×
Ad

ದ.ಕ. ಜಿಲ್ಲೆಯ ಮೊದಲ ಪ್ರಧಾನಮಂತ್ರಿ ಭಾರತಿ ಜನೌಷಧ ಕೇಂದ್ರ ಕಾರ್ಯಾರಂಭ

Update: 2017-03-08 11:58 IST

ಉಳ್ಳಾಲ, ಮಾ.8: ಬಡವರು, ಮಧ್ಯಮವರ್ಗದವರು ಇಂದು ಅನಾರೋಗ್ಯದಿಂದ ಆಸ್ಪತ್ರೆಗೆ ಸೇರಿದರೆ ದುಬಾರಿ ಔಷಧಗಳಿಗೆ ಲಕ್ಷಾಂತರ ಹಣವನ್ನು ವ್ಯಯಿಸುವ ಅನಿವಾರ್ಯತೆ ಒದಗಿದೆ. ಆ ನಿಟ್ಟಿನಲ್ಲಿ ನೆಚ್ಚಿನ ಪ್ರದಾನಿ ನರೇಂದ್ರ ಮೋದಿಯವರು ಕೇಂದ್ರ ಸರಕಾರದ ಜನೌಷಧಿ ಯೋಜನೆಯ ಮೂಲಕ ಪ್ರತೀ ಗ್ರಾಮಗಳಿಗೂ ಜನೌಷಧ ಕೆಂದ್ರಗಳನ್ನು ಒದಗಿಸಲು ಯೋಜನೆ ರೂಪಿಸಿದ್ದು, ನಮ್ಮ ಜಿಲ್ಲೆಯಲ್ಲೂ ಪ್ರಪ್ರಥಮ ಕೇಂದ್ರವು ಉದ್ಘಾಟನೆಯಾಗಿದ್ದು ಪ್ರತೀ ಗ್ರಾಮಗಳಿಗೂ ಇದನ್ನು ವಿಸ್ತರಿಸುವ ಮಹತ್ವಾಕಾಂಕ್ಷೆ ಇಟ್ಟಿರುವುದಾಗಿ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.

ಮಾತೃಭೂಮಿ ಸೌಹಾರ್ದ ಸಹಕಾರಿ ನಿಯಮಿತ ಕೇಂದ್ರ ಕಚೇರಿ ಗುರುಪುರ ಕೈಕಂಬದ ಸಹಕಾರದಿಂದ ಕೇಂದ್ರ ಸರಕಾರದ ಜನೌಷಧಿ ಯೋಜನೆಯಡಿಯಲ್ಲಿ ದೇರಳಕಟ್ಟೆಯ ವೆಸ್ಟ್ ಅವೆನ್ಯೂ ಕಟ್ಟಡದಲ್ಲಿ ಬುಧವಾರ ನೂತನವಾಗಿ ಆರಂಭವಾದ ಪ್ರಧಾನಮಂತ್ರಿ ಭಾರತೀ ಜನೌಷಧ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜನೌಷಧಿ ಕೇಂದ್ರಗಳಲ್ಲಿ 100 ರೂಪಾಯಿ ಬೆಲೆಯ ಔಷಧವು 20 ರೂಪಾಯಿಗೆ ಲಭಿಸುತ್ತಿದೆ. ಹೃದಯ ಸಂಬಂಧಿ ರೋಗಕ್ಕೆ ಸ್ಟಂಟ್ ಹಾಕಿಸಲು ಈ ಹಿಂದೆ 1.5 ಲಕ್ಷ ಖರ್ಚು ತಗಲುತ್ತಿದ್ದು ,ಪ್ರದಾನಿ ನರೇಂದ್ರ ಮೋದಿಯವರು ಇದೀಗ ಕೇವಲ 16,000 ರೂಪಾಯಿಗಳಿಗೆ ಸ್ಟಂಟನ್ನು ಹಾಕಿಸುವ ಯೋಜನೆಯನ್ನು ಜಾರಿಗೊಳಿಸಿದ್ದು ಅನೇಕರು ಇದರ ಲಾಭ ಪಡಕೊಂಡಿದ್ದಾರೆ.ಅಲ್ಲದೆ ಯುವಕರನ್ನು ಸ್ವಯಂ ಉದ್ಯೋಗಿಗಳನ್ನಾಗಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರದ ಸ್ಕಿಲ್ ಡೆವಲಾಪ್‌ಮೆಂಟ್ ಯೋಜನೆಯಡಿ ದ.ಕ ಜಿಲ್ಲೆಯಲ್ಲಿ 47,400 ಮಂದಿಗೆ ಸಾಲವನ್ನು ಕೊಟ್ಟಿದ್ದು ಇದರಿಂದ ಬಹಳ ಸಂಖ್ಯೆಯಲ್ಲಿ ಯುವ ಉದ್ಯಮಿಗಳು ಸೃಷ್ಟಿಯಾಗುವುದರೊಂದಿಗೆ ಅವರಿಂದ ಅನೇಕ ಯುವಪೀಳಿಗೆಗೆ ಉದ್ಯೋಗಾವಕಾಶ ದೊರೆತಿರುವುದು ದೇಶದ ಅಭಿವೃದ್ಧಿಯ ಸಂಕೇತ ಎಂದು ಹೇಳಿದರು.

