ಕುಟುಂಬದ ಪಾಲಿನ 'ಕಲ್ಪವೃಕ್ಷ' ಈ ಎಳೆನೀರು ವ್ಯಾಪಾರಿ ಮಹಿಳೆ

Update: 2017-03-08 10:42 GMT

ಮೂಡುಬಿದಿರೆ, ಮಾ.8: ಆಧುನಿಕ ಯುಗದಲ್ಲಿ ಮಹಿಳೆಯರು ಪುರುಷರಿಗೆ ತಾವೇನೂ ಕಮ್ಮಿಯಿಲ್ಲ ಎಂದು ಸಾಬೀತುಪಡಿಸುತ್ತಿದ್ದಾರೆ. ಉದ್ಯೋಗ, ಉದ್ದಿಮೆ, ರಕ್ಷಣಾ ಕ್ಷೇತ್ರ, ಆಡಳಿತ ಎಲ್ಲ ರಂಗಗಳಲ್ಲೂ ಮಹಿಳೆಗೆ ಸಾಟಿಯಾಗಿ ನಿಲ್ಲಲು ಪುರುಷರಿಗೇ ಸಾಧ್ಯವಾಗದಂತಹ ದಿನಗಳು ಹತ್ತಿರದಲ್ಲಿವೆ ಎಂದರೂ ತಪ್ಪಾಗಲಾರದು. ಸಣ್ಣ ವ್ಯಾಪಾರ, ಬೀದಿಬದಿಯ ವ್ಯಾಪಾರಗಳಲ್ಲಿ ಮಹಿಳೆಯರು ಪಾಲು ಇದೆ. ಈ ರೀತಿ ಬೀದಿಬದಿಯ ಮರದ ನೆರಳಲ್ಲಿ ಎಳೆನೀರು ಮಾರಾಟ ಮಾಡುವ ಮೂಡುಬಿದಿರೆಯ ಜಯಶ್ರೀ ಕೂಡಾ ಒಬ್ಬರು.

ಜಯಶ್ರೀ ಪುತ್ತಿಗೆ ಗ್ರಾಮದ ಮಜ್ಜಿಗುರಿ ನಿವಾಸಿ. ಇವರು ಕಳೆದ ಒಂದು ವರ್ಷ ಮೂರು ತಿಂಗಳಿಂದ ಮೂಡುಬಿದಿರೆಯ ವಿದ್ಯಾಗಿರಿ ಸಮೀಪದ ಹಂಡೇಲ್ ತಿರುವಿನಲ್ಲಿ ಎಳೆನೀರು ವ್ಯಾಪಾರ ಮಾಡುತ್ತಿದ್ದಾರೆ. ದಿನಕ್ಕೆ 150 ರಿಂದ 200 ಎಳೆನೀರು ವ್ಯಾಪಾರ ಮಾಡಿ ಒಂದು ಸಾವಿರ ರೂ.ವರೆಗೂ ವರಮಾನ ಪಡೆಯುತ್ತಿದ್ದಾರೆ. ಬೆಳಗ್ಗೆ 8 ಗಂಟೆಗೆ ಶುರುವಾಗುವ ಇವರ ವ್ಯಾಪಾರ ಸಂಜೆ 7 ಗಂಟೆಯವರೆಗೆ ಇರುತ್ತದೆ.

ಈ ರಸ್ತೆಯಾಗಿ ವಾಹನ ಸವಾರರು, ಸ್ಥಳೀಯರು ಜಯಶ್ರೀ ಪರಿಶ್ರಮ ಹಾಗೂ ನಾಜೂಕಾಗಿ ಕತ್ತಿಯಿಂದ ಕೆತ್ತಿ ನೀಡುವ ಎಳೆನೀರನ್ನು ಮೆಚ್ಚುಗೆಯಿಂದ ಕುಡಿಯುತ್ತಾರೆ. ಸೂಚಿಸುತ್ತಾರೆ. ಎಳೆನೀರು ಸಾಗಾಟಕ್ಕೆಂದು ಒಂದು ಟೆಂಪೊ ರಿಕ್ಷಾವನ್ನೂ ಇವರು ಇಟ್ಟುಕೊಂಡಿದ್ದಾರೆ.

‘‘ವ್ಯಾಪಾರ ಮಾಡುತ್ತಾ ಸಮಯ ಕಳೆದುಹೋಗುವುದೇ ತಿಳಿಯುವುದಿಲ್ಲ. ಆಸಕ್ತಿಯಿಂದ ಈ ಕೆಲಸ ಮಾಡುತ್ತಿದ್ದೇನೆ. ಬರುವ ಗ್ರಾಹಕರ ಜೊತೆ ಪ್ರಾಮಾಣಿಕ ವ್ಯವಹಾರ ನಡೆಸುವುದರಿಂದ ಅವರಿಂದಲೂ ಒಳ್ಳೆಯ ಸ್ಪಂದನೆ ದೊರೆಯುತ್ತಿದೆ’’ ಎನ್ನುತ್ತಾರೆ ಜಯಶ್ರೀ.

ಇವರ ಪತಿ ದಯಾನಂದ ಮೂಡುಬಿದಿರೆಯ ವಿದ್ಯಾಗಿರಿ ಪಾರ್ಕ್‌ನಲ್ಲಿ ಆಟೋ ಚಾಲಕರಾಗಿ ದುಡಿಯುತ್ತಿದ್ದಾರೆ. ತನ್ನ ಪತ್ನಿಯ ದುಡಿಮೆಗೆ ಪ್ರೋತ್ಸಾಹ ನೀಡುವ ದಯಾನಂದರಿಗೆ ಜಯಶ್ರೀಯ ಈ ಸಂಪಾದನೆಯ ಮಾರ್ಗದ ಬಗ್ಗೆ ಹೆಮ್ಮೆ ವ್ಯಕ್ತಪಡಿಸುತ್ತಾರೆ.

ಜಯಶ್ರೀ ಇಷ್ಟಕ್ಕೆ ಸುಮ್ಮನಾಗುವುದಿಲ್ಲ. ಎಳೆನೀರು ವ್ಯಾಪಾರ ಮಾಡುತ್ತಲೇ ಗ್ರಾಹಕರಿಲ್ಲದ ಹೊತ್ತಿನಲ್ಲಿ ಅಲ್ಲೇ ಬೀಡಿ ಕೂಡಾ ಕಟ್ಟುತ್ತಾರೆ. 9ನೆ ತರಗತಿಯವರೆಗೆ ಕಲಿತಿರುವ ಜಯಶ್ರೀ ವ್ಯಾಪಾರದ ಲಾಭನಷ್ಟಗಳ ಲೆಕ್ಕಾಚಾರಗಳನ್ನು ಯಶಸ್ವಿಯಾಗಿ ನಿಭಾಯಿಸುವುತ್ತಾರೆ. ಮೂವರು ಗಂಡು ಮಕ್ಕಳನ್ನು ಹೊಂದಿರುವ ಈ ಕುಟುಂಬ ಕಾಯಕವನ್ನೇ ಹವ್ಯಾಸವನ್ನಾಗಿಸಿಕೊಂಡು ಉಳಿದವರಿಗೆ ಮಾದರಿಯಾಗಿದೆ.

Writer - -ಹಾರಿಸ್ ಹೊಸ್ಮಾರ್

contributor

Editor - -ಹಾರಿಸ್ ಹೊಸ್ಮಾರ್

contributor

Similar News