ಮುಸ್ಲಿಮ್ ಮಹಿಳಾ ಅಥ್ಲೀಟುಗಳಿಗಾಗಿಯೇ ವಿಶೇಷ ಕ್ರೀಡಾ ಹಿಜಾಬ್ ತಯಾರಿಸಿದ ನೈಕ್
ಬೀವರ್ಟನ್, ಮಾ.8: ಮುಸ್ಲಿಮ್ ಮಹಿಳಾ ಅಥ್ಲೀಟುಗಳಿಗಾಗಿಯೆಂದೇ ಹಿಜಾಬ್ ಬಿಡುಗಡೆ ಮಾಡಿದೆ ಖ್ಯಾತ ಕ್ರೀಡಾ ಉತ್ಪನ್ನಗಳ ಕಂಪೆನಿಯಾದ ನೈಕ್. ನೈಕ್ ಪ್ರೋ ಹಿಜಾಬ್ ತಯಾರಿ ಕಳೆದ ಒಂದು ವರ್ಷದಿಂದ ನಡೆಯುತ್ತಿತ್ತು ಹಾಗೂ ಸ್ಕೇಟರ್ ಝಹ್ರಾ ಲರಿ ಕೂಡ ಅದನ್ನು ಧರಿಸಿ ಪರೀಕ್ಷಿಸಿದ್ದಾರೆ ಎಂದು ಕಂಪೆನಿ ಹೇಳಿಕೊಂಡಿದೆ.
ಈ ಪುಲ್-ಆನ್ ಹಿಜಾಬ್ ಹಗುರವಾದ ಸ್ಟ್ರೆಚ್ ಬಟ್ಟೆಯಿಂದ ತಯಾರಿಸಲಾಗಿದ್ದು, ಗಾಳಿಯಾಡಲು ಸಣ್ಣ ರಂಧ್ರಗಳನ್ನು ಒಳಗೊಂಡಿವೆ. ಈ ಹಿಜಾಬ್ ಕಪ್ಪು, ಕಡು ಬೂದು ಹಾಗೂ ಕಾರ್ಗಲ್ಲು ಬಣ್ಣಗಳಲ್ಲಿ ಲಭ್ಯವಿದೆ. ಮುಂದಿನ ವರ್ಷದಿಂದ ಈ ವಿಶಿಷ್ಟ ಕ್ರೀಡಾ ಹಿಜಾಬ್ ಮಾರುಕಟ್ಟೆಗೆ ಬರಲಿದೆ ಎಂದು ನೈಕ್ ಹೇಳಿದೆ.
ದಕ್ಷಿಣ ಕೊರಿಯಾದಲ್ಲಿ ನಡೆಯಲಿರುವ ಮುಂದಿನ ಒಲಿಂಪಿಕ್ಸ್ ನಲ್ಲಿ ಪದಕದ ನಿರೀಕ್ಷೆಯಲ್ಲಿರುವ ಲರಿ ಈ ಹಿಜಾಬ್ ಧರಿಸಿ ತೆಗೆದ ಫೋಟೋಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಬುಧಾಬಿಯವರಾದ ಲರಿ ಅದನ್ನು ಧರಿಸಿ ಸಂತುಷ್ಟರಾಗಿದ್ದಾರೆ.
ಕಳೆದ ರಿಯೋ ಒಲಿಂಪಿಕ್ಸ್ ನಲ್ಲಿ ಹಿಜಾಬ್ ಧರಿಸಿ ಭಾಗವಹಿಸಿದ ಪ್ರಥಮ ಮುಸ್ಲಿಮ್ ಅಮೆರಿಕನ್ ಮಹಿಳೆ ಫೆನ್ಸರ್ ಇಬ್ತಿಹಾಜ್ ಮುಹಮ್ಮದ್ ಆಗಿದ್ದರು. ಅವರಿಗೆ ಈ ಸ್ಪರ್ಧೆಯಲ್ಲಿ ಕಂಚಿನ ಪದಕ ದೊರೆತಿತ್ತು.
ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ಜೊರ್ಡಾನಿನಲ್ಲಿ ನಡೆದ ಅಂಡರ್ 17 ಮಹಿಳೆಯರ ವಿಶ್ವ ಕಪ್ ಸ್ಪರ್ಧೆಯಲ್ಲಿ ಪ್ರಪ್ರಥಮ ಬಾರಿಗೆ ಕ್ರೀಡಾಳುಗಳು ಹಿಜಾಬ್ ಧರಿಸಿ ಭಾಗವಹಿಸಿದ್ದರು.