಂದು ರಾಜ್ಯ ಲೋಕೋಪಯೋಗಿ, ಬಂದರು, ಒಳನಾಡು ಜಲಸಾರಿಗೆ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದ್ದಾರೆ.
ಉಡುಪಿ ಜಿಲ್ಲೆಯಲ್ಲಿರುವ ಸಮುದ್ರ ಕೊರೆತ ತಡೆಗೋಡೆ ಕಾಮಗಾರಿಗಳ ವೀಕ್ಷಣೆಗೆಂದು ಆಗಮಿಸಿದ ಸಚಿವರು ಕಾಪು ಹಾಗೂ ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರದೇಶಗಳಿಗೆ ಭೇಟಿ ನೀಡಿದ ಮಲ್ಪೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಬೈಂದೂರು ಕ್ಷೇತ್ರದ ವಿವಿಧ ಸ್ಥಳಗಳ ಪರಿವೀಕ್ಷಣೆಯನ್ನು ನಾಳೆ ನಡೆಸಲಿದ್ದಾರೆ.
ಜಿಲ್ಲೆಯಲ್ಲಿ ಕಾಪು ಕಡಲತೀರವನ್ನು ಹೊರತು ಪಡಿಸಿ 1154ಮೀ. ಪ್ರದೇಶದಲ್ಲಿ 11.54 ಕೋಟಿ ರೂ.ವೆಚ್ಚದಲ್ಲಿ ಶಾಶ್ವತ ಸಮುದ್ರ ತಡೆಗೋಡೆ ನಿರ್ಮಿಸಲಾಗಿದೆ.ಕಾಪು ಕ್ಷೇತ್ರದಲ್ಲಿ ಒಂದು ಕೋಟಿ ರೂ.ವೆಚ್ಚದ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.
ಉಳಿದಂತೆ ಬಡಾ ಎರ್ಮಾಳ್, ತೆಂಕಎರ್ಮಾಳ್, ಹೂಡೆ ತೊಟ್ಟಂ, ಕುಂದಾಪುರದ ಕೋಡಿ, ಮಣೂರು ಪಡುಕೆರೆ, ಕಿರಿಮಂಜೇಶ್ವರ ಹಾಗೂ ಶಿರೂರುಗಳಲ್ಲಿ ತಲಾ ಒಂದು ಕೋಟಿ ರೂ.ವೆಚ್ಚದಲ್ಲಿ ಶಾಶ್ವತ ತಡೆಗೋಡೆ ಕಾಮಗಾರಿ ಪೂರ್ಣಗೊಂಡಿದೆ ಎಂದರು. ಶಿರೂರು ದೊಂಬೆಯಲ್ಲಿ 470 ಮೀ. ಉದ್ದದ ತಡೆಗೋಡೆ 4.99 ಕೋಟಿ ರೂ.ವೆಚ್ಚದಲ್ಲಿ ನಡೆಸಲಾಗಿದೆ. ತೆಂಕನಿಡಿಯೂರಿನಲ್ಲಿ 75 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣಕಾರ್ಯ ನಡೆದಿದೆ ಎಂದರು.
ಕರ್ನಾಟಕದ ಕರಾವಳಿಯಲ್ಲಿ ಎಡಿಬಿ ನೆರವಿನಿಂದ ಒಟ್ಟು 911 ಕೋಟಿ ರೂ.ವೆಚ್ಚದಲ್ಲಿ ಶಾಶ್ವತ ತಡೆಗೋಡೆ ನಿರ್ಮಾಣ ನಡೆಯಲಿದೆ. ಮೊದಲ ಹಂತದಲ್ಲಿ 223 ಕೋಟಿ ರೂ.ವೆಚ್ಚದಲ್ಲಿ ಉಳ್ಳಾಲದಲ್ಲಿ ತಡೆಗೋಡೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈವರೆಗೆ 190 ಕೋಟಿ ರೂ.ವೆಚ್ಚವಾಗಿದ್ದು ಶೇ.85ರಷ್ಟು ಕಾಮಗಾರಿ ಮುಗಿದಿದೆ. ಉಳಿದ ಕಾಮಗಾರಿ ಮೇ ತಿಂಗಳೊಳಗೆ ಮುಗಿಯಲಿದೆ ಎಂದರು.
