×
Ad

ದಿಲ್ಲಿ ವಿವಿ ಪ್ರೊಫೆಸರ್ ಸಹಿತ ಐವರಿಗೆ ಜೀವಾವಧಿ ಶಿಕ್ಷೆ

Update: 2017-03-08 11:55 IST

ಗಡ್ಚಿರೋಳಿ, ಮಾ.8: ನಿಷೇಧಿತ ನಕ್ಸಲೇಟ್ ಸಂಘಟನೆ ಸಿಪಿಐ(ಮಾವೋವಾದಿ)ಯೊಂದಿಗೆ ಸಂಪರ್ಕ ಹೊಂದಿರುವ ಆರೋಪದಲ್ಲಿ ನ್ಯಾಯಾಲಯವು ಗಾಲಿಕುರ್ಚಿಯನ್ನು ಆಶ್ರಯಿಸಿರುವ ದಿಲ್ಲಿ ಯುನಿವರ್ಸಿಟಿಯ ವಿಕಲಚೇತನ ಪ್ರಾಧ್ಯಾಪಕ ಜಿ.ಎನ್. ಸಾಯಿಬಾಬಾ ಸಹಿತ ಇತರ ನಾಲ್ವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಮಂಗಳವಾರ ಆದೇಶ ಹೊರಡಿಸಿದೆ.

ನಕ್ಸಲೇಟ್‌ನೊಂದಿಗೆ ಸಂಪರ್ಕ ಹೊಂದಿರುವ ಆರೋಪದಲ್ಲಿ ವಿಕಲಚೇತನ ಇಂಗ್ಲಿಷ್ ಪ್ರೊಫೆಸರ್ ಸಾಯಿಬಾಬಾರನ್ನು 2014ರ ಮೇನಲ್ಲಿ ಬಂಧಿಸಲಾಗಿತ್ತು. ಅನಾರೋಗ್ಯದ ಹಿನ್ನೆಲೆಯಲ್ಲಿ ಕಳೆದ ವರ್ಷದ ಜೂನ್‌ನಲ್ಲಿ ಸುಪ್ರೀಕೋರ್ಟ್‌ನ ಆದೇಶದ ಬಳಿಕ ಜಾಮೀನು ಪಡೆದುಕೊಂಡಿದ್ದರು.

ಎಲ್ಲ ಐವರ ವಿರುದ್ಧ ಕಾನೂನುಬಾಹಿರ ಚಟುವಟಿಕೆ(ತಡೆ) ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ. ಭಯೋತ್ಪಾದಕ ಸಂಘಟನೆ ಅಥವಾ ಸಂಸ್ಥೆ, ಭಯೋತ್ಪಾದಕರಿಗೆ ಬೆಂಬಲ ನೀಡಿದ ಆರೋಪ ಹಾಗೂ ದೇಶದ ವಿರುದ್ಧ ಯುದ್ಧ ಸಾರಿದವರ ವಿರುದ್ಧ ಈ ಕಾಯ್ದೆ ಅನ್ವಯಿಸುತ್ತದೆ.

