ಸಮಾಜ ನಿರ್ಮಾಣದಲ್ಲಿ ಮಹಿಳೆಯ ಪಾತ್ರ ಮಹತ್ತರ: ಐವನ್
ಮಂಗಳೂರು, ಮಾ.8: ಮಹಿಳೆಗೆ ಅಧಿಕಾರ ನೀಡಿದರೆ ಆಕೆ ಸುಸೂತ್ರವಾಗಿ ಅಭಿವೃದ್ಧಿ ಪಥದಲ್ಲಿ ದೇಶವನ್ನು ಮುನ್ನಡೆಸಬಲ್ಲಳು ಎಂಬುದನ್ನು ಸ್ವಾತಂತ್ರ ಪೂರ್ವ ಹಾಗೂ ನಂತರದ ದಿನಗಳಲ್ಲಿ ಹಲವಾರು ಮಹಿಳೆಯರು ಸಾಬೀತು ಪಡಿಸಿದ್ದಾರೆ. ಇದರ ಜತೆಯಲ್ಲೇ ಪರಿಪೂರ್ಣ, ಸ್ವಸ್ಥ ಹಾಗೂ ಜ್ಞಾನಭರಿತ ಸಮಾಜ ನಿರ್ಮಾಣದಲ್ಲಿ ಮಹಿಳೆಯ ಪಾತ್ರ ಮಹತ್ತರ ಎಂದು ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್ ಡಿಸೋಜ ಅಭಿಪ್ರಾಯಿಸಿದ್ದಾರೆ.
ಅವರು ಇಂದು ನಗರದ ರಾಜ್ಯ ಸರಕಾರಿ ನೌಕರರ ಸಭಾಭವನದಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ದ.ಕ. ಜಿಲ್ಲೆಯಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಅತ್ಯುತ್ತಮ ಅಂಗನವಾಡಿ ಕಾರ್ಯಕರ್ತೆಯಾಗಿ ಆಯ್ಕೆಯಾಗಿರುವ ಜಿಲ್ಲೆಯ ಸಾಧಕ ಮಹಿಳೆಯನ್ನು ಸನ್ಮಾನಿಸಲಾಯಿತು.
ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುವ ಬೆಳ್ತಂಗಡಿ ಶಿಶು ಅಭಿವೃದ್ಧಿ ಕೇಂದ್ರದ ಕುಂಡದಬೆಟ್ಟು ಅಂಗನವಾಡಿಯ ಜಾನಕಿ, ಸುಳ್ಯ ಬಳ್ಪ ಅಂಗನವಾಡಿಯ ಮೋಹಿನಿ, ಬಗಂಬಿಲದ ಪುಷ್ಪಾ ಕುಮಾರಿ ಹಾಗೂ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವ ಬಂಟ್ವಾಳ ಶಂಭೂರಿನ ಪ್ರೇಮಾರನ್ನು ವೇದಿಕೆಯಲ್ಲಿದ್ದ ಅತಿಥಿಗಳು ಗೌರವಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಾಧೀಶ ಮಲ್ಲನಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉದ್ಘಾಟನಾ ಸಮಾರಂಭಕ್ಕೆ ಮೊದಲು ಆಳ್ವಾಸ್ ಕಾಲೇಜಿನ ಸಮಾಜ ಕಾರ್ಯ ಸ್ನಾತಕೋತ್ತರ ವಿಭಾಗದ ಪ್ರೊ.ಶೆರ್ಲಿ ಟಿ. ಬಾಬು ಭ್ರೂಣ ಹತ್ಯೆ ಕುರಿತು ಮಾಹಿತಿ ನೀಡಿದರು.
ದ.ಕ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಿ, ಜಿಲ್ಲಾ ಸ್ತ್ರೀ ಶಕ್ತಿ ಒಕ್ಕೂಟ ಹಾಗೂ ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟದ ಆಶ್ರಯದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಸುಂದರ ಪೂಜಾರಿ ಸ್ವಾಗತಿಸಿದರು. ಶೋಭಾ ಕಾರ್ಯಕ್ರಮ ನಿರೂಪಿಸಿದರು