×
Ad

ಜಾತಿ ಜನಗಣತಿ ವರದಿ ಬಿಡುಗಡೆ ಮಾಡಿ: ಕೋಟ ಶ್ರೀನಿವಾಸ ಒತ್ತಾಯ

Update: 2017-03-07 21:59 IST

ಉಡುಪಿ, ಮಾ.7: ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಭಾರೀ ಹೆಗ್ಗಳಿಕೆಯೊಂದಿಗೆ ರಾಜ್ಯದಲ್ಲಿ ಮೊದಲ ಬಾರಿ ನಡೆಸಿದ ಜಾತಿ ಜನಗಣತಿಯ ವರದಿಯನ್ನು ಕೂಡಲೇ ಬಿಡುಗಡೆ ಮಾಡುವಂತೆ ವಿಧಾನಪರಿಷತ್ ಸದಸ್ಯ ಹಾಗೂ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.

ತಮ್ಮ ಕಚೇರಿಯಲ್ಲಿ ಇಂದು ಕರೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿರುವ ಎಲ್ಲಾ ಜಾತಿಗಳ ವೈಜ್ಞಾನಿಕ ಸಮೀಕ್ಷೆ ನಡೆಸಿ, ಸಣ್ಣ ಸಣ್ಣ ಜಾತಿಗಳ ಆರ್ಥಿಕ ಸ್ಥಿತಿಗತಿ, ಅಸ್ಪಶೃತ್ಯೆಯ ಪರಿಣಾಮಗಳ ಕುರಿತು ಸರಿಯಾದ ಮಾಹಿತಿಯನ್ನು ಕಲೆಹಾಕಿ, ಮೀಸಲಾತಿಯ ಲಾಭವನ್ನು ಎಲ್ಲರಿಗೂ ದೊರಕಿಸಲು ಈ ಸಮೀಕ್ಷೆಯನ್ನು ನಡೆಸಲಾಗುತ್ತಿದೆ ಎಂದು ಸಮಾಜ ಕಲ್ಯಾಣ ಸಚಿವ ಆಂಜನೇಯ ಅವರು ವಿಧಾನ ಪರಿಷತ್‌ನಲ್ಲಿ ಹೇಳಿಕೊಂಡಿದ್ದರು. ಸರಕಾರ ಸದ್ದುದ್ದೇಶದಿಂದ ಜಾತಿಗಣತಿ ನಡೆಸುವುದಕ್ಕೆ ನಾವು ಬೆಂಬಲ ನೀಡಿದ್ದೆವು ಎಂದರು.

ಈ ಸಮೀಕ್ಷೆಗಾಗಿ 200ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದ್ದು, ಈವರೆಗೆ 180 ಕೋಟಿ ರೂ.ಗಳನ್ನು ವ್ಯಯಿಸಲಾಗಿದೆ. 2015ರ ಎ.11ರಂದು ಪ್ರಾರಂಭಗೊಂಡ ಈ ಸಮೀಕ್ಷೆ ತನ್ನ ಕಾರ್ಯವನ್ನು ಮುಗಿಸಿದ್ದರೂ, ರಾಜ್ಯ ಸರಕಾರ ಇದುವರೆಗೆ ಸಮೀಕ್ಷಾ ವರದಿಯನ್ನು ಬಿಡುಗಡೆ ಮಾಡಿಲ್ಲ ಎಂದವರು ದೂರಿದರು.

ವರದಿ ಬಿಡುಗಡೆಗೊಳಿಸುವಂತೆ ನಾವು ಪದೇ ಪದೇ ಸರಕಾರವನ್ನು ಆಗ್ರಹಿಸುತಿದ್ದರೂ, ಸರಕಾರ ನೆಪಗಳನ್ನು ಹೇಳುತ್ತಾ ದಿನದೂಡುತ್ತಿದೆ. ಸರಕಾರ ಬಲಾಢ್ಯ ಜಾತಿಗಳ ಒತ್ತಡಕ್ಕೆ ಮಣಿದು ವರದಿಯನ್ನು ಬಹಿರಂಗ ಪಡಿಸಲು ಹಿಂಜರಿಯುತ್ತಿದೆ ಎಂಬ ಸಂಶಯ ನಮಗಿದೆ ಎಂದು ಹೇಳಿದ ಕೋಟ ಶ್ರೀನಿವಾಸ ಪೂಜಾರಿ, ಮಾ.15ರೊಳಗೆ ಜಾತಿಗಣತಿಯ ವರದಿಯನ್ನು ಬಿಡುಗಡೆ ಮಾಡದಿದ್ದರೆ ಪಕ್ಷದ ವತಿಯಿಂದ ಹೋರಾಟವನ್ನು ಆರಂಭಿಸುತ್ತೇವೆ. ಈ ತಿಂಗಳು ಪ್ರಾರಂಭಗೊಳ್ಳುವ ಬಜೆಟ್ ಅಧಿವೇಶನದಲ್ಲೂ ವಿಷಯವನ್ನು ಪ್ರಸ್ತಾಪಿಸುತ್ತೇವೆ ಎಂದರು.

ಪಡಿತರ ಗೊಂದಲ:

ಬಿಪಿಎಲ್ ಕಾರ್ಡುದಾರರ ಪಡಿತರ ಚೀಟಿಯಲ್ಲಿ ಸರಕಾರದ ಗೊಂದಲ ಮುಂದುವರಿದಿದ್ದು, ಇದರಿಂದ ಬಡಜನರು ತೊಂದರೆ ಗೊಳಗಾಗುವಂತಾಗಿದೆ. ಸಚಿವ ಖಾದರ್ ಅವರು ದಿನಕ್ಕೊಂದು ರೀತಿಯ ಹೇಳಿಕೆ ನೀಡಿ ಗೊಂದಲ ಹೆಚ್ಚಿಸುತಿದ್ದಾರೆ ಎಂದು ಕೋಟ ನುಡಿದರು.