ಮಾತೃಭೂಮಿ ಸೌಹಾರ್ದ ಸಹಕಾರಿ ಕೇಂದ್ರ ಅಧ್ಯಕ್ಷರಾದ ಭಾಸ್ಕರ್ ದೇವಸ್ಯ ಅವರು ಮಾತನಾಡಿ ಕೇಂದ್ರ ಸರಕಾರದ ಯೋಜನೆಯನ್ನು ಗ್ರಾಮ,ಗ್ರಾಮಕ್ಕೂ ತಲುಪಿಸುವ ನಿಟ್ಟಿನಲ್ಲಿ ಜಿಲ್ಲೆಯ ಅನೇಕ ಕಡೆಗಳಲ್ಲಿ ಜನೌಷಧಿ ಕೇಂದ್ರಗಳನ್ನು ತೆರೆಯುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಇದೇ ವೇಳೆ ಶಿಕ್ಷಾಸಹಯೋಗ ಯೋಜನೆಯ ವಿದ್ಯಾರ್ಥಿವೇತನವನ್ನು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಫಲಾನುಭವಿಗಳಿಗೆ ಹಂಚಿದರು.

ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಮಾತೃಭೂಮಿ ಸೌಹಾರ್ದ ಸಹಕಾರಿ ಕೇಂದ್ರದ ಉಪಾಧ್ಯಕ್ಷರಾದ ಕೆ.ಟಿ ಸುವರ್ಣ, ಆಡಳಿತ ನಿರ್ದೇಶಕರಾದ ಕೃಷ್ಣ ಕೊಂಪದವು, ಕೋಟೆಕಾರ್ ಜೆ.ಎಸ್ ಆಸ್ಪತ್ರೆಯ ಆಡಳಿತ ನಿರ್ದೇಶಕರಾದ ಡಾ.ವಿಜಯ್ ಕುಮಾರ್, ಬೆಳ್ಮ ಗ್ರಾ.ಪಂ ಅಧ್ಯಕ್ಷೆ ವಿಜಯಾ ಕೃಷ್ಣಪ್ಪ, ಜಿ.ಪಂ ಸದಸ್ಯೆ ಧನಲಕ್ಷ್ಮೀ ಗಟ್ಟಿ, ಎಲ್‌ಐಸಿ ಶಾಖಾಧಿಕಾರಿ ಎಸ್.ಗುರುರಾಜ್, ಕಣಚೂರು ಮೆಡಿಕಲ್ ಕಾಲೇಜಿನ ಮುಖ್ಯಸ್ಥ ಕಣಚೂರು ಮೋನು, ಕೋಟೆಕಾರು ಪಟ್ಟಣ ಪಂಚಾಯತ್ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ ಸುಳ್ಳೆಂಜೀರ್, ಮಾಜಿ ಜಿ.ಪಂ ಸದಸ್ಯ ಸತೀಶ್ ಕುಂಪಲ ಮತ್ತು ಮುಖಂಡರಾದ ಪ್ರವೀಣ್ ಎಸ್.ಕುಂಪಲ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News