ಡರೆನ್ ಸಮ್ಮಿ ‘ಥರ್ಡ್ ಕ್ಲಾಸ್’ ಆಟಗಾರ: ಇಮ್ರಾನ್ ಖಾನ್

Update: 2017-03-08 09:56 GMT

 ಕರಾಚಿ, ಮಾ.8: ದೇಶದಲ್ಲಿ ಭದ್ರತೆಯ ಭೀತಿಯಿರುವ ಹೊರತಾಗಿಯೂ ಪಿಸಿಬಿ ಆಯೋಜಿಸಿದ್ದ ಪಾಕಿಸ್ತಾನ ಸೂಪರ್ ಲೀಗ್(ಪಿಎಸ್‌ಎಲ್) ಫೈನಲ್ ಪಂದ್ಯವನ್ನು ಲಾಹೋರ್‌ನ ಗಡ್ಡಾಫಿ ಸ್ಟೇಡಿಯಂನಲ್ಲಿ ಆಡಿದ್ದ ಅಂತಾರಾಷ್ಟ್ರೀಯ ಆಟಗಾರರು ‘ಥರ್ಡ್‌ಕ್ಲಾಸ್’ ಹಾಗೂ ಅಷ್ಟೇನೂ ಪ್ರಸಿದ್ಧಿಯಲ್ಲಿಲ್ಲದವರು ಎಂದು ಪಾಕಿಸ್ತಾನ ಕ್ರಿಕೆಟ್ ದಂತಕತೆ ಇಮ್ರಾನ್ ಖಾನ್ ಹೇಳಿರುವ ವೀಡಿಯೊವೊಂದು ಸೋರಿಕೆಯಾಗಿದೆ.

ಇಮ್ರಾನ್ ಖಾನ್ ಹೇಳಿಕೆಯನ್ನು ಮೊಬೈಲ್ ಫೋನ್‌ನಲ್ಲಿ ಸೆರೆ ಹಿಡಿದಿದ್ದ ಸ್ಥಳೀಯ ಪತ್ರಕರ್ತರೊಬ್ಬರು ವೀಡಿಯೊವನ್ನು ಆನ್‌ಲೈನ್‌ನಲ್ಲಿ ಹಾಕಿದ್ದರು. ಆ ವಿಡಿಯೋ ವೈರಲ್ ಆಗಿದ್ದು, ಇಮ್ರಾನ್ ಖಾನ್ ಬೆಂಬಲಿಗರು ಸೇರಿದಂತೆ ಎಲ್ಲ ಕ್ರಿಕೆಟ್ ಪ್ರೇಮಿಗಳಿಂದ ತೀವ್ರ ಆಕ್ರೋಶವ್ಯಕ್ತವಾಗಿದೆ.

 ಪ್ರಧಾನಮಂತ್ರಿ ನವಾಝ್ ಶರೀಫ್‌ರನ್ನು ಕಟುವಾಗಿ ಟೀಕಿಸುತ್ತಿರುವ ಪ್ರಮುಖ ರಾಜಕೀಯ ಪಕ್ಷವನ್ನು ಮುನ್ನಡೆಸುತ್ತಿರುವ 64ರ ಹರೆಯದ ಖಾನ್ ಪಿಎಸ್‌ಎಲ್ ಟ್ವೆಂಟಿ-20 ಟೂರ್ನಿಯ ಫೈನಲ್‌ನ್ನು ಭದ್ರತೆ ಭೀತಿಯಿರುವ ಲಾಹೋರ್‌ನ ಬದಲಿಗೆ ಲೀಗ್, ಸೆಮಿಫೈನಲ್‌ ಆಯೋಜಿಸಿದ್ದ ಯುಎಇನಲ್ಲಿ ಆಯೋಜಿಸಬೇಕೆಂದು ಒತ್ತಾಯಿಸಿದ್ದರು.

 ಟ್ವಿಟರ್‌ನಲ್ಲಿ ತನ್ನ ನಿಲುವನ್ನು ಬದಲಿಸಿದ್ದ ಖಾನ್ ಲಾಹೋರ್‌ನಲ್ಲಿ ನಡೆದಿದ್ದ ಟೂರ್ನಿಯಲ್ಲಿ ಭಾಗವಹಿಸಿದ್ದವರಿಗೆ ಅಭಿನಂದನೆ ಸಲ್ಲಿಸಿದ್ದರು. ಪಾಕ್ 2009ರಲ್ಲಿ ಶ್ರೀಲಂಕಾ ತಂಡದ ಮೇಲೆ ಉಗ್ರಗಾಮಿಗಳು ದಾಳಿ ನಡೆಸಿದ ಬಳಿಕ ಲಾಹೋರ್‌ನಲ್ಲಿ ಯಾವುದೇ ಮುಖ್ಯ ಟೂರ್ನಿಯನ್ನು ಆಯೋಜಿಸಿರಲಿಲ್ಲ.