ಇದರಿಂದ ದಕ್ಷಿಣ ಕನ್ನಡದ 13,000 ಹಾಗೂ ಉಡುಪಿ ಜಿಲ್ಲೆಯ 5000 ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡುಗಳು ಬ್ಲಾಕ್ ಆಗಿವೆ. ಜನರು ಪಡಿತರ ಸಿಗದೇ ಕಂಗಾಲಾಗಿದ್ದಾರೆ. ರೇಶನ್ ಪಡೆಯಲು ಕೂಪನ್ ತೆಗೆದುಕೊಳ್ಳುವಂತೆ ಹೇಳಿ ಜನರು ತಮ್ಮ ಪಾಲಿನ ಪಡಿತರ ಪಡೆಯಲು ಪರದಾಡುವಂತಾಗಿದೆ. ಬಡಜನರು ಕೂಪನ್‌ಗಾಗಿ ಕ್ಯೂನಿಂತು, ಬಳಿಕ ಮತ್ತೆ ಪಡಿತರ ತರಲು ಹಣ ಖರ್ಚುಮಾಡಬೇಕಾಗಿದೆ ಎಂದು ಕೋಟ ನುಡಿದರು.

ಕೇಂದ್ರ ಸರಕಾರದ 22ರೂ. ಹಾಗೂ ರಾಜ್ಯದ ಮೂರು ರೂ. ಸಬ್ಸಿಡಿಯೊಂದಿಗೆ ಉಚಿತವಾಗಿ ಸಿಗುವ ಅಕ್ಕಿಯನ್ನು ಪಡೆಯಲು ಬಡವರು ಕಷ್ಟಪಡಬೇಕಾಗಿದೆ. ಅದನ್ನು ಸಹ ತಿಂಗಳ ಮೊದಲ ವಾರದಲ್ಲಿ ನೀಡದೇ ಕೊನೆಯ ವಾರದವರೆಗೆ ಅವರನ್ನು ಕಾಯಿಸಲಾಗುತ್ತಿದೆ. ಸಚಿವರು ಕೂಡಲೇ ಬಡಜನರು ಪಡೆಯುವ ಪಡಿತರದ ಗೊಂದಲವನ್ನು ನಿವಾರಿಸಬೇಕು ಎಂದು ಒತ್ತಾಯಿಸಿದರು.

 ಮರಳು ಸಮಸ್ಯೆ:

ನ್ನೈ ಹಸಿರು ಪೀಠ ಮರಳುಗಾರಿಕೆಗೆ ಸಂಬಂಧಿಸಿದಂತೆ ನೀಡಿದ ತೀರ್ಪಿಗೆ ಜಿಲ್ಲಾಡಳಿತದ ವೈಫಲ್ಯವೇ ಕಾರಣವಾಗಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಆರೋಪಿಸಿದರು. ಜನರ ಬವಣೆಯನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಲು ಅದು ಸಂಪೂರ್ಣ ವಿಫಲವಾಗಿದೆ. ಹೀಗಾಗಿ ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡದಲ್ಲಿ ಇಲ್ಲದ ಮರಳು ಸಮಸ್ಯೆ ಉಡುಪಿ ಜಿಲ್ಲೆಯಲ್ಲಿ ಕಾಣಿಸಿಕೊಳ್ಳಲು ಜಿಲ್ಲಾಡಳಿತ ಕಾರಣವಾಗಿದೆ ಎಂದರು.

ಜಿಲ್ಲೆಯಲ್ಲಿರುವ ಮರಳಿನ ಅಭಾವಕ್ಕೆ ಜಿಲ್ಲಾಡಳಿತವೇ ಕಾರಣವಾಗಿದ್ದು, ಇದರ ವಿರುದ್ಧ ಬಿಜೆಪಿ ಹೋರಾಟವನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಿದೆ ಎಂದವರು ನುಡಿದರು.

ಕಾರ್ಮಿಕರ ಬವಣೆ:

ರಾಜ್ಯ ಕಾರ್ಮಿಕ ಇಲಾಖೆಯಲ್ಲಿ 5333 ಕೋಟಿ ರೂ.ಲಭ್ಯವಿದ್ದರೂ, ಕಳೆದೊಂದು ವರ್ಷದಲ್ಲಿ ಕೇವಲ 362 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ರಾಜ್ಯದ ಅಸಂಘಟಿತ ಕಾರ್ಮಿಕರಿಗೆ ಹಲವು ಕಾರ್ಯಕ್ರಮಗಳಿದ್ದರೂ, ಇಲಾಖೆ ಯಾವುದೇ ಯೋಜನೆಯನ್ನು ಜಾರಿ ಗೊಳಿಸುತ್ತಿಲ್ಲ ಎಂದು ಕೋಟ ದೂರಿದರು.

ಅಸಂಘಟಿತ ವಲಯದ ಕಾರ್ಮಿಕ ಮೃತಪಟ್ಟರೆ ಕುಟುಂಬಕ್ಕೆ ಮೂರು ಲಕ್ಷ ರೂ., ಕಾರ್ಮಿಕನ ಕುಟುಂಬದ ಮದುವೆಗೆ 50,000ರೂ., ಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ನೀಡಲು ಅವಕಾಶವಿದೆ.ಆದರೆ ಕಾರ್ಮಿಕ ಇಲಾಖೆ ಇವುಗಳನ್ನು ರಾಜ್ಯದ ಕಾರ್ಮಿಕರಿಗೆ ತಲುಪಿಸಲು ವಿಫಲವಾಗಿದೆ ಎಂದವರು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News