ನಂ.1 ಬೌಲರ್ ಸ್ಥಾನ ಹಂಚಿಕೊಂಡ ಅಶ್ವಿನ್,ಜಡೇಜ

Update: 2017-03-08 09:00 GMT

ದುಬೈ, ಮಾ.8: ಭಾರತದ ಇಬ್ಬರು ಸ್ಪಿನ್ ಬೌಲರ್‌ಗಳಾದ ರವಿಚಂದ್ರನ್ ಅಶ್ವಿನ್ ಹಾಗೂ ರವೀಂದ್ರ ಜಡೇಜ ಬುಧವಾರ ಬಿಡುಗಡೆಯಾದ ಐಸಿಸಿ ಟೆಸ್ಟ್ ಬೌಲರ್ ರ್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನವನ್ನು ಹಂಚಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಮಂಗಳವಾರ ಕೊನೆಗೊಂಡ ಎರಡನೆ ಟೆಸ್ಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಜಡೇಜ ಐಸಿಸಿ ಟೆಸ್ಟ್ ಬೌಲರ್‌ಗಳ ರ್ಯಾಂಕಿಂಗ್‌ನಲ್ಲಿ ಭಡ್ತಿ ಪಡೆದಿದ್ದು, ಅಶ್ವಿನ್‌ರೊಂದಿಗೆ ನಂ.1 ಸ್ಥಾನ ಹಂಚಿಕೊಂಡರು.

ಜಡೇಜ ಮೊದಲ ಇನಿಂಗ್ಸ್‌ನಲ್ಲಿ 63 ರನ್‌ಗೆ 6 ವಿಕೆಟ್‌ಗಳ ಸಹಿತ 2ನೆ ಪಂದ್ಯದಲ್ಲಿ ಒಟ್ಟು ಏಳು ವಿಕೆಟ್‌ಗಳನ್ನು ಕಬಳಿಸಿದ್ದರು. ಈ ಸಾಧನೆಯ ಹಿನ್ನೆಲೆಯಲ್ಲಿ ವೃತ್ತಿಜೀವನದಲ್ಲಿ ಮೊದಲ ಬಾರಿ ಐಸಿಸಿ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನ ತಲುಪಿದ್ದಾರೆ.

2008ರ ಎಪ್ರಿಲ್‌ನಲ್ಲಿ ಇಬ್ಬರು ಬೌಲರ್‌ಗಳು ಅಗ್ರ ಸ್ಥಾನವನ್ನು ಹಂಚಿಕೊಂಡಿದ್ದರು. ದಕ್ಷಿಣ ಆಫ್ರಿಕದ ಡೇಲ್ ಸ್ಟೇಯ್ನಿ ಹಾಗೂ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಅಗ್ರ ಸ್ಥಾನ ಪಡೆದಿದ್ದರು.

ಬೆಂಗಳೂರು ಟೆಸ್ಟ್ ಪಂದ್ಯದಲ್ಲಿ ಅಶ್ವಿನ್ ಕೂಡ ಅಮೋಘ ಬೌಲಿಂಗ್ ಮಾಡಿದ್ದರು. ಒಟ್ಟು 8 ವಿಕೆಟ್‌ಗಳನ್ನು ಕಬಳಿಸಿದ್ದ ಅಶ್ವಿನ್ ಸ್ಪಿ ದಂತಕತೆ ಬಿಶನ್ ಸಿಂಗ್ ಬೇಡಿ(266 ವಿಕೆಟ್) ದಾಖಲೆಯನ್ನು ಮುರಿದಿದ್ದರು. ಒಟ್ಟು 269 ವಿಕೆಟ್‌ಗಳನ್ನು ಗಳಿಸಿ ಭಾರತದ ಪರ ಗರಿಷ್ಠ ಟೆಸ್ಟ್ ವಿಕೆಟ್ ಪಡೆದ 5ನೆ ಬೌಲರ್ ಎನಿಸಿಕೊಂಡಿದ್ದರು.

ಎರಡನೆ ಟೆಸ್ಟ್‌ನಲ್ಲಿ ಕೇವಲ 27 ರನ್ ಗಳಿಸಿದ್ದ ಭಾರತದ ನಾಯಕ ವಿರಾಟ್ ಕೊಹ್ಲಿ ದಾಂಡಿಗರ ರ್ಯಾಂಕಿಂಗ್‌ನಲ್ಲಿ ಎರಡನೆ ಸ್ಥಾನವನ್ನು ಇಂಗ್ಲೆಂಡ್‌ನ ಜೋ ರೂಟ್‌ಗೆ ಬಿಟ್ಟುಕೊಟ್ಟಿದ್ದಾರೆ. ರೂಟ್ ಇದೀಗ ಕೊಹ್ಲಿಗಿಂತ ಒಂದು ಅಂಕ ಮುಂದಿದ್ದಾರೆ.

2ನೆ ಟೆಸ್ಟ್‌ನಲ್ಲಿ 17 ಹಾಗೂ 92 ರನ್ ಗಳಿಸಿದ್ದ ಚೇತೇಶ್ವರ ಪೂಜಾರ 5 ಸ್ಥಾನ ಭಡ್ತಿ ಪಡೆದು ಆರನೆ ರ್ಯಾಂಕಿಗೆ ತಲುಪಿದ್ದಾರೆ. 17 ಹಾಗೂ 52 ರನ್ ಗಳಿಸಿದ್ದ ಅಜಿಂಕ್ಯ ರಹಾನೆ 2 ಸ್ಥಾನ ಭಡ್ತಿ ಪಡೆದು 15ನೆ ರ್ಯಾಂಕಿಗೆ ತಲುಪಿದ್ದಾರೆ.

‘ಪಂದ್ಯಶ್ರೇಷ್ಠ’ ಕೆ.ಎಲ್. ರಾಹುಲ್ 90 ಹಾಗೂ 51 ರನ್ ಗಳಿಸಿದ್ದ ಹಿನ್ನೆಲೆಯಲ್ಲಿ 23 ಸ್ಥಾನ ಭಡ್ತಿ ಪಡೆದು 23ನೆ ಸ್ಥಾನಕ್ಕೆ ಭಡ್ತಿ ಪಡೆದಿದ್ದಾರೆ.

ಬ್ಯಾಟ್ಸ್‌ಮನ್‌ಗಳ ರ್ಯಾಂಕಿಂಗ್‌ನಲ್ಲಿ ಆಸ್ಟ್ರೇಲಿಯದ ನಾಯಕ ಸ್ಟೀವ್ ಸ್ಮಿತ್ ನಂ.1 ಸ್ಥಾನ ಉಳಿಸಿಕೊಂಡಿದ್ದಾರೆ.

ದ್ವಿತೀಯ ಟೆಸ್ಟ್‌ನಲ್ಲಿ ಜಯ ಸಾಧಿಸಿರುವ ಭಾರತ ಐಸಿಸಿ ಟೆಸ್ಟ್ ಟೀಮ್ ರ್ಯಾಂಕಿಂಗ್‌ನಲ್ಲಿ ಎ.1ಕ್ಕೆ ಮೊದಲು ಅಗ್ರ ಸ್ಥಾನ ಪಡೆದಿದೆ. ಈ ಮೂಲಕ 1 ಮಿಲಿಯನ್ ಡಾಲರ್ ನಗದು ಬಹುಮಾನಕ್ಕೆ ಅರ್ಹತೆ ಪಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News