  ದಿಲ್ಲಿ ವಿವಿ ಪ್ರಾಧ್ಯಾಪಕರು ದೈಹಿಕ ಅಂಗವಿಕಲತೆ ಹೊಂದಿದ್ದರೂ ಮಾನಸಿಕವಾಗಿ ಕ್ಷಮತೆ ಹೊಂದಿದ್ದಾರೆ. ಅವರೊಬ್ಬರು ಚಿಂತಕರು ಹಾಗೂ ನಿಷೇಧಿತ ರಾಜಕೀಯ ಸಂಘಟನೆ ಸಿಪಿಐ(ಎಂ)ನ ಮುಖಂಡರು. ನಿಮ್ಮ ಉಗ್ರ ಚಟುವಟಿಕೆಯಿಂದ 2009ರಲ್ಲಿ ಹಲವು ಜೀವಗಳು ಹೋಗಿವೆ. ಸಾರ್ವಜನಿಕರ ಆಸ್ತಿ-ಪಾಸ್ತಿಗೆ ಸಾಕಷ್ಟು ಹಾನಿಯಾಗಿದೆ. ಜೀವಾವಧಿ ಶಿಕ್ಷೆ ಅಪರಾಧಿಗಳಿಗೆ ತೃಪ್ತಿಕರ ಶಿಕ್ಷೆಯಲ್ಲ. ಯುಎಪಿಎ ಸೆಕ್ಷನ್ 18 ಹಾಗೂ 20 ನಮ್ಮ ಕೈಕಟ್ಟಿ ಹಾಕಿದೆ. ಎಲ್ಲ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಗೆ ಸೂಕ್ತವಾಗಿರುವ ಪ್ರಕರಣ ಇದಾಗಿದೆ ಎಂದು ಜಿಲ್ಲಾ ಹಾಗೂ ಸೆಶನ್ಸ್ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಶಿಂಧೆ ತೀರ್ಪಿನಲ್ಲಿ ಪ್ರಕಟಿಸಿದ್ದಾರೆ.

 ‘‘ನಮ್ಮ ವಕೀಲರು ತೀರ್ಪನ್ನು ಪ್ರಶ್ನಿಸಿ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಿದ್ದಾರೆ. ಈ ತೀರ್ಪು ಆಘಾತಕಾರಿಯಾಗಿದೆ...ಕಾರ್ಪೋರೇಟ್ ಹಾಗೂ ಎಂಎನ್‌ಸಿ ಆಣತಿಯಂತೆ ಜನವಿರೋಧಿ ಹಾಗೂ ಪ್ರಜಾಪ್ರಭುತ್ವ ವಿರೋಧಿ ಕಾರ್ಯನೀತಿಯನ್ನು ಜಾರಿಗೆ ತರುವಂತೆ ನ್ಯಾಯಾಲಯಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಭಾರೀ ಒತ್ತಡ ಹೇರುತ್ತಿವೆ. ರಾಜ್ಯ ಹಾಗೂ ಕೇಂದ್ರ ಸರಕಾರಗಳು ಜನರ ಧ್ವನಿ ಅಡಗಿಸಲು ನೋಡುತ್ತಿವೆ. ಸಾಯಿಬಾಬಾರಂತಹ ವ್ಯಕ್ತಿಯನ್ನು ಜೈಲಿಗೆ ಕಳುಹಿಸುವ ಮೂಲಕ ಬಿಜೆಪಿ ಸಂಘಪರಿವಾರದ ಕಾರ್ಯಸೂಚಿಯನ್ನು ಜಾರಿಗೆ ತರಲು ಬಯಸಿದೆ’’ ಎಂದು ಸಾಯಿಬಾಬಾರ ಪತ್ನಿ ವಸಂತಾ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಮಹಾರಾಷ್ಟ್ರದ ಸೆಶನ್ಸ್ ನ್ಯಾಯಾಲಯ ಎಲೆಕ್ಟ್ರಾನಿಕ್ ಸಾಕ್ಷಿಯನ್ನು ಆಧರಿಸಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಮೊದಲ ಘಟನೆ ಇದಾಗಿದೆ. 2013ರಲ್ಲಿ ರೈಲ್ವೆ ನಿಲ್ಧಾಣದಲ್ಲಿ ಗಡ್ಜಿರೋಳಿ ಪೊಲೀಸರು ಮಿಶ್ರಾ ಎಂಬಾತನನ್ನು ಬಂಧಿಸಿದ್ದರು. ಆತನ ಬಳಿಯಿದ್ದ ಮೆಮೋರಿ ಕಾರ್ಡ್‌ನ್ನು ಆಧರಿಸಿ ಸಾಯಿಬಾಬಾ ಮಾವೋವಾದಿ ಚಟುವಟಿಕೆಯಲ್ಲಿ ಸಕ್ರಿಯವಾಗಿದ್ದನ್ನು ಪತ್ತೆ ಹಚ್ಚಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News