ಸಿಐಎಯ ಸಾವಿರಾರು ಪ್ರಮುಖ ದಾಖಲೆಗಳು ವಿಕಿಲೀಕ್ಸ್ ನಲ್ಲಿ ಬಹಿರಂಗ

Update: 2017-03-08 05:26 GMT

ವಾಷಿಂಗ್ಟನ್, ಮಾ.8: ನಾಟಕೀಯ ಬೆಳವಣಿಗೆಯೊಂದರಲ್ಲಿ ಅಮೆರಿಕದ ಸೆಂಟ್ರಲ್ ಇಂಟಲಿಜೆನ್ಸ್ ಏಜನ್ಸಿ ಸೆಂಟರ್ ಫಾರ್ ಸೈಬರ್ ಇಂಟಲಿಜೆನ್ಸ್(ಸಿಐಎ)ಗೆ ಸೇರಿದ ಸಾವಿರಾರು ದಾಖಲೆಗಳನ್ನು ವಿಕಿಲೀಕ್ಸ್ ಮಂಗಳವಾರ ಬಹಿರಂಗಪಡಿಸಿದೆ. ಅಮೆರಿಕದ ಸೈಬರ್ ಗೂಢಚಾರಿಕೆಗೆ ಸಂಬಂಧಪಟ್ಟ ಹಲವು ಸೂಕ್ಷ್ಮ ದಾಖಲೆಗಳು ಇದರಿಂದ ಜಗತ್ತಿನೆದುರು ತೆರೆದಿಟ್ಟಂತಾಗಿದೆ.

ಈ ಗೌಪ್ಯ ಮಾಹಿತಿಯನ್ನು ವಿಕಿಲೀಕ್ಸ್ ಹೇಗೆ ಪಡೆದುಕೊಂಡಿತೆಂದು ತಕ್ಷಣಕ್ಕೆ ತಿಳಿದು ಬಂದಿಲ್ಲವಾದರೂ 8,700ಕ್ಕೂ ಅಧಿಕ ದಾಖಲೆಗಳು ಮತ್ತು ಕಡತಗಳು ಬಹಿರಂಗಗೊಂಡಿವೆ. ಗ್ರಾಹಕರು ತಮ್ಮ ಕಂಪ್ಯೂಟರುಗಳು, ಮೊಬೈಲ್ ಹಾಗೂ ಸ್ಮಾರ್ಟ್ ಟಿವಿಗಳ ಸುರಕ್ಷತೆಯ ಬಗ್ಗೆ ಕಳವಳ ಪಡಬಹುದಾದಂತಹ ಬೆಳವಣಿಗೆ ಇದಾಗಿದೆ.

ವರ್ಜೀನಿಯಾದ ಲ್ಯಾಂಗ್ಲೆಯಲ್ಲಿರುವ ಸಿಐಎ ಕೇಂದ್ರದ ಒಳಗಿನ ಅತ್ಯಂತ ಭದ್ರತೆಯ ಪ್ರತ್ಯೇಕ ಜಾಲದಿಂದ ಈ ಮಾಹಿತಿ ದೊರಕಿತೆಂದು ವಿಕಿಲೀಕ್ಸ್ ಹೇಳಿಕೊಂಡಿದೆ. ಈ ದಾಖಲೆಗಳನ್ನು ಯಾವ ರೀತಿಯಲ್ಲಿ ಸಂಗ್ರಹಿಸಿದೆ ಅಂದರೆ ಉದ್ಯೋಗಿಯೊಬ್ಬನ ಮುಖಾಂತರವೇ ಇಲ್ಲವೇ ಸಿಐಎಗೆ ಕಾರ್ಯನಿರ್ವಹಿಸುವ ಗುತ್ತಿಗೆದಾರರ ಮುಖಾಂತರ ಅಥವಾ ಇಂತಹ ಹ್ಯಾಕಿಂಗ್ ಸಾಧನಗಳಿರುವ ಸರ್ವರ್ ಮುಖಾಂತರವೇ ಎಂಬುದು ಸ್ಪಷ್ಟವಾಗಿಲ್ಲ.

ಸ್ಮಾರ್ಟ್ ಟೆಲಿವಿಷನ್ ಗಳ ಮುಖಾಂತರ ಸುಧಾರಿತ ವಿಚಕ್ಷಣಾ ಸಾಧನಗಳನ್ನು ಅಭಿವೃದ್ಧಿಪಡಿಸುವ ಕುರಿತಾದಂತೆ ಮತ್ತು ಇನ್ನೂ ಹಲವು ವಿಚಾರಗಳನ್ನೊಳಗೊಂಡ ಮಾಹಿತಿ ಈ ದಾಖಲೆಗಳಲ್ಲಿವೆ. ಅಮೆರಿಕನ್ ಸಾಫ್ಟ್ ವೇರ್ ಉತ್ಪನ್ನಗಳು ಹಾಗೂ ಆ್ಯಪಲ್ ಫೋನ್, ಗೂಗಲ್ ಆಂಡ್ರಾಯ್ಡ್  ಮತ್ತು ಮೈಕ್ರೋಸಾಫ್ಟ್ ವಿಂಡೋಸ್ ಸಹಿತ ಇತರ ಸ್ಮಾರ್ಟ್ ಫೋನುಗಳನ್ನು ಅಸ್ಥಿರಗೊಳಿಸುವ ಸಿಐಎ ಯತ್ನಗಳ ಕುರಿತಾದ ಮಾಹಿತಿಯೂ ಇವೆಯೆಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News