×
Ad

ಕಲ್ಲಡ್ಕ: ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ದರೋಡೆ

Update: 2017-03-08 12:41 IST

ಬಂಟ್ವಾಳ, ಮಾ.8: ಕಿಟಕಿ ಸರಳು ಮುರಿದು ಮನೆಯೊಳಗೆ ನುಗ್ಗಿದ ಕಳ್ಳರು ಮನೆಯ ಕಪಾಟಿನಲ್ಲಿಟ್ಟಿದ್ದ ಲಕ್ಷಾಂತರ ರೂಪಾಯಿಯ ಚಿನ್ನಾಭರಣವನ್ನು ದೋಚಿ ಪರಾರಿಯಾಗಿರುವ ಘಟನೆ ಮಂಗಳವಾರ ರಾತ್ರಿ ಕಲ್ಲಡ್ಕ ಪೇಟೆಯಲ್ಲಿ ನಡೆದಿದೆ.

ಇಲ್ಲಿನ ನಿವಾಸಿ ಕೆ.ಪಿ.ನಿಝಾರ್ ಎಂಬವರಿಗೆ ಸೇರಿದ ಮನೆಯಲ್ಲಿ ಈ ಕಳ್ಳತನ ಪ್ರಕರಣ ನಡೆದಿದೆ. ನಿಝಾರ್ ಹಾಗೂ ಅವರ ಪತ್ನಿ, ಮಗು ಈ ಮನೆಯಲ್ಲಿ ವಾಸವಿದ್ದು, ಮಂಗಳವಾರ ಸಂಜೆ ಮೆಲ್ಕಾರ್‌ನಲ್ಲಿರುವ ನಿಝಾರ್‌ರ ಪತ್ನಿಯ ಮನೆಗೆ ತೆರಳಿದ್ದರು. ಇಂದು ಬೆಳಗ್ಗೆ ನಿಝಾರ್ ಮನೆಗೆ ಬಂದಾಗ ಕಳವು ಕೃತ್ಯ ಬೆಳಕಿಗೆ ಬಂದಿದೆ ಎಂದು ತಿಳಿದು ಬಂದಿದೆ. ಮನೆಯೊಳಗೆ ನುಗ್ಗಿದ ಕಳ್ಳರು ಮನೆಯ ಕೊಠಡಿಯಲ್ಲಿದ್ದ ಕಪಾಟಿನ ಬಾಗಿಲನ್ನು ಒಡೆದು ಜಾಲಾಡಿದ್ದು, ಈ ಸಂದರ್ಭದಲ್ಲಿ ಕಪಾಟಿನಲ್ಲಿದ್ದ 11 ಪವನ್ ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಮಂಗಳವಾರ ರಾತ್ರಿ ಕಲ್ಲಡ್ಕ ಮಸೀದಿ ಹಿಂಬದಿಯ ಇನ್ನೊಂದು ಮನೆಗೂ ಕಳ್ಳರು ನುಗ್ಗಿರುವ ಘಟನೆ ಕೂಡಾ ನಡೆದಿದೆ. ಮನೆಯ ಹಿಂಬಾಗಿಲನ್ನು ಒಡೆದು ಒಳ ನುಗ್ಗಿರುವ ಕಳ್ಳರು ಚಿನ್ನಾಭರಣಕ್ಕಾಗಿ ಜಾಲಾಡಿದ್ದಾರೆ. ಆದರೆ ಚಿನ್ನಾಭರಣ ಸಿಗದಿರುವುದರಿಂದ ಬರೀ ಕೈಯಲ್ಲಿ ವಾಪಸಾಗಿದ್ದಾರೆ. ಮನೆಯೊಳಗೆ ರಕ್ತದ ಕಲೆ ಪತ್ತೆಯಾಗಿದ್ದು, ಬಾಗಿಲು ಒಡೆಯುವ ಸಂದರ್ಭದಲ್ಲಿ ಕಳ್ಳರ ಕೈಗೆ ಗಾಯವಾಗಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.

ಸ್ಥಳಕ್ಕೆ ಬಂಟ್ವಾಳ ಉಪ ವಿಬಾಗದ ಡಿವೈಎಸ್ಪಿ ಡಾ.ರವೀಶ್ ಸಿ.ಆರ್., ಬಂಟ್ವಾಳ ನಗರ ಠಾಣೆಯ ಅಪರಾಧ ವಿಭಾಗದ ಎಸ್ಸೈ ಗಂಗಾಧರಪ್ಪಹಾಗೂ ಅವರ ಸಿಬ್ಬಂದಿ, ಮಂಗಳೂರು ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ಪರಿಶೀಲನೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News