‘‘ಟೂರ್ನಿಯಲ್ಲಿ ಆಡಲು ಒಪ್ಪಿಕೊಂಡು ಪಾಕ್‌ಗೆ ಆಗಮಿಸಿದ್ದ 9 ವಿದೇಶಿ ಆಟಗಾರರ ಹೆಸರು ನನಗೆ ಗೊತ್ತಿಲ್ಲ. ನನ್ನ ಪ್ರಕಾರ ಅವರೆಲ್ಲರೂ ಥರ್ಡ್‌ಕ್ಲಾಸ್ ಆಟಗಾರರು. ಆಫ್ರಿಕ ಸಹಿತ ಇತರ ದೇಶಗಳಿಂದ ಕೆಲವು ಆಟಗಾರರನ್ನು ಕರೆದುಕೊಂಡು ಬಂದು ಅವರನ್ನು ವಿದೇಶಿ ಆಟಗಾರರೆಂದು ಬಿಂಬಿಸಲಾಗಿದೆ. ಕ್ರಿಸ್ ಗೇಲ್ ಹಾಗೂ ಕೆವಿನ್ ಪೀಟರ್ಸನ್ ಟೂರ್ನಿಯಲ್ಲಿ ಆಡಿದ್ದರೆ, ಅವರನ್ನು ಅಂತಾರಾಷ್ಟ್ರೀಯ ಆಟಗಾರರೆಂದು ನಾನು ಒಪ್ಪಿಕೊಳ್ಳುವೆ’’ ಎಂದು ಖಾನ್ ಹೇಳಿದ್ದಾರೆ.

ಖಾನ್ ಹೇಳಿಕೆಗೆ ಟ್ವಿಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಪಾಕ್ ಅಭಿಮಾನಿಗಳು ಸ್ವಾರ್ಥಭರಿತ ನಾಯಕರಿಗಿಂತ ದೇಶದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮರಳಲು ಪ್ರಯತ್ನಪಟ್ಟಿರುವ ಆಟಗಾರರೇ ಎಷ್ಟೊ ವಾಸಿ ಎಂದು ರಬಿಯಾ ನವೀದ್ ಎಂಬಾ ಟ್ವೀಟ್ ಮಾಡಿದ್ದಾನೆ.

ನಾನು ನಿಮ್ಮ ಕಟ್ಟಾ ಅಭಿಮಾನಿ. ಆದರೆ, ನೀವು ಮಿಲಿಯನ್ ಜನರಿಗೆ ಮಾಡಿದಷ್ಟು ನೋವನ್ನು ನನಗೂ ಮಾಡಿದ್ದೀರಿ. ನಿಮ್ಮ ಬುದ್ದಿ ಎಲ್ಲಿದೆ ಎಂದು ಇನ್ನೋರ್ವ ಅಭಿಮಾನಿ ಟ್ವಿಟ್ ಮಾಡಿದ್ದಾನೆ.

 ವಿಂಡೀಸ್‌ಗೆ 2 ಬಾರಿ ಟ್ವೆಂಟಿ-20 ಚಾಂಪಿಯನ್‌ಶಿಪ್‌ನ್ನು ಗೆದ್ದುಕೊಟ್ಟಿರುವ ಡರೆನ್ ಸಮ್ಮಿ ಪೇಶಾವರ ಝೂಲ್ಮಿ ತಂಡ ಚಾಂಪಿಯನ್ ಆಗಲು ತಂಡಕ್ಕೆ ಮಾರ್ಗದರ್ಶನ ನೀಡಿದ್ದು, ಸಮ್ಮಿ ಉತ್ತಮ ಇಂಟರ್‌ನ್ಯಾಶನಲ್ ಆಟಗಾರರು ಎಂದು ಇಮ್ರಾನ್ ಹೇಳಿಕೆಗೆ ಕೆಲವು ಅಭಿಮಾನಿಗಳು ಆಕ್ಷೇಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News