ಎರಡನೇ ಹಂತದಲ್ಲಿ ಉಡುಪಿಯಲ್ಲಿ 350 ಕೋಟಿ ರೂ.ವೆಚ್ಚದಲ್ಲಿ ಒಟ್ಟು 18 ಕಿ.ಮೀ.ಉದ್ದದ ಶಾಶ್ವತ ತಡೆಗೋಡೆ ನಿರ್ಮಾಣ ಕಾರ್ಯ ಈ ವರ್ಷ ಪ್ರಾರಂಭಗೊಂಡು 2020ರಲ್ಲಿ ಮುಕ್ತಾಯಗೊಳ್ಳಲಿದೆ. ಇವುಗಳಲ್ಲಿ ಎರ್ಮಾಳ್ ತೆಂಕದಲ್ಲಿ (4.5ಕಿ.ಮೀ. 80ಕೋಟಿ ರೂ.), ಉದ್ಯಾವರ ಪಡುಕೆರೆ (5ಕಿ.ಮೀ.99 ಕೋಟಿರೂ.), ಕೋಡಿಬೇಂಗ್ರೆ (4.5ಕಿ.ಮೀ. 76ಕೋಟಿ ರೂ.), ಕೋಡಿ ಕನ್ಯಾಣ (1.5ಕಿ.ಮೀ. 1ಕೋಟಿ ರೂ.) ಹಾಗೂ ಮರವಂತೆ (3.5ಕಿ.ಮೀ. 92.23 ಕೋಟಿ ರೂ.)ಗಳಲ್ಲಿ ಈ ಕಾಮಗಾರಿ ನಡೆಯಲಿದೆ ಎಂದು ಡಾ.ಮಹಾದೇವಪ್ಪ ವಿವರಿಸಿದರು.
ಮಲ್ಪೆಯ ವಡಬಾಂಡೇಶ್ವರದಲ್ಲಿ ಕಳೆದ ವರ್ಷ ತೀವ್ರ ಸಮುದ್ರ ಕೊರೆತ ಕಾಣಿಸಿಕೊಂಡ ಪ್ರದೇಶದಲ್ಲಿ 260ಮೀ. ಉದ್ದದ ತಡೆಗೋಡೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ಹೊಸ ತಂತ್ರಜ್ಞಾನ ಅಳವಡಿಸಿ ಇಲ್ಲಿ 26ಮೀ. ಅಗಲದ ಬದಲು 13ಮೀ. ಅಗಲದ ತಡೆಗೋಡೆ ನಿರ್ಮಿಸಲಾಗುತ್ತಿದೆ. ಇದರಿಂದ ಶೇ.50ರಷ್ಟು ವೆಚ್ಚ ಉಳಿತಾಯವಾಗಲಿದ್ದು, ಹೆಚ್ಚು ಪರಿಣಾಮಕಾರಿ ಎಂದು ಕಂಡುಬಂದಿದೆ ಎಂದರು.
ಮಲ್ಪೆ ಬಂದರಿನಲ್ಲಿ 130ಮೀ. ಉದ್ದದ ಜಟ್ಟಿಯನ್ನು 15 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಈಗ 5 ಕೋಟಿ ರೂ.ವೆಚ್ಚದಲ್ಲಿ 80 ಮೀ. ಕಾಮಗಾರಿ ಮುಗಿದಿದೆ ಎಂದರು.
ಮಲ್ಪೆ-ತೀರ್ಥಹಳ್ಳಿ ಹೆದ್ದಾರಿ: ಮಲ್ಪೆ ಹಾಗೂ ತೀರ್ಥಹಳ್ಳಿ ನಡುವಿನ 87 ಕಿ.ಮೀ. ರಸ್ತೆ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿದ್ದು, ಇದು ಚತುಷ್ಪಥ ಯೋಜನೆ ಡಿಪಿಆರ್ ಹಂತದಲ್ಲಿದೆ ಎಂದು ಸಚಿವರು ಹೇಳಿದರು.
ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಪಡುಕೆರೆ, ಕೇಶವ ಕೋಟ್ಯಾನ್, ಗೋಪಾಲಕೃಷ್ಣ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.